ಕಿಮ್ಸ್‌ ವೈದ್ಯಕೀಯ ಅಧೀಕ್ಷಕ ಹುದ್ದೆ 6 ತಿಂಗಳಿಂದ ಖಾಲಿ!

| Published : Jun 25 2024, 12:32 AM IST

ಸಾರಾಂಶ

2000ಕ್ಕೂ ಅಧಿಕ ಹಾಸಿಗೆಯುಳ್ಳ ಆಸ್ಪತ್ರೆಯೆಂದರೆ ಉತ್ತರ ಕರ್ನಾಟಕದಲ್ಲಿ ಅದು ಕಿಮ್ಸ್ ಮಾತ್ರ. ಕನಿಷ್ಠವೆಂದರೂ 1800 ಒಳರೋಗಿಗಳಿರುವುದು ಮಾಮೂಲು. ಇನ್ನು ಪ್ರತಿನಿತ್ಯ 1300-1500ಕ್ಕೂ ಅಧಿಕ ಹೊರರೋಗಿಗಳು ಚಿಕಿತ್ಸೆ ಪಡೆದುಕೊಳ್ಳುತ್ತಾರೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಉತ್ತರ ಕರ್ನಾಟಕ ಸಂಜೀವಿನಿ ಎಂದೇ ಹೆಸರು ಪಡೆದಿರುವ ಕಿಮ್ಸ್‌ನಲ್ಲಿ ಕಳೆದ ಆರು ತಿಂಗಳಿಂದ ವೈದ್ಯಕೀಯ ಅಧೀಕ್ಷಕ ಹುದ್ದೆ ಖಾಲಿಯೇ ಇದೆ. ಈ ವರೆಗೂ ಸರ್ಕಾರ ನೇಮಕ ಮಾಡಿಲ್ಲ.

2000ಕ್ಕೂ ಅಧಿಕ ಹಾಸಿಗೆಯುಳ್ಳ ಆಸ್ಪತ್ರೆಯೆಂದರೆ ಉತ್ತರ ಕರ್ನಾಟಕದಲ್ಲಿ ಅದು ಕಿಮ್ಸ್ ಮಾತ್ರ. ಕನಿಷ್ಠವೆಂದರೂ 1800 ಒಳರೋಗಿಗಳಿರುವುದು ಮಾಮೂಲು. ಇನ್ನು ಪ್ರತಿನಿತ್ಯ 1300-1500ಕ್ಕೂ ಅಧಿಕ ಹೊರರೋಗಿಗಳು ಚಿಕಿತ್ಸೆ ಪಡೆದುಕೊಳ್ಳುತ್ತಾರೆ. ಕಿಮ್ಸ್ ಬರೀ ಹುಬ್ಬಳ್ಳಿ- ಧಾರವಾಡಕ್ಕಷ್ಟೇ ಸೀಮಿತವಾದ ಆಸ್ಪತ್ರೆಯಲ್ಲ. ಇಡೀ ಉತ್ತರ ಕರ್ನಾಟಕದ ಜಿಲ್ಲೆಗಳಿಂದಲೇ ಇಲ್ಲಿಗೆ ಜನರು ಬರುತ್ತಾರೆ. ಈ ಭಾಗದಲ್ಲಿ ಎಲ್ಲಿ ಅಪಘಾತವಾದರೂ ಮೊದಲು ನೆನಪಿಗೆ ಬರುವುದು ಹುಬ್ಬಳ್ಳಿ ಕಿಮ್ಸ್.

ನಿರ್ದೇಶಕರ ಹುದ್ದೆ ಎಷ್ಟು ಪ್ರಾಮುಖ್ಯತೆಯನ್ನು ಪಡೆದಿದೆಯೋ ಅಷ್ಟೇ ಪ್ರಾಮುಖ್ಯತೆಯನ್ನು ಪಡೆದಿರುವ ಹುದ್ದೆಯೆಂದರೆ ವೈದ್ಯಕೀಯ ಅಧೀಕ್ಷಕ ಹುದ್ದೆ. ಕಿಮ್ಸ್‌ನಲ್ಲಿ ಏನೇ ಸಮಸ್ಯೆಯಾದರೂ, ವಿಐಪಿ ಪೇಶೆಂಟ್ ಬರಲಿ, ಬಡ ರೋಗಿಯೇ ಬರಲಿ, ಯಾವುದೇ ಸೌಲಭ್ಯದ ಸಮಸ್ಯೆ ಎದುರಾದರೂ ಮೊದಲು ವೈದ್ಯಕೀಯ ಅಧೀಕ್ಷಕರೇ ಧಾವಿಸಬೇಕು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಕಿಮ್ಸ್‌ನ ಪ್ರತಿಯೊಂದು ಆಗುಹೋಗುಗಳಿಗೂ ವೈದ್ಯಕೀಯ ಅಧೀಕ್ಷಕರೇ ಹೊಣೆಯಾಗಿರುತ್ತಾರೆ. ನಿರ್ದೇಶಕರ ನಂತರದ ಸ್ಥಾನ ವೈದ್ಯಕೀಯ ಅಧೀಕ್ಷಕರದ್ದು.

ಆರು ತಿಂಗಳಿಂದ ಖಾಲಿ:

ಇಲ್ಲಿ 2024ರ ಜ. 30ರ ವರೆಗೆ ಡಾ. ಅರುಣಕುಮಾರ ಚವ್ಹಾಣ ವೈದ್ಯಕೀಯ ಅಧೀಕ್ಷಕರಾಗಿದ್ದರು. ಧಾರವಾಡ ಡಿಮ್ಹಾನ್ಸ್‌ಗೆ ಅವರನ್ನು ವರ್ಗಾಯಿಸಿ ಸರ್ಕಾರ ಆದೇಶಿಸಿತು. ಹೀಗಾಗಿ ತಮಗಿದ್ದ ಜವಾಬ್ದಾರಿಯನ್ನು ಅರುಣಕುಮಾರ ಅವರು ನಿರ್ದೇಶಕ ಎಸ್.ಎಫ್. ಕಮ್ಮಾರ ಅವರಿಗೆ ನೀಡಿ ಇಲ್ಲಿಂದ ತೆರಳಿದರು. ಆಗಿನಿಂದಲೂ ಈ ಜವಾಬ್ದಾರಿ ನಿರ್ದೇಶಕರ ಹೆಗಲೇರಿದೆ. ಈಗಲೂ ಅವರ ಬಳಿಯೇ ಇದೆ. ಎರಡು ಹುದ್ದೆಗಳನ್ನು ಯಾವುದೇ ಬಗೆಯ ಗೊಂದಲ, ಸಮಸ್ಯೆ ಎದುರಾಗದಂತೆ ನಿರ್ವಹಿಸುತ್ತಿದ್ದಾರೆ ಕಮ್ಮಾರ ಅವರು.

ಆದರೆ ಎರಡು ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ ಅಂತಹ ಅವರ ಮೇಲೆ ಬಿಡುವುದು ಎಷ್ಟು ಸರಿ. ಎರಡೆರಡು ಹುದ್ದೆ ನಿಭಾಯಿಸುವುದು ಅಷ್ಟು ಸುಲಭವೇ? ಎಂಬ ಪ್ರಶ್ನೆ ಸಾರ್ವಜನಿಕ ವಲಯದ್ದು.

ಹಾಗಂತ ಅಧೀಕ್ಷಕ ಹುದ್ದೆ ನೇಮಕಕ್ಕೆ ಆಗಿನಿಂದ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಅಂತೇನೂ ಇಲ್ಲ. ಸಿನಿಯಾರಿಟಿ ಆಧಾರದ ಮೇಲೆ ಹಲವು ಹಿರಿಯ ವೈದ್ಯರ ಹೆಸರುಗಳ ಪಟ್ಟಿಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಕಳುಹಿಸಿ ಆಗಲೇ 5 ತಿಂಗಳ ಮೇಲೆಯೇ ಆಗಿದೆ. ಆದರೆ ಮಧ್ಯೆ ಲೋಕಸಭಾ ಚುನಾವಣೆ ಘೋಷಣೆಯಾಯಿತು. ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸರ್ಕಾರ ನೇಮಕ ಮಾಡಲಿಲ್ಲ.

ಇದೀಗ ಲೋಕಸಭೆ ಚುನಾವಣೆ ನೀತಿ ಸಂಹಿತೆ ಮುಗಿದು 15 ದಿನಕ್ಕೂ ಹೆಚ್ಚು ಕಾಲವೇ ಗತಿಸಿದೆ. ಆದರೂ ಈ ವರೆಗೂ ವೈದ್ಯಕೀಯ ಅಧೀಕ್ಷಕ ಹುದ್ದೆಗೆ ಯಾರನ್ನು ನೇಮಕ ಮಾಡುತ್ತಿಲ್ಲ. ಕಿಮ್ಸ್‌ನಲ್ಲಿ ಆಡಳಿತದ ಒತ್ತಡ ನೋಡಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಸೇರಿದಂತೆ ಈ ಭಾಗದ ಶಾಸಕರೆಲ್ಲರೂ ಒಟ್ಟಾಗಿ ಸರ್ಕಾರದ ಮೇಲೆ ಒತ್ತಡ ಹಾಕಿ ಕಿಮ್ಸ್‌ ಅಧೀಕ್ಷಕರನ್ನು ನೇಮಕ ಮಾಡಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ. ಸರ್ಕಾರ ಏನು ಮಾಡುತ್ತದೆಯೋ ಕಾಯ್ದು ನೋಡಬೇಕಷ್ಟೇ!ಕಿಮ್ಸ್‌ನ ವೈದ್ಯಕೀಯ ಅಧೀಕ್ಷಕ ಹುದ್ದೆಗೆ ಸರ್ಕಾರ ಶೀಘ್ರವೇ ನೇಮಕ ಮಾಡಲಿದೆ. ಲೋಕಸಭಾ ಚುನಾವಣೆ ನೀತಿ ಸಂಹಿತಿ ಜಾರಿಯಾಗಿದ್ದರಿಂದ ನೇಮಕ ಆಗಿರಲಿಲ್ಲ. ಇದೀಗ ಶೀಘ್ರದಲ್ಲೇ ಮಾಡಲಿದೆ ಎಂದು ಕಿಮ್ಸ್‌ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ ಹೇಳಿದ್ದಾರೆ.