ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಆದ್ಯತೆ ಇತರೆ ಕಲೆಗಳಿಗೂ ಸಿಗಲಿ

| Published : Jun 29 2025, 01:33 AM IST

ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಆದ್ಯತೆ ಇತರೆ ಕಲೆಗಳಿಗೂ ಸಿಗಲಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಸಾಹಿತ್ಯ ಸಮ್ಮೇಳನದ ರೀತಿಯಲ್ಲಿ ಇದೇ ಮೊದಲ ಬಾರಿ ಚಿತ್ರಕಲಾ ಕಲಾವಿದರ ಸಮ್ಮೇಳನ ಆಯೋಜಿಸುವ ಉದ್ದೇಶ ಹೊಂದಲಾಗಿದೆ. ನಾಲ್ಕೂ ವಿಭಾಗಗಳಲ್ಲಿ ಈ ಕುರಿತು ಚರ್ಚೆ ನಡೆಸಲಾಗುವುದು. ಕಲಾವಿದರ ಒಮ್ಮತ ಪಡೆದು ಧಾರವಾಡದಲ್ಲೇ ಮೊದಲ ಸಮ್ಮೇಳನ ಜರುಗಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು.

ಹುಬ್ಬಳ್ಳಿ: ಕನ್ನಡ ಸಾಹಿತ್ಯ ಪರಿಷತ್‌ಗೆ ಸಿಗುತ್ತಿರುವ ಪ್ರಾಧಾನ್ಯತೆ ಇತರ ಕಲೆಗಳಿಗೂ ಸಿಗಲಿ. ಈ ನಿಟ್ಟಿನಲ್ಲಿ ಕಲಾವಿದರಿಗೆ ಗಟ್ಟಿ ಧ್ವನಿ ಬೇಕಿದೆ ಎಂದು ಕರ್ನಾಟಕ ಲಲಿತಕಲಾ ಅಕಾಡಮಿ ಅಧ್ಯಕ್ಷ ಪ.ಸ. ಕುಮಾರ ಹೇಳಿದರು.

ನಗರದ ಶ್ರೀ ವಿಜಯ ಮಹಾಂತೇಶ ಲಲಿತಕಲಾ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ಸಾಹಿತ್ಯದ ಜತೆಗೆ ಚಿತ್ರಕಲೆ, ನಾಟಕ, ಶಿಲ್ಪಕಲೆ, ಜನಪದ ಸೇರಿದಂತೆ ಎಲ್ಲ ಕ್ಷೇತ್ರಕ್ಕೂ ಆದ್ಯತೆ ನೀಡಬೇಕು. ಸಮಾಜದಲ್ಲಿ ಎಲ್ಲ ಕ್ಷೇತ್ರಗಳ ಬೆಳವಣಿಗೆ ಆಗಬೇಕು. ಇತ್ತೀಚಿಗೆ ಸರ್ಕಾರ ಸಾಹಿತ್ಯ ಪರಿಷತ್ತಿಗೆ ₹30 ಕೋಟಿ ನೀಡಿ ಲಲಿತಕಲಾ ಅಕಾಡೆಮಿಯನ್ನು ಕಡೆಗಣಿಸಿದೆ. ದ.ರಾ. ಬೇಂದ್ರೆ, ಕುವೆಂಪು, ಪಾಟೀಲ ಪುಟ್ಟಪ್ಪ ಅವರಂತಹ ಸಾಹಿತಿಗಳಿಂದ ಸಾಹಿತ್ಯ ಕ್ಷೇತ್ರ ಸಂಪತ್ಭರಿತವಾಗಿ ಬೆಳೆದಿದೆ. ಆದರೆ, ಚಿತ್ರಕಲೆ ಸೇರಿ ಇತರ ಕಲೆಗಳು ಕಡೆಗಣನೆಗೆ ಒ‍ಳಗಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಚಿತ್ರಕಲಾವಿದರ ಸಮಸ್ಯೆ, ಬೆಳವಣಿಗೆ, ವಿದ್ಯಾರ್ಥಿಗಳಿಗೆ ಸಿಗಬೇಕಾದ ಸೌಲಭ್ಯಗಳ ಕುರಿತಂತೆ ಚರ್ಚಿಸಲು ರಾಜ್ಯದ ನಾಲ್ಕೂ ವಿಭಾಗಳಿಗೂ ಭೇಟಿ ನೀಡಿ ಸಮಾಲೋಚನಾ ಸಭೆ ನಡೆಸುತ್ತಿದ್ದೇನೆ. ಇಲ್ಲಿ ವ್ಯಕ್ತವಾಗುವ ಅಭಿಪ್ರಾಯ, ಅಭಿಮತ, ಅಹವಾಲುಗಳ ಕುರಿತಂತೆ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಸಮ್ಮೇಳನ: ಕನ್ನಡ ಸಾಹಿತ್ಯ ಸಮ್ಮೇಳನದ ರೀತಿಯಲ್ಲಿ ಇದೇ ಮೊದಲ ಬಾರಿ ಚಿತ್ರಕಲಾ ಕಲಾವಿದರ ಸಮ್ಮೇಳನ ಆಯೋಜಿಸುವ ಉದ್ದೇಶ ಹೊಂದಲಾಗಿದೆ. ನಾಲ್ಕೂ ವಿಭಾಗಗಳಲ್ಲಿ ಈ ಕುರಿತು ಚರ್ಚೆ ನಡೆಸಲಾಗುವುದು. ಕಲಾವಿದರ ಒಮ್ಮತ ಪಡೆದು ಧಾರವಾಡದಲ್ಲೇ ಮೊದಲ ಸಮ್ಮೇಳನ ಜರುಗಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದರು.

ತಾವು ಲಲಿತಕಲಾ ಅಕಾಡೆಮಿ ಅಧ್ಯಕ್ಷರಾಗಿ ಆಯ್ಕೆಯಾದ ಮೇಲೆ ''''ಮನೆಗೊಂದು ಕಲಾಕೃತಿ'''' ಕಾರ್ಯಕ್ರಮ ಮಾಡಿದ್ದು, ಚಿತ್ರಕಲಾವಿದರು ರಚಿಸಿದ ಚಿತ್ರಗಳನ್ನು ಮಾರಾಟ ಮಾಡಿ ₹6.5 ಲಕ್ಷ ಸಂಗ್ರಹಿಸಿದ್ದೇವೆ. ಈ ಹಣವನ್ನು ಚಿತ್ರಕಲಾ ವಿದ್ಯಾರ್ಥಿಗಳಿಗಾಗಿ ವಿನಿಯೋಗಿಸಲಾಗುತ್ತಿದೆ. ಲಲಿತಕಲಾ ಅಕಾಡೆಮಿಯಿಂದ ಮಹಿಳೆಯರಿಗಾಗಿ ಪ್ರತ್ಯೇಕ ಮಹಿಳಾ ವಿಭಾಗ ಮಾಡಿ ಅವರ ಕಾರ್ಯ ಗುರುತಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಸ್ವರ್ಣ ಸಮೂಹ ಸಂಸ್ಥೆಗಳ ಎಂ.ಡಿ. ವಿಎಸ್‌ವಿ ಪ್ರಸಾದ ಮಾತನಾಡಿ, ಕಲಾವಿದರ ಚಿತ್ರಗಳಿಗೆ ಬೆಲೆ ಕಟ್ಟಲಾಗದು. ಧಾರವಾಡ ಸಾಹಿತ್ಯ ಕ್ಷೇತ್ರದಲ್ಲಿ ವಿಶ್ವದಲ್ಲಿ ಖ್ಯಾತಿ ಪಡೆದಿದೆ. ಅದೇ ಧಾರವಾಡದ ರೀತಿ ಚಿತ್ರಕಲಾವಿದರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುವಂತಹ ಚಿತ್ರ ಬಿಡಿಸಲಿ, ಈ ನೆಲದ ವೈಶಿಷ್ಟ ಇನ್ನೂ ಹೆಚ್ಚಾಗಲಿ ಎಂದರು.

ಮದುವೆ- ಮುಂಜಿ ಸೇರಿ ಸಮಾರಂಭಗಳಲ್ಲಿ ಚಿತ್ರಗಳನ್ನು ಉಡುಗೊರೆಯಾಗಿ ನೀಡುವ ಸಂಪ್ರದಾಯ ನಾವೆಲ್ಲ ಬೆಳೆಸಿಕೊಳ್ಳಬೇಕು. ಆ ಮೂಲಕ ಚಿತ್ರಕಲಾವಿದರಿಗೆ ಪ್ರೋತ್ಸಾಹ ನೀಡಬೇಕು ಎಂದ ಅವರು, ಚಿತ್ರಕಲಾವಿದರ ಬೇಡಿಕೆಯಂತೆ ಶ್ರೀ ವಿಜಯ ಮಹಾಂತೇಶ ಲಲಿತಕಲಾ ಮಹಾವಿದ್ಯಾಲಯದಲ್ಲಿ ಸುಸಜ್ಜಿತ ಆರ್ಟ್‌ ಗ್ಯಾಲರಿ ನಿರ್ಮಿಸಿಕೊಡುವ ಕುರಿತು ಮನವಿ ಮಾಡಿದ್ದಾರೆ. ಈ ಕುರಿತು ಕೈಲಾದಷ್ಟು ಸಹಾಯ ಮಾಡುವುದಾಗಿ ಭರವಸೆ ನೀಡಿದರು.

ಕೇಂದ್ರ ಲಲಿತಕಲಾ ಅಕಾಡಮಿ ಪ್ರಾದೇಶಿಕ ಕಚೇರಿ ಸಂಯೋಜಕ ಶ್ರೀನಿವಾಸ ಶಾಸ್ತ್ರಿ ಮಾತನಾಡಿ, ಹೊಸತನ್ನು ಕಂಡುಹಿಡಿಯುವುದು ಅಕಾಡಮಿಗಳ ಕೆಲಸ. ಆದರೆ, ಸಮರ್ಪಕ ಅನುದಾನ ಸಿಗುತ್ತಿಲ್ಲ ಎಂದ ಅವರು, ಸಾಹಿತ್ಯ ಪರಿಷತ್‌ನಂತೆ ನಿರಂತರವಾಗಿ ಚಿತ್ರಕಲಾ ಕಾರ್ಯಾಗಾರ ನಡೆಯಬೇಕಿದೆ ಎಂದ ಅವರು, ಧಾರವಾಡದಲ್ಲಿ ಲಲಿತಕಲಾ ಅಕಾಡಮಿ ಪ್ರಾದೇಶಿಕ ಕಚೇರಿ ತೆರೆಯಲು ಅಧ್ಯಕ್ಷರಿಗೆ ಮನವಿ ಮಾಡಿದರು.

ಚಿತ್ರಕಲಾ ಪ್ರದರ್ಶನದಲ್ಲಿ ಅಪರೂಪದ ಚಿತ್ರಗಳು ಕಲಾಸಕ್ತರ ಗಮನ ಸೆಳೆದವು. ಸುಮಾರು 60 ಜನ ಕಲಾವಿದರ ಚಿತ್ರಗಳ ಪ್ರದರ್ಶನಕ್ಕಿಡಲಾಗಿದೆ.

ಕಾರ್ಯಕ್ರಮದಲ್ಲಿ ಜ. ಮೂರುಸಾವಿರ ಮಠ ವಿದ್ಯಾವರ್ದಕ ಸಂಘದ ಗೌರವ ನಿರ್ದೇಶಕ ಶಶಿ ಸಾಲಿ, ಪ್ರಾಚಾರ್ಯ ಆರ್.ಎಫ್. ಹಿರೇಗೌಡರ, ಅರವಿಂದ ಕುಬಸದ, ಅನೇಕ ಕಲಾವಿದರು ಉಪಸ್ಥಿತರಿದ್ದರು. ಡಾ. ಪಿ.ಆರ್‌. ಬಹುರೂಪಿ ನಿರೂಪಿಸಿದರು.