ಬಿಸಿಲಿನ ತಾಪ ತಗ್ಗಿಸಲು ತಂಪು ಪಾನೀಯಗಳ ಮೊರೆ ಹೋಗುವ ಬದಲು ಎಳನೀರು ಅತ್ಯಂತ ಶ್ರೇಷ್ಠ ಎಂದು ತಜ್ಞರು ಹೇಳುತ್ತಾರೆ. ಎಳನೀರು ಕುಡಿಯುವುದಿಂದ ದೇಹಕ್ಕೆ ಹಲವು ಪ್ರಯೋಜನಗಳಿವೆ ಎಂದು ಹೇಳುತ್ತಾರೆ.

ಎಸ್.ಜಿ. ತೆಗ್ಗಿನಮನಿ

ನರಗುಂದ: ತಾಲೂಕಿನಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರುತ್ತಿದೆ. ಜನರು ಸಾಮಾನ್ಯವಾಗಿ ತಂಪು ಪಾನೀಯಗಳ ಮೊರೆ ಹೋಗುತ್ತಾರೆ. ಎಳನೀರಿಗೆ ಬೇಡಿಕೆ ಹೆಚ್ಚಿದೆ. ಜತೆಗೆ ದರವೂ ಏರಿಕೆ ಕಂಡಿದೆ.

ಮಜ್ಜಿಗೆ, ಕಬ್ಬಿನ ಹಾಲು, ಎಳನೀರಿಗೆ ಹೆಚ್ಚು ಬೇಡಿಕೆ ಬಂದಿದೆ. ಮನುಷ್ಯನ ದೇಹಕ್ಕೆ ಹಲವಾರು ರೀತಿಯಲ್ಲಿ ಉಪಯುಕ್ತವೆನಿಸಿದ ಕಬ್ಬಿನ ಹಾಲು ಹೆಚ್ಚು ಮಾರಾಟವಾಗುತ್ತಿದೆ. ಒಂದು ಗ್ಲಾಸಿಗೆ ₹10 ಇದ್ದ ದರ ಈಗ ₹15ಕ್ಕೆ ಏರಿಕೆಯಾಗಿದೆ.

ಬಿಸಿಲಿನ ತಾಪ ತಗ್ಗಿಸಲು ತಂಪು ಪಾನೀಯಗಳ ಮೊರೆ ಹೋಗುವ ಬದಲು ಎಳನೀರು ಅತ್ಯಂತ ಶ್ರೇಷ್ಠ ಎಂದು ತಜ್ಞರು ಹೇಳುತ್ತಾರೆ. ಎಳನೀರು ಕುಡಿಯುವುದಿಂದ ದೇಹಕ್ಕೆ ಹಲವು ಪ್ರಯೋಜನಗಳಿವೆ ಎಂದು ಹೇಳುತ್ತಾರೆ.

₹60 ಏರಿಕೆ: ಈ ಮೊದಲು ಮಳೆ ಮತ್ತು ಚಳಿಗಾಲದಲ್ಲಿ ಎಳನೀರು 1ಕ್ಕೆ ₹20ರಿಂದ ₹30 ಇತ್ತು. ಆದರೆ ಬೇಸಿಗೆ ಪ್ರಾರಂಭವಾದಾಗಿನಿಂದ 1 ಎಳನೀರಿಗೆ ₹50ರಿಂದ ₹60ಕ್ಕೆ ಏರಿಕೆಯಾಗಿದೆ. ಗ್ರಾಹಕರಿಂದ ಬೇಡಿಕೆ ಹೆಚ್ಚಿದಂತೆ ಪೂರೈಕೆಯೂ ಕಡಿಮೆಯಾಗಿದೆ ಎಂದು ಎಳನೀರು ಮಾರಾಟಗಾರ ಚಂದ್ರಶೇಖರ ಹಡಪದ ಹೇಳಿದರು.

ತಾಪಮಾನ ಹೆಚ್ಚಾದಂತೆ, ದಿನಪೂರ್ತಿ ಬರುವ ಬೆವರು ದೇಹವನ್ನು ಅಂಟು ಮಾಡುವುದಷ್ಟೇ ಅಲ್ಲ, ದೇಹದಲ್ಲಿನ ನೀರಿನ ಪ್ರಮಾಣವೂ ಕಡಿಮೆಯಾಗುತ್ತದೆ. ಇದರಿಂದ ದೇಹ ಡಿಹೈಡ್ರೇಷನ್‌ಗೆ ಒಳಗಾಗುತ್ತದೆ. ಆದ್ದರಿಂದ ಉಷ್ಣಾಘಾತದಿಂದ ತಪ್ಪಿಸಿಕೊಳ್ಳಲು ಮತ್ತು ದೇಹವನ್ನು ಹೈಡ್ರೇಟ್ ಆಗಿ ಇಡಲು ಹೆಚ್ಚು ನೀರು ಕುಡಿಯುವುದು ತುಂಬಾ ಅಗತ್ಯ. ಡಿಹೈಡ್ರೇಷನ್‌ನಿಂದ ತಲೆಸುತ್ತು ಮತ್ತು ದುರ್ಬಲತೆ ಕಾಣಿಸಬಹುದು. ಈ ಸಮಯದಲ್ಲಿ ಎಳನೀರು ಅಥವಾ ಗ್ಲುಕೋಸ್ ಕುಡಿಯಬೇಕು.

ಎಳನೀರು ನೈಸರ್ಗಿಕ ಅಮೃತ, ಹೈಡ್ರೇಷನ್‌ಗೆ ಅತ್ಯುತ್ತಮ. ಎಳನೀರಿನಲ್ಲಿ ಪೊಟ್ಯಾಸಿಯಂ, ಮ್ಯಾಗ್ನೀಶಿಯಂ ಮತ್ತು ಸೋಡಿಯಂನಂತಹ ಎಲೆಕ್ಟ್ರೋಲೈಟ್‌ಗಳು ಸಮೃದ್ಧವಾಗಿವೆ. ದೇಹದ ನೀರಿನ ಕೊರತೆಯನ್ನು ಪೂರೈಸಲು ಇದು ಸಾಮಾನ್ಯ ನೀರಿಗಿಂತ ಹೆಚ್ಚು ಪ್ರಯೋಜನಕಾರಿ.

ವಿಶೇಷವಾಗಿ ವ್ಯಾಯಾಮದ ನಂತರ ಅಥವಾ ಬೇಸಿಗೆಯಲ್ಲಿ ಇದು ಅತ್ಯುತ್ತಮ. ಹೃದಯದ ಆರೋಗ್ಯಕ್ಕೆ ಉತ್ತಮ. ಪೊಟ್ಯಾಸಿಯಂ ರಕ್ತದ ಒತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ನಿಯಮಿತವಾಗಿ ಕುಡಿಯುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಇದರಿಂದ ಹೃದಯರೋಗದ ಅಪಾಯ ಕಡಿಮೆಯಾಗುತ್ತದೆ.

ಎಳನೀರಿನಲ್ಲಿ ಕ್ಯಾಲೊರಿಗಳು ಕಡಿಮೆ ಇರುತ್ತವೆ. ಇದು ದೇಹದಲ್ಲಿನ ವಿಷಕಾರಿ ಪದಾರ್ಥಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದರಲ್ಲಿರುವ ಸೈಟೋಕೈನಿನ್ ಚರ್ಮವನ್ನು ಯೌವನವಾಗಿಡಲು ಸಹಕಾರಿಯಾಗಿದೆ. ಮೊಡವೆ ಮತ್ತು ಕಲೆಗಳನ್ನು ಕಡಿಮೆ ಮಾಡುತ್ತದೆ. ಜೀರ್ಣಕ್ರಿಯೆ ಸುಧಾರಿಸುತ್ತದೆ. ಇದಲ್ಲಿರುವ ಫೈಬರ್ ಮತ್ತು ಮ್ಯಾಗ್ನೀಶಿಯಂ ಜೀರ್ಣಕ್ರಿಯೆಯನ್ನು ಸುಧಾರಿಸಿ ಮಲಬದ್ಧತೆ ಕಡಿಮೆ ಮಾಡುತ್ತದೆ. ತಕ್ಷಣ ಶಕ್ತಿ ನೀಡುತ್ತದೆ. ದೌರ್ಬಲ್ಯ ಅಥವಾ ಶಕ್ತಿಯ ಕೊರತೆ ಇದ್ದಾಗ ಇದನ್ನು ಬಳಸುವುದು ಒಳ್ಳೆಯದು.

ಮೆದುಳಿಗೆ ಇಂಧನ: ಮೆದುಳು ಹೆಚ್ಚು ಶಕ್ತಿಯನ್ನು ಬಳಸುತ್ತದೆ ಮತ್ತು ಗ್ಲೂಕೋಸ್ ಅದರ ಮುಖ್ಯ ಇಂಧನವಾಗಿದೆ. ಸರಿಯಾದ ಪ್ರಮಾಣದಲ್ಲಿ ಗ್ಲೂಕೋಸ್ ದೊರೆತರೆ ಏಕಾಗ್ರತೆ ಹೆಚ್ಚುತ್ತದೆ ಮತ್ತು ಮಾನಸಿಕ ದಣಿವು ಕಡಿಮೆಯಾಗುತ್ತದೆ. ಸ್ನಾಯುಗಳ ಪುನಶ್ಚೇತನ ವೇಗವಾಗಿ ವ್ಯಾಯಾಮ ಅಥವಾ ಕಠಿಣ ಶ್ರಮದ ನಂತರ ಗ್ಲೂಕೋಸ್ ಸೇವನೆಯಿಂದ ಸ್ನಾಯುಗಳು ಬೇಗ ಪುನಶ್ಚೇತನಗೊಳ್ಳುತ್ತವೆ. ತೀವ್ರ ಬೇಸಿಗೆಯಲ್ಲಿ ಗ್ಲೂಕೋಸ್ ದೇಹಕ್ಕೆ ಶಕ್ತಿ ನೀಡುವ ಜತೆಗೆ ಹೈಡ್ರೇಷನ್ ಕಾಪಾಡಲು ಸಹಾಯ ಮಾಡುತ್ತದೆ. ದೀರ್ಘಕಾಲದ ಆರೋಗ್ಯಕ್ಕಾಗಿ ಎಳನೀರು ಹೆಚ್ಚು ಉತ್ತಮ.

ಎಳನೀರು ಸೇವನೆ ಉತ್ತಮ: ಬೇಸಿಗೆ ಎನ್ನದೇ ಎಲ್ಲ ಕಾಲದಲ್ಲೂ ಎಳನೀರು ಸೇವನೆ ಉತ್ತಮ. ಆರೋಗ್ಯ ಸುಧಾರಣೆಯಾಗುವ ಜತೆಗೆ ಚರ್ಮ ಕಾಂತಿಯುತವಾಗುತ್ತದೆ. ದೇಹಕ್ಕೆ ಚೈತನ್ಯ ಸಿಗುತ್ತದೆ ಎಂದು ವೈದ್ಯ ಡಾ. ಜಿ.ಎಸ್. ನುಗ್ಗಾನಟ್ಟಿ ತಿಳಿಸಿದರು.