ಅಕ್ಷರ ಮಾಂತ್ರಿಕ ಅಕ್ಕಿಗೆ ಒಲಿದ ಸಮ್ಮೇಳನಾಧ್ಯಕ್ಷ ಪಟ್ಟ

| Published : Feb 06 2024, 01:36 AM IST / Updated: Feb 06 2024, 02:35 PM IST

ಸಾಹಿತಿ ಸಂಶೋಧಕ ಡಿ.ಎನ್. ಅಕ್ಕಿ.

ಸಾರಾಂಶ

4ನೇ ಶಹಾಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಫೆಬ್ರವರಿ ಕೊನೆ ವಾರದಲ್ಲಿ ಭೀಮರಾಯನಗುಡಿಯಲ್ಲಿ ನಡೆಯಲಿದೆ. ಅಕ್ಷರ ಜಾತ್ರೆಗೆ ಜ್ಞಾನ ಗಾರುಡಿಗ ಅಕ್ಕಿ ಸರ್ವಾಧ್ಯಕ್ಷರಾಗಿ ನೇಮಕವಾಗಿದ್ದಾರೆ.

ಮಲ್ಲಯ್ಯ ಪೋಲಂಪಲ್ಲಿ
ಕನ್ನಡಪ್ರಭ ವಾರ್ತೆ ಶಹಾಪುರ

ಸಗರನಾಡಿನ ಹೆಸರಾಂತ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ, ಹಿರಿಯ ಸಂಶೋಧಕ, ಯುವ ಸಾಹಿತಿಗಳಿಗೆ ಮತ್ತು ಸಂಶೋಧಕರಿಗೆ ಮಾರ್ಗದರ್ಶಕ ದೇವೇಂದಪ್ಪ ನಾಭಿರಾಜ್ ಅಕ್ಕಿ (ಡಿಎನ್ ಅಕ್ಕಿ) ಅವರು 4ನೇ ಶಹಾಪುರ ತಾಲೂಕು ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಅವರ ಆಯ್ಕೆಗೆ ಸಗರನಾಡಿನ ಕವಿಗಳು, ಸಾಹಿತಿಗಳು, ಸಾತ್ಯಾಸಕ್ತರು ಹಾಗೂ ಸಂಶೋಧಕರು ಹರ್ಷ ವ್ಯಕ್ತಪಡಿಸಿದ್ದಾರೆ.

ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ರವೀಂದ್ರ ಹೊಸಮನಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕಾರಿ ಸಭೆಯಲ್ಲಿ ಫೆಬ್ರವರಿ ಕೊನೆವಾರದಲ್ಲಿ ಭೀಮರಾಯನ ಗುಡಿಯಲ್ಲಿ ಸಮ್ಮೇಳನ ನಡೆಸಲು ತೀರ್ಮಾನಿಸಲಾಯಿತು.

ಜತೆಗೆ ಸಮ್ಮೇಳನ ಅಧ್ಯಕ್ಷ ಸ್ಥಾನಕ್ಕೆ ಅತ್ಯಂತ ಸೂಕ್ತವಾದ ವ್ಯಕ್ತಿ ಡಿ.ಎನ್.ಅಕ್ಕಿ ಅವರು ಆಗಿದ್ದಾರೆ ಎಂದು ವಲಯ ಅಧ್ಯಕ್ಷ ಶರಣಬಸವ ಪೊಲೀಸ್ ಬಿರಾದಾರ್ ಅವರು ಅಕ್ಕಿ ಅವರ ಹೆಸರು ಸೂಚಿಸಿದಾಗ, ಉಳಿದಂತೆ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಹಾಜರಿದ್ದ ಎಲ್ಲಾ ಸದಸ್ಯರು ಒಮ್ಮತದಿಂದ ಸಹಮತ ಸೂಚಿಸಿದ್ದಾರೆಂದು ಡಾ. ಹೊಸಮನಿ ತಿಳಿಸಿದ್ದಾರೆ.

ಡಿ.ಎನ್.ಅಕ್ಕಿ ಪರಿಚಯ: ದೇವಿಂದ್ರಪ್ಪ ನಾಭಿರಾಜ ಅಕ್ಕಿಯವರು ಶಿಕ್ಷಣ, ಸಾಹಿತ್ಯ, ಸಾಂಸ್ಕೃತಿಕ ಲೋಕದಲ್ಲಿ ಡಿ.ಎನ್. ಅಕ್ಕಿಯವರೆಂದೇ ಚಿರಪರಿಚಿತರಾಗಿದ್ದಾರೆ. ಶಹಾಪುರ ತಾಲೂಕಿನ ಗೋಗಿ ಗ್ರಾಮದ ಸಾಂಸ್ಕೃತಿಕ ಪರಿಸರದಲ್ಲಿ ತುಂಬಾ ಹೆಸರುವಾಸಿಯಾದ ಅಕ್ಕಿ ಮನೆತನ ನಾಭಿರಾಜ್ ಮತ್ತು ಶ್ರೀಕಾಂತಮ್ಮ ದಂಪತಿಗಳ ಮಗನಾಗಿ ಜನಿಸಿದ ಡಿ.ಎನ್. ಅಕ್ಕಿ ಕನ್ನಡದ ಪ್ರಮುಖ ಸಾಹಿತಿಗಳಲ್ಲಿ ಒಬ್ಬರಾಗಿದ್ದಾರೆ.

ಎಲ್ಲ ವರ್ಗದ ಜನರೊಂದಿಗೆ ಅನೋನ್ಯವಾಗಿ ಪ್ರೀತಿ- ವಿಶ್ವಾಸದಿಂದ ಇದ್ದು, ಎಲ್ಲರ ಮನಸ್ಸನ್ನು ಗೆದ್ದ ಅಕ್ಷರ ಗಾರುಡಿಗ. ಸಗರನಾಡಿನ ಸಾಹಿತ್ಯ ಲೋಕದ ಧೃವತಾರೆ. ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಅತ್ಯಂತ ಸೂಕ್ತ. ಕನ್ನಡ ಸಾಹಿತ್ಯ ಪರಿಷತ್ತು ತಡವಾಗಿಯಾದರೂ ಒಬ್ಬ ಒಳ್ಳೆ ಶ್ರೇಷ್ಠ ಸಾಹಿತಿ ಆಯ್ಕೆ ಮಾಡಿ ಸಾಹಿತ್ಯ ಸಮ್ಮೇಳನದ ಗರಿಮೆ ಹೆಚ್ಚಿಸಿಕೊಂಡಿದೆ ಎನ್ನುವ ಮಾತುಗಳು ಸಾಹಿತ್ಯ ವಲಯದವರ ಬಾಯಲ್ಲಾಡುತ್ತಿವೆ.

ಕೃತಿಗಳು: ಶಿಕ್ಷಕ ವೃತ್ತಿಯಿಂದ ನಿವೃತ್ತರಾದ ಡಿ.ಎನ್. ಅಕ್ಕಿ ಅವರು ಚಿತ್ರಕಲೆ, ಕಾವ್ಯ, ಲೇಖನ, ಸಂಶೋಧನೆ ಕ್ಷೇತ್ರಕ್ಕೆ ಮೌಲಿಕ ಕೃತಿಗಳನ್ನು ನೀಡಿದ್ದಾರೆ. ಮುಂಬೆಳಗು, ಚಿಗುರು ಚಿಂತನ, ಶಹಾಪುರ ತಾಲೂಕು ದರ್ಶನ, ಸಗರನಾಡ ಸಿರಿ, ಹಡೆದವ್ವ ಹಾಡ್ಯಾಳ, ಸನ್ನತಿ ಚಂದ್ರಲಾಂಬಾ, ಮಯಾ ಮದ್ದಲೆ, ಯಕ್ಷಪ್ರಶ್ನೆ, ಬಾನರಂಗ, ಜೈನ ವಿಗ್ರಹಗಳು, ವರ್ಧಮಾನ ಮಹಾವೀರ, ಜೀನದನಿ, ಹಕ್ಕುಲತೆನಿ ಮುಂತಾದ 25ಕ್ಕೂ ಹೆಚ್ಚು ಕೃತಿಗಳನ್ನು ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ.

ಪ್ರಶಸ್ತಿ ಪುರಸ್ಕಾರ: ಸರಳ ಸಜ್ಜನಿಕೆ ವ್ಯಕ್ತಿಯನ್ನು ಪ್ರಶಸ್ತಿ ಪುರಸ್ಕಾರಗಳು ಹುಡುಕಿ ಬಂದಿವೆ. ಎಂದೂ ನನಗೆ ಪ್ರಶಸ್ತಿ ಕೊಡಿ ಎಂದು ಲಾಬಿ ಮಾಡಿದವರಲ್ಲ. ಇಳಿ ವಯಸ್ಸಿನಲ್ಲಿರುವ ಡಿ.ಎನ್.ಅಕ್ಕಿ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕ. ಕನ್ನಡದ ಪ್ರಮುಖ ಕವಿ, ಸಾಹಿತಿ, ಇತಿಹಾಸ ಸಂಶೋಧಕ, ಚಿತ್ರಕಲಾವಿದ, ಲೇಖಕ, ಹೀಗೆ ಅವರ ಬದುಕು ಹಲವು ವೈವಿಧ್ಯತೆಗಳಿಂದ ಕೂಡಿದೆ. 

1996ರಲ್ಲಿ ರಾಜ್ಯ ಸರ್ಕಾರದಿಂದ ಆದರ್ಶ ಶಿಕ್ಷಕ ಪ್ರಶಸ್ತಿ, 1997-98ರಲ್ಲಿ ಕೇಂದ್ರ ಸರ್ಕಾರದಿಂದ ಆದರ್ಶ ಶಿಕ್ಷಕ ರಾಷ್ಟ್ರಪ್ರಶಸ್ತಿ ಹಾಗೂ 2020ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಸೇರಿ ನಾಡಿನ ಸಾಹಿತ್ಯ, ಶಿಕ್ಷಣ ಹಾಗೂ ಸಾಂಸ್ಕೃತಿಕ ಸಂಘ ಸಂಸ್ಥೆಗಳಿಂದ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಅವರಿಗೆ ಸಂದಿವೆ.

ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಮಿತಿಯ ಸದಸ್ಯರಾದ ಸಣ್ಣನಿಂಗಪ್ಪ ನಾಯ್ಕೋಡಿ, ನೀಲಕಂಠ ಬಡಿಗೇರ, ಡಾ. ದೇವಿಂದ್ರಪ್ಪ ಹಡಪದ, ಹುಸನಪ್ಪ ಕಟ್ಟಿಮನಿ, ಮಲ್ಲಣ್ಣಗೌಡ ಪೊಲೀಸರು ಪಾಟೀಲ್, ಅಶೋಕ ಚೌಧರಿ, ಪ್ರೊ. ಶಿವಲಿಂಗಣ್ಣ ಸಾಹು, ಕೋಶಾಧ್ಯಕ್ಷ ಶಂಕರ ಹುಲಕಲ್, ಭಾಗ್ಯ ದೊರೆ, ಶಕುಂತಲಾ ಹಡಗಲಿ, ಕಾವೇರಿ ಪಾಟೀಲ, ಲಿಂಗಣ್ಣ ಪಡಶೆಟ್ಟಿ, ಹಿರಿಯ ಸಾಹಿತಿ ಸಿದ್ಧರಾಮ ಹೊನ್ಕಲ್, ಬಸವರಾಜ ಹಿರೇಮಠ, ನಿಕಟಪೂರ್ವ ಕಸಾಪ ಅಧ್ಯಕ್ಷ ಸಿದ್ಧಲಿಂಗಣ್ಣ ಆನೆಗುಂದಿ, ನಿಂಗಣ್ಣ ತಿಪ್ಪನಳ್ಳಿ, ರಂಗನಾಥ ದೊರೆ, ರವಿಂದ್ರನಾಥ ಪತ್ತಾರ, ಸಾಯಬಣ್ಣ ಪುರ್ಲೆ, ಬಿ.ಎಂ. ಪೂಜಾರಿ ಮುಂತಾದವರು ಭಾಗವಹಿಸಿದ್ದರು.

ಸಗರ ನಾಡಿನ ಎಲ್ಲಾ ಹೃದಯವಂತರು ಸೇರಿ ನನ್ನನ್ನು ಸಮ್ಮೇಳನ ಅಧ್ಯಕ್ಷರನ್ನಾಗಿ ಮಾಡಿರುವುದು ಅತ್ಯಂತ ಖುಷಿ ತಂದಿದೆ. ನನ್ನನ್ನು ಸಾಹಿತ್ಯ ಸಂಶೋಧನಾ ಕ್ಷೇತ್ರದಲ್ಲಿ ಇನ್ನು ಹೆಚ್ಚಿನ ಹುಮ್ಮಸ್ಸಿನಿಂದ ಕೆಲಸ ಮಾಡಲು ಶಕ್ತಿ ತುಂಬಿದ್ದಾರೆ. ಆಯ್ಕೆ ಮಾಡಿದ ಎಲ್ಲರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಜೊತೆಗೆ ಇಲ್ಲಿವರೆಗೂ ನನಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ನನಗೆ ಸಾಥ್‌ ನೀಡಿದ ಎಲ್ಲರಿಗೂ ಈ ಗೌರವ ಸಲ್ಲುತ್ತದೆ. - ಡಿ.ಎನ್. ಅಕ್ಕಿ, ವ್ಯಂಗ್ಯ ಚಿತ್ರಕಾರ, ಸಾಹಿತಿ, ಸಂಶೋಧಕ

ಸಾಹಿತ್ಯ, ಸಂಶೋಧನೆ ವ್ಯಂಗ್ಯ ಚಿತ್ರಕಾರ ನಾಟಕಕಾರ ಹೀಗೆ ಹತ್ತಾರು ಕ್ಷೇತ್ರದಲ್ಲಿ ಕೃಷಿ ಮಾಡಿದ ಸಾಧಕರೊಬ್ಬರನ್ನು ಸಾಹಿತ್ಯ ಸಮ್ಮೇಳನ ಅಧ್ಯಕ್ಷರನ್ನಾಗಿ ಆಯ್ಕೆ ಯಾಗಿರುವುದು ಅತ್ಯಂತ ಸಮಂಜಸವಾಗಿದೆ. ಕಾರ್ಯಕಾರಿಣಿ ಸಭೆಯಲ್ಲಿ ಸರ್ವ ಸದಸ್ಯರು ಒಮ್ಮತದಿಂದ ಆಯ್ಕೆ ಮಾಡಿರುವುದು ವಿಶೇಷ.- ಡಾ. ರವೀಂದ್ರನಾಥ್ ಹೊಸಮನಿ, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು ಶಹಾಪುರ