ಕನ್ನಡಪ್ರಭ ವಾರ್ತೆ ಬಾಗಲಕೋಟೆ
ವಿದ್ಯಾರ್ಥಿಗಳಲ್ಲಿ ಇಚ್ಛಾಶಕ್ತಿ ಮತ್ತು ಕ್ರಿಯಾಶಕ್ತಿ ಬೆರತಾಗ ಮಾತ್ರ ಜ್ಞಾನಶಕ್ತಿ ಸಂಪಾದನೆ ಸಾಧ್ಯವಾಗುತ್ತದೆ ಎಂದು ಎಸ್. ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಸಹನಾ ರಾವ್ ಹೇಳಿದರು.ನಗರದ ಬಿ.ವಿ.ವಿ. ಸಂಘದ ನೂತನ ಸಭಾಭವನದಲ್ಲಿ ಬುಧವಾರ ನಡೆದ ಬಸವೇಶ್ವರ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ 2026-27ನೇ ಶೈಕ್ಷಣಿಕ ಸಾಲಿನ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಜೀವನದಲ್ಲಿ ಸೋಲನ್ನು ಒಪ್ಪಿಕೊಂಡು ಅದರಿಂದ ಪಾಠ ಕಲಿತಾಗಲೇ ಗೆಲುವು ಸಾಧಿಸಲು ಸಾಧ್ಯ. ಸಕಾರಾತ್ಮಕ ಚಿಂತನೆಗಳ ಮೂಲಕ ಮಾನಸಿಕ ಶಕ್ತಿಯನ್ನು ಗಟ್ಟಿಗೊಳಿಸಿ ಆತ್ಮಬಲವನ್ನು ಹೆಚ್ಚಿಸಿಕೊಂಡಾಗ ಜ್ಞಾನದ ಅರಿವು ಮೂಡುತ್ತದೆ. ವಿದ್ಯಾರ್ಥಿಗಳ ಸರ್ವಾಂಗೀಣ ವಿಕಸನಕ್ಕೆ ಕಲೆ, ಸಾಹಿತ್ಯ, ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಅತ್ಯಂತ ಅಗತ್ಯ ಎಂದು ಹೇಳಿದರು.ಕಾಲೇಜುಗಳ ಆಡಳಿತ ಮಂಡಳಿಯ ಕಾರ್ಯಪಾಲಕ ಮಾತನಾಡಿ, ಪಾಲಕರ ಕನಸುಗಳನ್ನು ನನಸಾಗಿಸುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ. ಅವರ ಶ್ರಮಕ್ಕೆ ತಕ್ಕ ಪ್ರತಿಫಲ ನೀಡುವಂತೆ ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಬೇಕು. ಕಲಿತ ಶಾಲೆ ಹಾಗೂ ಕಾಲೇಜಿನ ಜೊತೆಗೆ ತಂದೆ-ತಾಯಿಗಳಿಗೆ ಕೀರ್ತಿ ತರುವ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.ಸಾಧಕರಿಗೆ ಸನ್ಮಾನದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಾದ ಅನುಷಾ ಹಕ್ಕೇರಿ, ಮಾಳಪ್ಪ ಅನಸೂರ್ ಹಾಗೂ ಪ್ರಶಾಂತ್ ಬಿರಾದಾರ್ ಅವರನ್ನು ಸನ್ಮಾನಿಸಲಾಯಿತು. ಭೌತಶಾಸ್ತ್ರ ಹಾಗೂ ಕನ್ನಡ ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ಪಡೆದ ವಿದ್ಯಾರ್ಥಿಗಳಿಗೂ ಗೌರವ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನೂ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಕಾಲೇಜುಗಳ ಆಡಳಿತ ಮಂಡಳಿಯ ಪದನಿಮಿತ್ತ ಕಾರ್ಯದರ್ಶಿ ಡಾ.ಎಸ್.ಎಂ.ಗಾಂವಕರ, ಪದವಿ ವಿಭಾಗದ ಪ್ರಾಚಾರ್ಯರಾದ ಎಸ್.ಆರ್.ದೇಶಪಾಂಡೆ, ಪದವಿ ಪೂರ್ವ ವಿಭಾಗದ ಪ್ರಾಚಾರ್ಯ ಡಾ.ಎನ್.ಎಚ್.ಬೇವಿನಹಳ್ಳಿ, ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷೆ ಪ್ರತಿಭಾ ಕಟ್ಟಿಮನಿ, ದೈಹಿಕ ನಿರ್ದೇಶಕ ಎಸ್.ಎನ್.ಮಂಕಣಿ ಹಾಗೂ ಅಕ್ಷಯ್ ಗಲಗಲಿ ಉಪಸ್ಥಿತರಿದ್ದರು. ಎಸ್.ಎಂ.ತಿಪ್ಪಣ್ಣವರ ಅತಿಥಿಗಳ ಪರಿಚಯ ಮಾಡಿಕೊಟ್ಟರು. ವಿದ್ಯಾರ್ಥಿನಿಯರು ಪ್ರಾರ್ಥನೆ ನೆರವೇರಿಸಿದರು. ಜಿ.ಎಚ್. ಜಿಗಳೂರ ಕಾರ್ಯಕ್ರಮ ನಿರೂಪಿಸಿದರು. ಪ್ರತಿಭಾ ಕಟ್ಟಿಮನಿ ವಂದಿಸಿದರು. ಮಹಾವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.