ಸಮಾಜದ ಪರಿವರ್ತನೆಗೆ ಸಾಹಿತ್ಯ ಶಕ್ತಿ ದೊಡ್ಡದ್ದು

| Published : Oct 07 2024, 01:32 AM IST

ಸಮಾಜದ ಪರಿವರ್ತನೆಗೆ ಸಾಹಿತ್ಯ ಶಕ್ತಿ ದೊಡ್ಡದ್ದು
Share this Article
  • FB
  • TW
  • Linkdin
  • Email

ಸಾರಾಂಶ

ಸಮಕಾಲೀನ ತಲ್ಲಣಗಳಿಗೆ ಸ್ಪಂದಿಸುವ ಹಾಗೂ ಪ್ರಭುತ್ವದ ವೈಫಲ್ಯಗಳು, ದುರ್ನೀತಿಗಳ ವಿರುದ್ಧ ಬರವಣಿಗೆ ಮೂಲಕ ಧ್ವನಿ ಎತ್ತಿ ಎಚ್ಚರಿಸುವ ಕೆಲಸವನ್ನು ಕವಿಗಳು ಮಾಡಬೇಕು

ಕನ್ನಡಪ್ರಭ ವಾರ್ತೆ ಸಿಂಧನೂರು

ಸಮಾಜದ ಪರಿವರ್ತನೆಗೆ ಸಾಹಿತ್ಯ ಶಕ್ತಿ ದೊಡ್ಡದ್ದು. ಬೆಳಿಕಿನಷ್ಟೇ ಕವಿಗಳ ಬರವಣಿಗೆ ಪ್ರಖರವಾಗಿ ಸಮಾಜದ ಅಂಕುಡೊಂಕು ತಿದ್ದುವಂತಿರಬೇಕು ಎಂದು ಸ್ಥಳೀಯ ಸರ್ಕಾರಿ ಪದವಿ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಜಾಜಿ ದೇವೇಂದ್ರಪ್ಪ ಹೇಳಿದರು.

ನಗರದ ಟೌನ್ ಹಾಲ್‌ನಲ್ಲಿ ತಾಲೂಕು ಆಡಳಿತ, ತಾಪಂ, ನಗರಸಭೆ, ನಗರ ಯೋಜನಾ ಪ್ರಾಧಿಕಾರ ಹಾಗೂ ನಾಗರಿಕ ಸಮಿತಿ ಸಂಯುಕ್ತಾಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಿಂಧನೂರು ದಸರಾ ಉತ್ಸವ ಅಂಗವಾಗಿ ಸಾಹಿತ್ಯ ದಸರಾ ಹಾಗೂ ಕಲ್ಯಾಣ ಕರ್ನಾಟಕ ದಸರಾ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿ, ರಾಯಚೂರು ಜಿಲ್ಲೆಯಲ್ಲಿ ವಚನ, ದಾಸ, ಸೂಫಿ ಸಂತರ ಸಾಹಿತ್ಯ ಸಮೃದ್ಧವಾಗಿದೆ. ಅಂಬಾಮಠದ ಚಿದಾನಂದ ಅವಧೂತರ ಕಾವ್ಯ ಮನೆ-ಮನಗಳಲ್ಲಿದೆ ಎಂದರು.

ಮನುಷ್ಯ ಪರವಾಗಿ, ಸಮಕಾಲೀನ ತಲ್ಲಣಗಳಿಗೆ ಸ್ಪಂದಿಸುವ ಹಾಗೂ ಪ್ರಭುತ್ವದ ವೈಫಲ್ಯಗಳು, ದುರ್ನೀತಿಗಳ ವಿರುದ್ಧ ಬರವಣಿಗೆ ಮೂಲಕ ಧ್ವನಿ ಎತ್ತಿ ಎಚ್ಚರಿಸುವ ಕೆಲಸವನ್ನು ಕವಿಗಳು ಮಾಡಬೇಕು. ಆದ್ದರಿಂದ ನೈಜ ವಿಚಾರಗಳ ಬರವಣಿಗೆ ಮಾಯವಾಗಿದೆ. ವಾಟ್ಸಪ್‌ ಸಾಹಿತಿಗಳ ಸಂಖ್ಯೆ ಹೆಚ್ಚಾಗಿದೆ. ಆಧುನಿಕತೆ ಹಾಗೂ ಕಾವ್ಯ ಪರಸ್ಪರ ದೂರವಾಗಿವೆ ಎಂದು ಕಳವಳ ವ್ಯಕ್ತಪಡಿಸಿದರು. ಸಾಹಿತಿಗಳು ರಾಜಕಾರಣಿಗಳ ಒಡನಾಟ ಬೆಳೆಸಿಕೊಳ್ಳುವುದು ತಪ್ಪೇನಲ್ಲ. ಅವರ ಜೊತೆಗೆ ಇದ್ದುಕೊಂಡೇ ಸಾಮಾಜಿಕ, ರಾಜಕೀಯ, ಆರ್ಥಿಕ ಚಿಂತನೆಗಳನ್ನು ಒಳಗೊಂಡು ಹಾಗೂ ರಾಜಕಿಯ ಒಳತಂತ್ರಗಳನ್ನು ಬಯಲಿಗೆಳೆದು ಸಮಾಜವನ್ನು ಹಸನುಗೊಳಿಸುವ ಕೆಲಸವನ್ನು ಬರಹಗಾರರು ಮಾಡಬೇಕಿದೆ ಎಂದು ಹೇಳಿದರು.

ಕವಿಗಳು ಪ್ರಶಸ್ತಿಗಳ ಹಿಂದೆ ಬೀಳಬಾರದು, ಅವು ದೊಡ್ಡದಲ್ಲ. ಸಂವೇದನಾಶೀಲತೆಯಿಂದ ಸಂಶೋಧಕರಂತೆ ತಿದ್ದಿ ತಿಡುವ ಮೂಲಕ ಸಾಹಿತ್ಯ ರಚನೆಗೆ ಮುಂದಾಗಬೇಕು. ಪ್ರಸ್ತುತ ಬರಹಗಾರರು ವ್ಯವಸ್ಥೆ ವಿರುದ್ಧ ಬರೆಯಲು ಭಯ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ನೈತಿಕ ಶಕ್ತಿ ಬರಹಗಾರರಲ್ಲಿ ಇರಬೇಕು ಇಲ್ಲದಿದ್ದರೆ ಬದುಕಲು ಸಾಧ್ಯವಿಲ್ಲ ಎಂದರು.

ತುರ್ವಿಹಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಕೆ.ಖಾದರಭಾಷ ಮಾತನಾಡಿ, ಮಾತೃಮೂಲ ಸಂಸ್ಕೃತಿ ನಮ್ಮೆಲ್ಲರ ಆಶಯವಾಗಿದ್ದು, ಇದನ್ನು ಉಳಿಸುವ ಸಂಕಲ್ಪ ಎಲ್ಲರೂ ಮಾಡಬೇಕಿದೆ. ಈ ನವರಾತ್ರಿಯಲ್ಲಿ ದೇವತೆಗಳನ್ನು ಪೂಜಿಸುವುದಷ್ಟೇ ಅಲ್ಲ ಪ್ರತಿಯೊಬ್ಬ ಮಹಿಳೆಯರನ್ನು ಗೌರವಿಸಬೇಕು. ತಳ ಸಂಸ್ಕೃತಿ, ಜನಸಂಸ್ಕೃತಿ ಹಾಗೂ ಸಮಾಜದ ಕಟ್ಟಕಡೆ ಜನಾಂಗದವರ ಪರವಾಗಿ ಸಾಹಿತ್ಯದ ಮೂಲಕ ಧ್ವನಿಯಾಗುವವರು ಮಾತ್ರ ನೈಜ ಕವಿಗಳು ಮತ್ತು ಸಾಹಿತ್ಯ ಎಂದು ಹೇಳಿದರು.

ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ, ಎಲ್ಲ ರಂಗದಲ್ಲೂ ಸಾಹಿತಿಗಳು ಇದ್ದು, ಅವರನ್ನು ಗುರುತಿಸುವ ನಿಟ್ಟಿನಲ್ಲಿ ಈ ದಸರಾ ಕವಿಗೋಷ್ಠಿ ಆಯೋಜಿಸಲಾಗಿದೆ. ಜನರ ಬದುಕಿನ ತಲ್ಲಣಗಳ ಕುರಿತು ಸಾಹಿತ್ಯ ರಚನೆಯಾಗಲಿ. ಸಾಹಿತ್ಯದಿಂದ ಮಾತ್ರ ಸಾಮಾಜಿಕ ಬದಲಾವಣೆ ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಮಹಾಂತೇಶ ಮಸ್ಕಿ, ಜನಕವಿ ರಮೇಶ ಗಬ್ಬೂರು ಮಾತನಾಡಿದರು. ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು, ತಾ.ಪಂ ಇಓ ಚಂದ್ರಶೇಖರ, ನಿವೃತ ಶಿಕ್ಷಣಾಧಿಕಾರಿ ಹೆಚ್.ಜಿ.ಹಂಪಣ್ಣ, ಸಾಹಿತಿಗಳಾದ ಎಸ್.ಎಸ್.ಹಿರೇಮಠ, ವೀರನಗೌಡ ಗುಮಗೇರಾ, ಕರಿಬಸಯ್ಯ ಹಿರೇಮಠ, ಅಮರಗುಂಡಪ್ಪ ಹಿರೇಮಠ, ವೆಂಕನಗೌಡ ವಟಗಲ್, ಬೀರಪ್ಪ ಶಂಭೋಜಿ, ಅಮರಗುಂಡಪ್ಪ ಹುಲ್ಲೂರು, ವಿ.ಸಿ.ಪಾಟೀಲ್, ವಲಿಪಾಷಾ, ಮಧುಮತಿ ದೇಶಪಾಂಡೆ, ರಮಾದೇವಿ ಶಂಭೋಜಿ, ಕಸಾಪ ಮಾಜಿ ಅಧ್ಯಕ್ಷೆ ಸರಸ್ವತಿ ಪಾಟೀಲ್ ಉಪಸ್ಥಿತರಿದ್ದರು. ಎಸ್.ದೇವೇಂದ್ರಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಷ್ಮಾ ಹಿರೇಮಠ ಹಾಗೂ ಬಸವರಾಜ ಗಸ್ತಿ ರೈತಗೀತೆ ಹಾಡಿದರು. ಪಂಪಯ್ಯಸ್ವಾಮಿ ಸಾಲಿಮಠ ಸ್ವಾಗತಿಸಿದರು. ಡಾ.ಹುಸೇನಪ್ಪ ಅಮರಾಪುರ ನಿರೂಪಿಸಿದರು.