ಕಿಮ್ಸ್‌ ವೈದ್ಯಕೀಯ ಅಧೀಕ್ಷಕ ಹುದ್ದೆ 12 ದಿನಗಳಿಂದ ಖಾಲಿ!

| Published : Feb 11 2024, 01:46 AM IST / Updated: Feb 11 2024, 03:39 PM IST

 Kims
ಕಿಮ್ಸ್‌ ವೈದ್ಯಕೀಯ ಅಧೀಕ್ಷಕ ಹುದ್ದೆ 12 ದಿನಗಳಿಂದ ಖಾಲಿ!
Share this Article
  • FB
  • TW
  • Linkdin
  • Email

ಸಾರಾಂಶ

ಇಲ್ಲಿ ಜ. 30ರ ವರೆಗೆ ಡಾ. ಅರುಣಕುಮಾರ ಚವ್ಹಾಣ ವೈದ್ಯಕೀಯ ಅಧೀಕ್ಷಕರಾಗಿದ್ದರು. ಧಾರವಾಡ ಡಿಮ್ಹಾನ್ಸ್‌ಗೆ ಅವರನ್ನು ವರ್ಗಾಯಿಸಿ ಸರ್ಕಾರ ಆದೇಶಿಸಿತು. ಅಂದಿನಿಂದ ಹುದ್ದೆ ಖಾಲಿ ಇದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ: ಉತ್ತರ ಕರ್ನಾಟಕ ಪಾಲಿನ ಸಂಜೀವಿನಿ ಎಂದೇ ಹೆಸರು ಪಡೆದಿರುವ ಕಿಮ್ಸ್‌ನಲ್ಲಿ ಕಳೆದ 12 ದಿನಗಳಿಂದ ವೈದ್ಯಕೀಯ ಅಧೀಕ್ಷಕ ಹುದ್ದೆಯೇ ಖಾಲಿಯಾಗಿದೆ.

 ಸಿನಿಯಾರಿಟಿ ಲಿಸ್ಟ್‌ ಕಳುಹಿಸಿದರೂ ಸರ್ಕಾರ ಮಾತ್ರ ಈ ವರೆಗೂ ನೇಮಕ ಮಾಡುತ್ತಿಲ್ಲ. ಹೀಗಾಗಿ, ಈ ಹುದ್ದೆ ಸೇರಿದಂತೆ ಇನ್ನೆರಡು ಹುದ್ದೆಗಳನ್ನೇ ನಿರ್ದೇಶಕರೇ ನಿಭಾಯಿಸಬೇಕಿದೆ. ಇದರಿಂದಾಗಿ ಅವರ ಕಾರ್ಯದ ಒತ್ತಡ ಹೆಚ್ಚಾಗುತ್ತಿದ್ದು, ಕಿಮ್ಸ್‌ನ ಆಡಳಿತದ ಮೇಲೆ ಪರಿಣಾಮವೂ ಬೀರುತ್ತಿದೆ.

2000ಕ್ಕೂ ಅಧಿಕ ಹಾಸಿಗೆಯುಳ್ಳ ಆಸ್ಪತ್ರೆಯೆಂದರೆ ಉತ್ತರ ಕರ್ನಾಟಕದಲ್ಲಿ ಅದು ಕಿಮ್ಸ್‌ ಮಾತ್ರ. ಕನಿಷ್ಠವೆಂದರೂ 1800 ಒಳರೋಗಿಗಳಿರುವುದು ಮಾಮೂಲು. ಇನ್ನು ಪ್ರತಿನಿತ್ಯ 1300- 1500ಕ್ಕೂ ಅಧಿಕ ಹೊರರೋಗಿಗಳು ಚಿಕಿತ್ಸೆ ಪಡೆದುಕೊಳ್ಳುತ್ತಾರೆ.

ಕಿಮ್ಸ್‌ ಬರೀ ಹುಬ್ಬಳ್ಳಿ-ಧಾರವಾಡಕ್ಕಷ್ಟೇ ಸೀಮಿತವಾದ ಆಸ್ಪತ್ರೆಯಲ್ಲ. ಇಡೀ ಉತ್ತರ ಕರ್ನಾಟಕದ ಜಿಲ್ಲೆಗಳಿಂದಲೇ ಇಲ್ಲಿಗೆ ಬರುತ್ತಾರೆ. ಈ ಭಾಗದಲ್ಲಿ ಎಲ್ಲಿ ಅಪಘಾತವಾದರೂ ಮೊದಲು ನೆನಪಿಗೆ ಬರುವುದು ಹುಬ್ಬಳ್ಳಿ ಕಿಮ್ಸ್‌.

ಕೊರೋನಾದಲ್ಲಂತೂ ಕಿಮ್ಸ್‌ ನಿರ್ವಹಿಸಿದ ಜವಾಬ್ದಾರಿ ಅಷ್ಟಿಷ್ಟಲ್ಲ. ಅದಕ್ಕಾಗಿಯೇ ಈ ಆಸ್ಪತ್ರೆಯನ್ನು ಬಡವರ ಪಾಲಿನ ಸಂಜೀವಿನಿ ಎಂದೇ ಕರೆಯಲಾಗುತ್ತದೆ.

ನಿರ್ದೇಶಕರ ಹುದ್ದೆ ಎಷ್ಟು ಪ್ರಾಮುಖ್ಯತೆಯನ್ನು ಪಡೆದಿದೆಯೋ ಅಷ್ಟೇ ಪ್ರಾಮುಖ್ಯತೆಯನ್ನು ಪಡೆದಿರುವ ಹುದ್ದೆಯೆಂದರೆ ವೈದ್ಯಕೀಯ ಅಧೀಕ್ಷಕ ಹುದ್ದೆ. 

ಕಿಮ್ಸ್‌ನಲ್ಲಿ ಏನೇ ಸಮಸ್ಯೆಯಾದರೂ ವಿಐಪಿ ಪೇಶೆಂಟ್‌ ಬರಲಿ, ಬಡ ರೋಗಿಯೇ ಬರಲಿ, ಯಾವುದೇ ಸೌಲಭ್ಯದ ಸಮಸ್ಯೆ ಎದುರಾದರೂ ಮೊದಲು ವೈದ್ಯಕೀಯ ಅಧೀಕ್ಷಕರೇ ಧಾವಿಸಬೇಕು. 

ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಕಿಮ್ಸ್‌ನ ಪ್ರತಿಯೊಂದು ಆಗುಹೋಗುಗಳಿಗೂ ವೈದ್ಯಕೀಯ ಅಧೀಕ್ಷಕರೇ ಹೋಣೆಯಾಗಿರುತ್ತಾರೆ. ನಿರ್ದೇಶಕರ ನಂತರದ ಸ್ಥಾನ ವೈದ್ಯಕೀಯ ಅಧೀಕ್ಷಕರದ್ದು.

31ರಿಂದ ಖಾಲಿ: ಇಲ್ಲಿ ಜ. 30ರ ವರೆಗೆ ಡಾ. ಅರುಣಕುಮಾರ ಚವ್ಹಾಣ ವೈದ್ಯಕೀಯ ಅಧೀಕ್ಷಕರಾಗಿದ್ದರು. ಧಾರವಾಡ ಡಿಮ್ಹಾನ್ಸ್‌ಗೆ ಅವರನ್ನು ವರ್ಗಾಯಿಸಿ ಸರ್ಕಾರ ಆದೇಶಿಸಿತು. 

ಹೀಗಾಗಿ, ತಮಗಿದ್ದ ಜವಾಬ್ದಾರಿಯನ್ನು ಅರುಣಕುಮಾರ ಅವರು ನಿರ್ದೇಶಕ ಎಸ್‌.ಎಫ್‌. ಕಮ್ಮಾರ ಅವರಿಗೆ ನೀಡಿ ಇಲ್ಲಿಂದ ತೆರಳಿದರು. ಆಗಿನಿಂದಲೂ ಈ ಜವಾಬ್ದಾರಿ ನಿರ್ದೇಶಕರ ಹೆಗಲೇರಿದೆ.

ಈ ಎರಡು ಹುದ್ದೆಗಳಷ್ಟೇ ಅಲ್ಲದೇ ಎಲಬು ಕೀಲುಗಳ ವಿಭಾಗದ ಮುಖ್ಯಸ್ಥರ ಹುದ್ದೆ ಕೂಡ ನಿರ್ದೇಶಕರ ಬಳಿಯೇ ಇದೆ. ಇನ್ನು ಪಿಎಂಆರ್‌ನ ಮುಖ್ಯಸ್ಥರ ಹುದ್ದೆ ಕೂಡ ಇಷ್ಟು ದಿನ ನಿರ್ದೇಶಕರ ಬಳಿಯೇ ಇತ್ತು.

 ಶನಿವಾರವಷ್ಟೇ ಬೇರೆ ಹಿರಿಯ ತಜ್ಞ ವೈದ್ಯರಿಗೆ ಪ್ರಭಾರಿಯಾಗಿ ನೀಡಲಾಗಿದೆ. ಇದೀಗ ಮೂರು ಹುದ್ದೆಗಳನ್ನು ನಿರ್ದೇಶಕರೇ ನಿಭಾಯಿಸುತ್ತಿದ್ದಾರೆ.

ಹಾಗಂತ ಕಿಮ್ಸ್‌ ವೈದ್ಯಕೀಯ ಅಧೀಕ್ಷಕ ಹುದ್ದೆಯ ನೇಮಕಕ್ಕೆ ಕ್ರಮ ಕೈಗೊಂಡಿಲ್ಲ ಅಂತೇನೂ ಇಲ್ಲ. ವೈದ್ಯಕೀಯ ಅಧೀಕ್ಷಕರ ಹುದ್ದೆಗೆ ಅರ್ಹವಿರುವ 25 ಜನ ಹಿರಿಯ ವೈದ್ಯರ ಪಟ್ಟಿ ಮಾಡಿ ಸರ್ಕಾರಕ್ಕೆ ಕಳುಹಿಸಲಾಗಿದೆಯಂತೆ.

 ಆದರೆ, ಸರ್ಕಾರ ಮಾತ್ರ ಈ ವರೆಗೂ ನೇಮಕ ಮಾಡುವ ಗೋಜಿಗೆ ಹೋಗಿಲ್ಲ. ಇದರಿಂದ ಎಲ್ಲ ಹುದ್ದೆಗಳನ್ನು ತಾವೇ ಇಟ್ಟುಕೊಂಡು ನಿರ್ದೇಶಕರು ನಿಭಾಯಿಸುವಂತಾಗಿದೆ.

ಆಡಳಿತಕ್ಕೇನೂ ಸಮಸ್ಯೆಯಾಗಿಲ್ಲ ಎಂದು ಹೇಳಲಾಗುತ್ತಿದೆಯಾದರೂ ಪ್ರತಿಯೊಂದು ವಿಷಯಕ್ಕೆ ನಿರ್ದೇಶಕರೇ ನಿಭಾಯಿಸುವುದು ಅವರಿಗೂ ಕಷ್ಟವಾಗುತ್ತಿದೆ ಎಂಬುದು ಮಾತ್ರ ಸ್ಪಷ್ಟ.

ಇನ್ನಾದರೂ ವೈದ್ಯಕೀಯ ಅಧೀಕ್ಷಕರ ಹುದ್ದೆಗಳಿಗೆ ಅರ್ಹರಿರುವ ವೈದ್ಯರ ಹೆಸರನ್ನು ಅಂತಿಮಗೊಳಿಸಿ ನೇಮಕ ಮಾಡಬೇಕು. ಇದರಿಂದ ಕಿಮ್ಸ್‌ನ ಆಡಳಿತ ಇನ್ನಷ್ಟು ಸುಧಾರಿಸಲು ಅನುಕೂಲವಾಗುತ್ತದೆ ಎಂಬುದು ಪ್ರಜ್ಞಾವಂತರ ಅಭಿಮತ.

ಇನ್ನೆರಡ್ಮೂರು ದಿನಗಳಲ್ಲಿ ಕಿಮ್ಸ್‌ನ ವೈದ್ಯಕೀಯ ಅಧೀಕ್ಷಕ ಹುದ್ದೆಗೆ ಸರ್ಕಾರ ನೇಮಕ ಮಾಡಲಿದೆ. ಸದ್ಯಕ್ಕೇನೂ ಆಡಳಿತದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಎಲ್ಲ ವ್ಯವಸ್ಥೆಯೂ ಸುಸೂತ್ರವಾಗಿ ನಡೆಯುತ್ತಿದೆ ಎಂದು ಕಿಮ್ಸ್‌ ನಿರ್ದೇಶಕ ಎಸ್‌.ಎಫ್‌. ಕಮ್ಮಾರ ತಿಳಿಸಿದ್ದಾರೆ.