ಸಾರಾಂಶ
ಶಿವಮೊಗ್ಗ ನಗರದ ಕಮಲಾ ನೆಹರು ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ನಿಲಯದ ವಾರ್ಷಿಕೋತ್ಸವ ಸಮಾರಂಭದಲ್ಲಿ ವಿವಿಧ ಎನ್ಇಎಸ್ ಕಾಲೇಜುಗಳಲ್ಲಿ ಸಾಧನೆಗೈದ ಹಾಸ್ಟೆಲ್ ವಿದ್ಯಾರ್ಥಿನಿಯರನ್ನು ಅಭಿನಂದಿಸಲಾಯಿತು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಇಡೀ ಜಗತ್ತನ್ನು ಗೆಲ್ಲುವ ಶಕ್ತಿ ನಿಷ್ಕಲ್ಮಶ ಸ್ನೇಹಕ್ಕಿದೆ. ಸೀಮಿತತೆಗಳಿಲ್ಲದ ಹೊಸತನದ ಸ್ನೇಹಕ್ಕಾಗಿ ಹಾಸ್ಟೆಲ್ ಎಂಬ ವಾತಾವರಣ ಪೂರಕವಾಗಿ ಇರುತ್ತದೆ ಎಂದು ಸಾಹಿತಿ ತುರುವನೂರು ಮಲ್ಲಿಕಾರ್ಜುನ ಅಭಿಪ್ರಾಯಪಟ್ಟರು.ನಗರದ ಕಮಲಾ ನೆಹರು ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ನಿಲಯದಲ್ಲಿ ಏರ್ಪಡಿಸಿದ್ದ ನಿಲಯದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸಾಧನೆ ಮಾಡಿದ ವಿದ್ಯಾರ್ಥಿಗಳಲ್ಲಿ ದೊಡ್ಡ ಪಾಲು ಹಾಸ್ಟೆಲ್ ವಿದ್ಯಾರ್ಥಿಗಳದ್ದೆ ಆಗಿರುತ್ತದೆ. ಅಂತಹ ಸ್ನೇಹ ಕೊನೆಯ ತನಕ ಮನದಲ್ಲಿ ಹಿಡಿದಿಡಿ. ಸ್ನೇಹ ಎಂದಿಗೂ ಶಾಶ್ವತ. ಹಾಸ್ಟೆಲ್ ಜೀವನದಲ್ಲಿ ಸ್ನೇಹ, ಸಹಾಯ, ಸಾಂತ್ವನ, ಹೊಟ್ಟೆ ಕಿಚ್ಚು, ಸ್ಪರ್ಧೆಗಳ ನೆನಪಿನ ಹೂರಣವಿರುತ್ತದೆ ಎಂದರು.
ಬದುಕಿನಲ್ಲಿ ಸಂಭ್ರಮ ಬೇಕಿದೆ. ಅಂತಹ ಸಂಭ್ರಮಗಳು ಮೊಬೈಲ್ ಬಳಕೆಗೆ ಸೀಮಿತವಾಗಿ ಉಳಿಯುತ್ತಿರುವುದು ಬೇಸರದ ಸಂಗತಿ. ಮೊಬೈಲ್ ಯುವ ಸಮೂಹದ ನೆನಪಿನ ಶಕ್ತಿ ಕುಗ್ಗಿಸುತ್ತಿದ್ದು ಎಚ್ಚೆತ್ತುಕೊಳ್ಳುವ ತುರ್ತಿದೆ ಎಂದರು.ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಪೋಷಕರು ಸಾಧಿಸಲು ಆಗದ ವಿಚಾರಗಳನ್ನು ನಿಮ್ಮ ಸಾಧನೆಗಳ ಮೂಲಕ ಕಾಣುವ ಹಂಬಲ ಅವರದ್ದಾಗಿರುತ್ತದೆ. ಅಂತಹ ಹಂಬಲವನ್ನು ಜವಾಬ್ದಾರಿಯಿಂದ ಪೂರೈಸಲು ಪ್ರಯತ್ನಿಸುವಂತೆ ಕರೆ ನೀಡಿದರು. ಕ್ರೀಡೆ ಕುರಿತಾಗಿ ಆಸಕ್ತಿ ಬೆಳಸಿಕೊಳ್ಳಿ. ಸೋಲು ಗೆಲುವಿನ ನಿಭಾಯಿಸುವಿಕೆ ಕಲಿಯಲು ಕ್ರೀಡೆ ದೊಡ್ಡ ಸಾಧನೆ. ವೈಯುಕ್ತಿಕ ಹಿತಾಸಕ್ತಿಗಿಂತ ತಂಡದ ಹಿತಾಸಕ್ತಿ ಮುಖ್ಯ ಎಂಬುದನ್ನು ಕಲಿಸುತ್ತದೆ ಎಂದರು.ಎನ್ಇಎಸ್ ಆಜೀವ ಸದಸ್ಯರಾದ ವಾಗ್ದೇವಿ ಮಾತನಾಡಿದರು. ಕಮಲಾ ನೆಹರು ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ.ಆರ್.ಎಂ.ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ಹಾಸ್ಟೆಲ್ ಮುಖ್ಯಸ್ಥರಾದ ಸಂಜಿದಾ ಬಾನು ಸೇರಿ ಇತರರಿದ್ದರು. ಇದೇ ವೇಳೆ ವಿವಿಧ ಎನ್ಇಎಸ್ ಕಾಲೇಜುಗಳಲ್ಲಿ ಸಾಧನೆಗೈದ ಹಾಸ್ಟೆಲ್ ವಿದ್ಯಾರ್ಥಿನಿಯರನ್ನು ಅಭಿನಂದಿಸಲಾಯಿತು.