ಉತ್ಖನನ ಜಾಗದಲ್ಲಿ ಲೋಹದ ಉಂಡೆಯಾಕಾರದ ವಸ್ತು ಪತ್ತೆಯಾಗಿದ್ದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಅಂದಾಜು ಅರ್ಧ ಕೆಜಿಯಷ್ಟು ತೂಕ ಹೊಂದಿರುವ ಲೋಹದ ವಸ್ತುವಾಗಿದ್ದು, ಇದನ್ನು ಸಂಗ್ರಹಿಸಿ ಪರಿಶೀಲನೆ ರವಾನಿಸಲಾಗಿದೆ.
ಗದಗ: ಲಕ್ಕುಂಡಿಯಲ್ಲಿ ನಿಧಿ ಸಿಕ್ಕ ಸುದ್ದಿ ಹರಡುತ್ತಿದ್ದಂತೆಯೇ ಇಡೀ ಗ್ರಾಮದ ಭೂಮಿಯ ಬೆಲೆ ಗಗನಕ್ಕೇರಿದೆ!
ಈ ಹಿಂದೆ ಗ್ರಾಮದಲ್ಲಿ ಎಕರೆಗೆ ₹30ರಿಂದ ₹40 ಲಕ್ಷದಷ್ಟಿದ್ದ ಜಮೀನಿನ ಬೆಲೆ, ನಿಧಿ ಪತ್ತೆಯಾದ ಬೆನ್ನಲ್ಲೇ ಏಕಾಏಕಿ 80 ಲಕ್ಷದಿಂದ ₹1 ಕೋಟಿಯವರೆಗೆ ಏರಿಕೆಯಾಗಿದೆ ಎನ್ನುತ್ತಾರೆ ರಿಯಲ್ ಎಸ್ಟೇಟ್ ಉದ್ಯಮಿಗಳು.ಲಕ್ಕುಂಡಿ ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆಯಾಗುವ ಸಾಧ್ಯತೆ ದಟ್ಟವಾಗಿರುವುದರಿಂದ ಹೂಡಿಕೆದಾರರು ಆಸಕ್ತಿ ತೋರುತ್ತಿದ್ದು, ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಜಮೀನುಗಳಿಗಾಗಿ ಗದಗ, ಹುಬ್ಬಳ್ಳಿ ಸೇರಿದಂತೆ ಹೊರಜಿಲ್ಲೆಗಳ ಉದ್ಯಮಿಗಳು ಈಗಿನಿಂದಲೇ ಮುಗಿಬೀಳುತ್ತಿದ್ದಾರೆ.
ಉತ್ಖನನ ಜಾಗದಲ್ಲಿ ಲೋಹದ ಉಂಡೆಯಾಕಾರದ ವಸ್ತು ಪತ್ತೆಯಾಗಿದ್ದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಅಂದಾಜು ಅರ್ಧ ಕೆಜಿಯಷ್ಟು ತೂಕ ಹೊಂದಿರುವ ಲೋಹದ ವಸ್ತುವಾಗಿದ್ದು, ಇದನ್ನು ಸಂಗ್ರಹಿಸಿ ಪರಿಶೀಲನೆ ರವಾನಿಸಲಾಗಿದೆ. ಆಳಕ್ಕೆ ಇಳಿದಂತೆಲ್ಲ ಈ ಮಣ್ಣಿನಡಿ ಇನ್ನು ಯಾವುದೋ ದೊಡ್ಡ ರಹಸ್ಯ ಅಡಗಿದೆ ಎಂಬ ಕುತೂಹಲ ಹೆಚ್ಚುತ್ತಿದೆ.ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ: ಅರ್ಧ ಕೆಜಿ ಚಿನ್ನ ಸಿಕ್ಕರೂ ಅದನ್ನು ಆಸೆ ಪಡದೇ ಇಲಾಖೆಗೆ ಒಪ್ಪಿಸಿದ ಯುವಕ ಪ್ರಜ್ವಲ್ ರಿತ್ತಿ ಅವರ ಪ್ರಾಮಾಣಿಕತೆ ವಿದೇಶಿಗರಿಗೂ ಮಾದರಿಯಾಗಿದೆ. ಫ್ರಾನ್ಸ್ ದೇಶದ 15 ಪ್ರವಾಸಿಗರ ತಂಡವು ಶುಕ್ರವಾರ ಉತ್ಖನನ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿತು. ಆಗ ಪ್ರಜ್ವಲ್ ಅವರ ಪ್ರಾಮಾಣಿಕತೆಯನ್ನು ಮಿರಾಕಲ್ ಎಂದು ಬಣ್ಣಿಸಿದ ವಿದೇಶಿ ಪ್ರವಾಸಿಗರು, ಐತಿಹಾಸಿಕ ತಾಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ವಿದ್ಯಾರ್ಥಿಗಳ ಭೇಟಿ: ಉತ್ಖನನ ನಡೆಯುವ ಜಾಗಕ್ಕೆ ಧಾರವಾಡ ಕೃಷಿ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಭೇಟಿ ನೀಡಿ, ಉತ್ಖನನ ನಡೆಯು ಸ್ಥಳ ವೀಕ್ಷಿಸಿ, ಉತ್ಖನನ ನಿಯಮಗಳು ಅವುಗಳನ್ನು ಸಂಗ್ರಹಿಸುವ ರೀತಿ ಸೇರಿದಂತೆ ವಿವಿಧ ವಿಷಯ ಕುರಿತು ಮಾಹಿತಿ ಪಡೆದುಕೊಂಡರು.ಪುರಾತತ್ವ ಇಲಾಖೆಯ ತಜ್ಞರು ಮಣ್ಣಿನ ಬಿಲ್ಲೆಗಳು ಮತ್ತು ಮೂಳೆಗಳನ್ನು ಹೆಚ್ಚಿನ ಸಂಶೋಧನೆಗೆ ಒಳಪಡಿಸಲಿದ್ದಾರೆ. ಇವುಗಳು ಕಲ್ಯಾಣ ಚಾಲುಕ್ಯರ ಕಾಲದ್ದೇ ಅಥವಾ ಅದಕ್ಕಿಂತಲೂ ಪುರಾತನವಾದುದ್ದೇ ಎಂಬುದು ವರದಿಯ ನಂತರ ತಿಳಿಯಲಿದೆ. ಒಟ್ಟಿನಲ್ಲಿ ಲಕ್ಕುಂಡಿಯ ನೆಲದಲ್ಲಿ ಈಗ ಚರಿತ್ರೆ ಮತ್ತು ಭವಿಷ್ಯ ಎರಡೂ ಮಿನುಗುತ್ತಿವೆ ಎಂದು ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರರಾದ ಸಿದ್ದಲಿಂಗೇಶ್ವರ ಪಾಟೀಲ ತಿಳಿಸಿದರು.
ಉತ್ಖನನದಲ್ಲಿ ಹೈಡ್ರಾಮಾ, ವ್ಯಕ್ತಿಗೆ ಗ್ರಾಮಸ್ಥರ ಛೀಮಾರಿಗದಗ: ಜಿಲ್ಲೆಯ ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯವು ದಿನಕ್ಕೊಂದು ತಿರುವು ಪಡೆಯುತ್ತಿದೆ. ಎಂಟನೇ ದಿನದ ಉತ್ಖನನದ ವೇಳೆ ಪ್ರಾಚೀನ ಅವಶೇಷಗಳು ಪತ್ತೆಯಾಗಿ ಕುತೂಹಲ ಮೂಡಿಸಿದರೆ, ಮತ್ತೊಂದೆಡೆ ಹೋರಾಟದ ಹೆಸರಲ್ಲಿ ಅಡ್ಡಿಪಡಿಸಲು ಬಂದ ವ್ಯಕ್ತಿಯೊಬ್ಬನನ್ನು ಗ್ರಾಮಸ್ಥರೇ ಛೀಮಾರಿ ಹಾಕಿದ ಘಟನೆ ನಡೆದಿದೆ.ಶುಕ್ರವಾರ ಉತ್ಖನನ ನಡೆಯುತ್ತಿದ್ದ ಜಾಗಕ್ಕೆ ಆಗಮಿಸಿದ ಬೆಂಗಳೂರು ಮೂಲದ ಅಶ್ವಥ್ ಮರಿಗೌಡರ್ ಎಂಬವರು ದಿಢೀರ್ ಧರಣಿ ಕುಳಿತು ಹೈಡ್ರಾಮಾ ಸೃಷ್ಟಿಸಿದರು. ನಾನು ಅಸಂಘಟಿತ ಕಾರ್ಮಿಕರ ರಾಜ್ಯಾಧ್ಯಕ್ಷ ಎಂದು ಹೇಳಿಕೊಂಡು ಬಂದು ಉತ್ಖನನದಲ್ಲಿ ತೊಡಗಿರುವ ಕಾರ್ಮಿಕರಿಗೆ ಸೌಲಭ್ಯ ನೀಡಬೇಕೆಂದು ಪಟ್ಟು ಹಿಡಿದರು.ಆದರೆ, ಐತಿಹಾಸಿಕ ಕಾರ್ಯಕ್ಕೆ ಅಡ್ಡಿಪಡಿಸುತ್ತಿರುವುದನ್ನು ಕಂಡು ಕೆರಳಿದ ಲಕ್ಕುಂಡಿ ಗ್ರಾಮಸ್ಥರು, ನಮ್ಮ ಗ್ರಾಮದ ಸಮಸ್ಯೆ ಬಗೆಹರಿಸಿಕೊಳ್ಳಲು ನಮಗೆ ಗೊತ್ತಿದೆ. ಹೊರಗಿನವರ ಹಸ್ತಕ್ಷೇಪ ಬೇಡ ಎಂದು ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡರು. ಕಾರ್ಮಿಕರ ಪರ ಹೋರಾಟದ ಹೆಸರಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳಲು ಬಂದಿದ್ದ ಅಶ್ವಥ್‌ನನ್ನು ಗ್ರಾಮಸ್ಥರು ಸ್ಥಳದಿಂದ ಹೊರಹಾಕುವ ಮೂಲಕ ಶಿಸ್ತಿನ ಎಚ್ಚರಿಕೆ ನೀಡಿದರು. ನಂತರ ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದು, ವಿಚಾರಿಸಿದರು.