ಸಾರಾಂಶ
ಕನ್ನಡಪ್ರಭ ವಾರ್ತೆ ಕಾಗವಾಡ
ಕನ್ನಡ ಸಾಹಿತ್ಯ, ಸಂಗೀತಕ್ಕೆ ಪ್ರಪಂಚವನ್ನೇ ಒಗ್ಗೂಡಿಸುವ ಶಕ್ತಿ ಇದೆ. ಅಂತೆಯೇ ಕನ್ನಡ ನಾಡು, ನುಡಿ ಸಾಹಿತ್ಯ, ಸಂಗೀತ ಪರಂಪರೆ ವಿದೇಶದಲ್ಲಿಯೂ ಹಾಸು ಹೊಕ್ಕಾಗಿದೆ ಎನ್ನುವುದಕ್ಕೆ ಈ ಸಮ್ಮೇಳನವೇ ಸಾಕ್ಷಿ ಎಂದು ಅಥಣಿ ತಾಲೂಕಿನ ರಡ್ಡೇರಹಟ್ಟಿ ಸರ್ಕಾರಿ ಫ್ರೌಢಶಾಲೆಯ ಶಿಕ್ಷಕಿ, ಸಾಹಿತಿ ಡಾ.ಅರ್ಚನಾ ಅಥಣಿ ಹೇಳಿದರು.ಥಾಯ್ಲೆಂಡ್‌ನ ಬ್ಯಾಂಕಾಕ್‌ನಲ್ಲಿ ಕನ್ನಡ ಬಳಗ ಹಾಗೂ ಅಂತಾರಾಷ್ಟ್ರೀಯ ಸಂಸ್ಕೃತಿ ಉತ್ಸವ ಸಮಿತಿ ಏರ್ಪಡಿಸಿದ್ದ 51ನೇ ಅಂತಾರಾಷ್ಟ್ರೀಯ ಸಂಸ್ಕೃತಿ ಉತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ, ಸಂಗೀತವನ್ನು ಕೇವಲ ಮನರಂಜನೆಗಾಗಿ ಬಳಸದೆ ದೇವರ ಸೇವೆಗಾಗಿ, ಮನಸಿನ ನೆಮ್ಮದಿ ಹಾಗೂ ದೈವತ್ವದ ಸಾಧನೆಗಾಗಿ ಪರಿವರ್ತನೆಯಾಗಿದೆ. ಅಂಥ ಶಕ್ತಿ ಕನ್ನಡ ಭಾಷೆಗಿದೆ. ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸ ಹೊಂದಿದ್ದು, ಹಲವಾರು ರಾಜ ಮನೆತನಗಳು ಆಳ್ವಿಕೆ ಮಾಡಿ ಭಾಷೆಯನ್ನು ಶ್ರೀಮಂತಗೊಳಿಸಲು ಶ್ರಮಿಸಿವೆ. ಅದಕ್ಕಾಗಿ ಇಂದು ಭಾರತದಲ್ಲಿ ಅಷ್ಟೇ ಅಲ್ಲ ಇಡೀ ವಿಶ್ವದಲ್ಲಿಯೇ ಕನ್ನಡ ಭಾಷೆ ವಿಶೇಷ ಮಾನ್ಯತೆ ಪಡೆದುಕೊಂಡಿದೆ ಎಂದರು.ಈ ವೇಳೆ ಡಾ.ಅರ್ಚನಾ ಅಥಣಿಯವರನ್ನು ಸನ್ಮಾನಿಸಲಾಯಿತು. ಥಾಯ್ಲೆಂಡ್‌ನಲ್ಲಿ ಜರುಗಿದ ಸಾಂಸ್ಕೃತಿಕ ಸಮ್ಮೇಳನದಲ್ಲಿ ಕನ್ನಡಕ್ಕೆ ಸಂಬಂಧಿಸಿದಂತೆ ಕವಿಗೋಷ್ಠಿ, ಹಾಸ್ಯಗೋಷ್ಠಿ, ಮಾಧ್ಯಮಗೋಷ್ಠಿ ಹಾಗೂ ಅನಿವಾಸಿ ಕನ್ನಡಿಗರ ಗೋಷ್ಠಿ ಜರುಗಿದವು. ಕಾರ್ಯಕ್ರಮದಲ್ಲಿ ಭರತ ನಾಟ್ಯ, ಜಾನಪದ ನೃತ್ಯ, ಯಕ್ಷಗಾಯನ, ಪುಸ್ತಕ ಬಿಡುಗಡೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಪ್ರಶಸ್ತಿ ನೀಡಿ ಸನ್ಮಾನಿಸಿದರು. ಈ ಸಮಾರಂಭದ ಕರ್ನಾಟಕದಿಂದ ಹಲವು ಸಾಧಕರು, ಸಾಹಿತಿಗಳು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.