ಅಧ್ಯಕ್ಷ, ಉಪಾಧ್ಯಕ್ಷಗಿರಿಗೆ ಬೇಕು ಸಚಿವರ ಶ್ರೀರಕ್ಷೆ!

| Published : Aug 10 2024, 01:32 AM IST

ಸಾರಾಂಶ

ಪಟ್ಟಣ ಪಂಚಾಯತಿಗೆ ಚುನಾವಣೆ ಜರುಗಿ ಎರಡು ವರ್ಷಗಳ ಗತಿಸಿದರೂ ಅಧ್ಯಕ್ಷ -ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟವಾಗದೇ ನ್ಯಾಯಾಲಯದಲ್ಲಿದ್ದ ಮೀಸಲಾತಿ ತಡೆಯಾಜ್ಞೆ ತೆರವುಗೊಂಡು ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಆಕಾಂಕ್ಷಿಗಳಲ್ಲಿ ಚಟುವಟಿಕೆಗಳು ಗದಿಗೆದರಿವೆ.

ಮಲ್ಲಿಕಾರ್ಜುನ ಕುಬಕಡ್ಡಿ

ಕನ್ನಡಪ್ರಭ ವಾರ್ತೆ ಕೊಲ್ಹಾರ

ಪಟ್ಟಣ ಪಂಚಾಯತಿಗೆ ಚುನಾವಣೆ ಜರುಗಿ ಎರಡು ವರ್ಷಗಳ ಗತಿಸಿದರೂ ಅಧ್ಯಕ್ಷ -ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟವಾಗದೇ ನ್ಯಾಯಾಲಯದಲ್ಲಿದ್ದ ಮೀಸಲಾತಿ ತಡೆಯಾಜ್ಞೆ ತೆರವುಗೊಂಡು ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಆಕಾಂಕ್ಷಿಗಳಲ್ಲಿ ಚಟುವಟಿಕೆಗಳು ಗದಿಗೆದರಿವೆ.ಆಕಾಂಕ್ಷಿಗಳು ಸದ್ದಿಲ್ಲದೆ ತಮ್ಮ ಮುಖಂಡರೊಂದಿಗೆ ಲಾಬಿ ನಡೆಸುತ್ತಿದ್ದು, ಸದಸ್ಯರಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಪಟ್ಟಣದ ವಾರ್ಡ್‌ಗಳಲ್ಲಿ ತಮ್ಮ ತಮ್ಮ ಸದಸ್ಯರ ದರ್ಬಾರಗಳಿದ್ದು, ಬಿಸಿ ಬಿಸಿ ಚರ್ಚೆಯಾಗುತ್ತಿದೆ.ಲೆಕ್ಕಾಚಾರ ಜೋರು:

ಪಟ್ಟಣ ಪಂಚಾಯತಿಯ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾತಿ ಪ್ರಕಟಗೊಂಡಿದ್ದು, ಕಾಂಗ್ರೆಸ್, ಬಿಜೆಪಿ ಸದಸ್ಯರು ಪಟ್ಟಣ ಪಂಚಾಯತಿ ಗದ್ದುಗೆಗೆ ಏರಲು ರಾಜಕೀಯ ದಾಳಗಳನ್ನು ಉರುಳಿಸಲು ಆರಂಭಿಸಿದೆ. ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತವಿದ್ದ ಕಾರಣ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳೆರಡು ಕಾಂಗ್ರೆಸ್‌ಗೆ ಒಲಿಯುವ ಅದೃಷ್ಟವಿದೆ. ಕಳೆದ 2021 ಡಿಸೆಂಬರ್ 30 ರಂದು ಫಲಿತಾಂಶ ಘೋಷಣೆಯಾಗಿದ್ದರೂ ಇಲ್ಲಿಯವರೆಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಘೋಷಣೆ ನ್ಯಾಯಾಲಯದಲ್ಲಿದ್ದ ಕಾರಣ ಸೋಮವಾರ ಕರ್ನಾಟಕ ಮುನ್ಸಿಪಾಲಿಟಿ (ಅಧ್ಯಕ್ಷ-ಉಪಾಧ್ಯಕ್ಷ) (ಚುನಾವಣೆ)(ತಿದ್ದುಪಡಿ) ನಿಯಮಾವಳಿ ಪ್ರಕಾರ ಮೀಸಲಾತಿ ನಿಗದಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.ಕೊಲ್ಹಾರ ಪಪಂಗೆ ಒಟ್ಟು 17 ಸದಸ್ಯ ಬಲ ಹೊಂದಿದ್ದು, ಕಾಂಗ್ರೆಸ್-14, ಬಿಜೆಪಿ-03 ಸದಸ್ಯ ಬಲಾಬಲವಿದೆ. ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತವಿದೆ. ಕಾಂಗ್ರೆಸ್‌ ಪಕ್ಷದ ಸದಸ್ಯರಲ್ಲಿ ಅಧ್ಯಕ್ಷ -ಉಪಾಧ್ಯಕ್ಷ ಸ್ಥಾನದ ಅದೃಷ್ಟ ಲಕ್ಷ್ಮೀ ಯಾರ ಕೈ ಹಿಡಿಯುತ್ತಾಳೆ ಎಂಬುವುದನ್ನು ಕಾದು ನೋಡಬೇಕಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವಿದ್ದು ಹಾಗೂ ಮತಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದ ಶಾಸಕರಿದ್ದು ಈ ಸದ್ಯ ರಾಜ್ಯ ಸರ್ಕಾರದಲ್ಲಿ ಸಕ್ಕರೆ, ಜವಳಿ, ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲರ ಮೇಲೆ ಆಕಾಂಕ್ಷಿಗಳ ಭವಿಷ್ಯ ನಿಂತಿದೆ. ಕಾಂಗ್ರೆಸ್ ಪಕ್ಷದ ಸದಸ್ಯರಲ್ಲಿ ಅಧ್ಯಕ್ಷ , ಉಪಾಧ್ಯಕ್ಷ ಆಕಾಂಕ್ಷಿಗಳು ಬಹಳಷ್ಟಿದ್ದು ಸಚಿವರ ಬಳಿ ಲಾಬಿ ಜೋರಾಗಿ ನಡೆದಿದೆ. ಕಾಂಗ್ರೆಸ್ ಪಕ್ಷದಲ್ಲಿ 4 ಜನ ಸದಸ್ಯರು ಆಕಾಂಕ್ಷಿಗಳಿದ್ದ ಕಾರಣ ಅಧ್ಯಕ್ಷ -ಉಪಾಧ್ಯಕ್ಷರ ಸ್ಥಾನಕ್ಕೆ ಬಹಳಷ್ಟು ಪೈಪೋಟಿ ನಡೆಯುವ ಸಾಧ್ಯತೆಯಿದೆ. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಕಾಂಗ್ರೆಸ್‌ನಲ್ಲಿ 7 ಜನ ಮಹಿಳಾ ಸದಸ್ಯರಿದ್ದಾರೆ. ಬಿಜೆಪಿಯಲ್ಲಿ ಯಾರೊಬ್ಬರು ಮಹಿಳಾ ಸದಸ್ಯರಿಲ್ಲ.

ಕೊಲ್ಹಾರ ಪಟ್ಟಣ ಪಂಚಾಯತಿಯಾಗಿ ಘೋಷಣೆಯಾದ ನಂತರ ಮೊದಲ ಅವಧಿಗೆ ಬಿಜೆಪಿಗೆ ಸ್ಪಷ್ಟ ಬಹುಮತ ಲಭಿಸಿದ ಕಾರಣ 5 ವರ್ಷ ಬಿಜೆಪಿ ಅಧಿಕಾರ ನಡೆಸಿತ್ತು. ಆದರೆ, 2ನೇ ಬಾರಿಗೆ ನಡೆದ ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ ಕಾಂಗ್ರೆಸ್-11, ಬಿಜೆಪಿ-3, ಎಂ.ಐ.ಎಂ-3 ಸ್ಥಾನಗಳನ್ನು ಪಡೆದುಕೊಂಡಿದ್ದವು. ಆದರೆ, ಮುಂದೆ ನಡೆದ ರಾಜಕೀಯ ಕ್ಷೀಪ್ರ ಬೆಳವಣಿಗೆಯಿಂದ ಎಂ.ಐ.ಎಂ ಪಕ್ಷದ 3 ಜನ ಸದಸ್ಯರು ಪಕ್ಷದ ತೊರೆದು ಸಚಿವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದರು. ಹೀಗಾಗಿ ಕಾಂಗ್ರೆಸ್ ಪಕ್ಷಕ್ಕೆ 14 ಜನ ಸದಸ್ಯರ ಬೆಂಬಲ ದೊರೆತ ಹಿನ್ನೆಲೆ ಅಧ್ಯಕ್ಷ , ಉಪಾಧ್ಯಕ್ಷ ಸ್ಥಾನಗಳೆರಡು ಕಾಂಗ್ರೆಸ್ ಪಕ್ಷದ ಪಾಲಾಗುವುದು ಖಚಿತ.ಸಚಿವರ ಒಲವು ಯಾರ ಮೇಲೆ?:

ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆಗೆ ಮೀಸಲಾತಿ ಘೋಷಣೆಯಾಗಿದೆ. ಕಾಂಗ್ರೆಸ್‌ ಪಪಂ ಸದಸ್ಯರ ನಡುವೆ ಭಾರಿ ಪೈಪೋಟಿ ನಡೆದಿದ್ದು, ಸಚಿವರು ಯಾರ ಮೇಲೆ ಶ್ರೀರಕ್ಷೆ ತೊರುವರು ಎನ್ನುವುದೇ ಭಾರಿ ಕೂತುಹಲ ಮೂಡಿಸಿದೆ. ಚನಮಲ್ಲಪ್ಪ ಗಿಡ್ಡಪ್ಪಗೋಳ, ನಿಂಗಪ್ಪ ಗಣಿ, ಶ್ರೀಶೈಲ ಮುಳವಾಡ, ದಸ್ತಗೀರ ಕಲಾದಗಿ ಸೇರಿದಂತೆ ತೌಸೀಫ್‌ ಗಿರಗಾಂವಿ ಹೆಸರು ಮುಂಚೂಣಿಯಲ್ಲಿವೆ. ಹಾಗೆಯೇ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆಗೆ ಮೀಸಲಾತಿ ಬಂದಿರುವುದರಿಂದ ಕಾಂಗ್ರೆಸ್‌ನಲ್ಲಿ 7 ಮಹಿಳಾ ಸದಸ್ಯರು ಆಯ್ಕೆಯಾಗಿದ್ದು ಯಾರಾಗುವರು ಎನ್ನುವುದನ್ನು ಸಚಿವರೇ ತೀರ್ಮಾನ ಮಾಡುವರೆಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಸಚಿವರ ತೀರ್ಮಾನಕ್ಕೆ ನಾವೆಲ್ಲರೂ ಬದ್ಧ ಎನ್ನುವ ವಿಶ್ವಾಸವನ್ನು ಸರ್ವ ಸದಸ್ಯರು ವ್ಯಕ್ತಪಡಿಸಿದ್ದಾರೆ.

ಸಾಮಾನ್ಯ ವರ್ಗಕ್ಕೆ ಅಧ್ಯಕ್ಷ, ಸಾಮಾನ್ಯ ಮಹಿಳೆ ಉಪಾಧ್ಯಕ್ಷೆ ಸ್ಥಾನ ಮೀಸಲು

ಸರ್ಕಾರ 2015 ರಲ್ಲಿ ಕೊಲ್ಹಾರ ಗ್ರಾಮ ಪಂಚಾಯತಿಯಿಂದ ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜಗೇರಿಸಲಾಯಿತು. ನಂತರ ಒಟ್ಟು -17 ಜನರ ಸದಸ್ಯರ ಸ್ಥಾನಕ್ಕೆ 2016 ರಲ್ಲಿ ನಡೆದ ಪಪಂ ಚುನಾವಣೆಯಲ್ಲಿ ಮೊದಲ ಅಧಿಕಾರ ಅವಧಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ, ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಅ ಆಯ್ಕೆಯಾಗಿದ್ದರು. ನಂತರ ನಡೆದ ಅಧಿಕಾರದ ಅವಧಿಯಲ್ಲಿ ಅಧ್ಯಕ್ಷ -ಉಪಾಧ್ಯಕ್ಷರ ಮೀಸಲಾತಿ ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಅ, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ವರ್ಗದವರು ಅಧಿಕಾರ ನಡೆಸಿದ್ದಾರೆ. 2021ರ ಡಿಸೆಂಬರ್ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ -ಉಪಾಧ್ಯಕ್ಷ ಸ್ಥಾನಕ್ಕೆ 2024ರ ಆಗಸ್ಟ್‌ 5 ರಂದು ಮೀಸಲಾತಿ ಪ್ರಕಟವಾಗಿದ್ದು ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಪ್ರಕಟವಾಗಿದೆ.

ಕಾಂಗ್ರೆಸ್ ಪಕ್ಷದಲ್ಲಿ ನಾಲ್ಕೈದು ಜನ ಅಧ್ಯಕ್ಷ ,ಉಪಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳು ಇದ್ದಾರೆ. ಮೀಸಲಾತಿಯ ಪ್ರಕಾರ ಸೂಕ್ತವಾದ ಅಭ್ಯರ್ಥಿಯನ್ನು ಸಚಿವರಾದಂತಹ ಶಿವಾನಂದ ಪಾಟೀಲರು ಆಯ್ಕೆ ಮಾಡುತ್ತಾರೆ. ಅವರು ಹೇಳಿದಂತೆ ಎಲ್ಲ ಸದಸ್ಯರು ನಡೆದುಕೊಳ್ಳುತ್ತಾರೆಂಬ ವಿಶ್ವಾಸವಿದೆ. ಕಾಂಗ್ರೆಸ್ ಪಕ್ಷ ಈ ಬಾರಿ ಪ.ಪಂ ಅಧಿಕಾರ ಹಿಡಿಯುತ್ತದೆ.

-ಕಲ್ಲು ದೇಸಾಯಿ, ಕಾಂಗ್ರೆಸ್ ಮುಖಂಡರು ಹಾಗೂ ಜಿಪಂ ಮಾಜಿ ಸದಸ್ಯರು, ಕೊಲ್ಹಾರ.ಕಾಂಗ್ರೆಸ್ ಪಕ್ಷಕ್ಕೆ 14 ಸದಸ್ಯರ ಬಲವಿದ್ದು, ನಮಗೆ ಸ್ಪಷ್ಟ ಬಹುಮತವಿದೆ. ನಮ್ಮ ಮತಕ್ಷೇತ್ರದ ಶಾಸಕರು ಹಾಗೂ ಸಚಿವರಾದಂತಹ ಶಿವಾನಂದ ಪಾಟೀಲರ ತೀರ್ಮಾನದಂತೆ ನಾವೆಲ್ಲರೂ ನಡೆದುಕೊಳ್ಳುತ್ತೇವೆ.

-ರಫೀಕ್ ಪಕಾಲಿ,

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಕೊಲ್ಹಾರ.

ಬಿಜೆಪಿ ಪಕ್ಷದಲ್ಲಿ 3 ಜನ ಸದಸ್ಯರಿದ್ದೇವೆ. ಹೀಗಾಗಿ ಈ ಬಾರಿ ನಮ್ಮ ಪಕ್ಷಕ್ಕೆ ಸ್ಪಷ್ಟ ಬಹುಮತವಿಲ್ಲ. ಈ ಸದ್ಯ ಪಟ್ಟಣ ಪಂಚಾಯತಿಗೆ ಮೀಸಲಾತಿ ಪ್ರಕಟಗೊಂಡಿದೆ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಯವರೆಗೆ ಕಾದು ನೋಡುತ್ತೇವೆ.

-ಬಾಬು ಭಜಂತ್ರಿ,

ಪ.ಪಂ ಸದಸ್ಯರು, ಕೊಲ್ಹಾರ.