ಸಾರಾಂಶ
ತಾಲೂಕಿನ ಬೇಗೂರು ಪ್ರಮುಖ ಹೋಬಳಿ ಕೇಂದ್ರದಲ್ಲಿ ಹಂದಿ ಹಾವಳಿ ಮಿತಿ ಮೀರಿದ್ದು ಹಂದಿಗಳ ಹಾವಳಿಗೆ ಗ್ರಾಮದ ಜನರು ಹಾಗೂ ವಾಹನ ಸವಾರರು ಹೈರಾಣವಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ತಾಲೂಕಿನ ಬೇಗೂರು ಪ್ರಮುಖ ಹೋಬಳಿ ಕೇಂದ್ರದಲ್ಲಿ ಹಂದಿ ಹಾವಳಿ ಮಿತಿ ಮೀರಿದ್ದು ಹಂದಿಗಳ ಹಾವಳಿಗೆ ಗ್ರಾಮದ ಜನರು ಹಾಗೂ ವಾಹನ ಸವಾರರು ಹೈರಾಣವಾಗಿದ್ದಾರೆ.ಗ್ರಾಮದಲ್ಲಿ ಹಂದಿ ಸಾಕುವ ಜನರು ಹಂದಿಗಳನ್ನು ಕೊಟ್ಟಿಗೆಯಲ್ಲಿ ಸಾಕುತ್ತಿಲ್ಲ. ಬದಲಾಗಿ ಬೀದಿಗೆ ಬಿಡುತ್ತಿದ್ದಾರೆ. ಹಂದಿ ರಸ್ತೆಗೆ ಬಿಡದಂತೆ ಗ್ರಾಪಂ ಹೇಳದ ಕಾರಣ ಹಂದಿಗಳ ಹಾವಳಿ ಮಿತಿ ಮೀರಿ ಹೋಗಿದೆ. ಗ್ರಾಮದಲ್ಲಿ ಹಂದಿಗಳ ಹಾವಳಿ ತಡೆಗೆ ಸ್ಥಳೀಯ ಬೇಗೂರು ಗ್ರಾಪಂ ಸಂಪೂರ್ಣ ವಿಫಲವಾಗಿದೆ? ಹಂದಿಗಳ ಹಾವಳಿಗೆ ಜನರು ಹಾಗೂ ವಾಹನಗಳ ಸವಾರರೊಂದಿಗೆ ಗ್ರಾಪಂ ಹುಡುಗಾಟವಾಡುತ್ತಿದೆ.
ಬೇಗೂರಂತ ಗ್ರಾಮದಲ್ಲಿ ಬೆಳಗ್ಗೆಯಿಂದ ಸಂಜೆಯ ತನಕ ಗ್ರಾಮದೊಳಗೆ ಹಾಗೂ ಮೈಸೂರು-ಊಟಿ ಹೆದ್ದಾರಿಯಲ್ಲಿ ಹಂದಿಗಳ ಓಡಾಟದ ದೃಶ್ಯಗಳು ಕಣ್ಣಿಗೆ ರಾಚುತ್ತಿದೆ. ಹೆದ್ದಾರಿಯಲ್ಲಿ ದಿನ ನಿತ್ಯ ಸಾವಿರಾರು ವಾಹನಗಳ, ದೇಶ, ವಿದೇಶಗಳ ಪ್ರವಾಸಿಗರು ಸಂಚರಿಸುತ್ತಿದ್ದಾರೆ. ಹಂದಿಗಳು ಹೆದ್ದಾರಿಯಲ್ಲಿ ರಾಜರೋಷವಾಗಿ ಸಂಚರಿಸುತ್ತಿವೆ.ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.ಕುಂಟು ನೆಪ ?:
ಬೇಗೂರಲ್ಲಿ ಹಂದಿ ಸಾಕುವ ಮಂದಿಯ ಓಟಿಗಾಗಿ ಸ್ಥಳೀಯ ಗ್ರಾಪಂ ಕೆಲ ಸದಸ್ಯರು ಹಂದಿ ಹಿಡಿಸುತ್ತಿಲ್ಲ. ಹಂದಿ ಹಿಡಿಸದರೆ ಹಂದಿ ಸಾಕುವ ಜನರು ಮುನಿಸಿಕೊಳ್ಳುತ್ತಾರೆಂಬ ನೆಪ ಹೇಳಿ ಹಂದಿ ಹಿಡಿಸುತ್ತಿಲ್ಲ. ಗ್ರಾಮದ ಹೆದ್ದಾರಿಯಲ್ಲಿ ದಿಢೀರ್ ಹಂದಿಗಳು ಅತ್ತಿಂದಿತ್ತಿಂದ ನುಗ್ಗುತ್ತವೆ. ಹಂದಿಗೆ ಬೈಕ್ ಸವಾರರು ಡಿಕ್ಕಿ ಹೊಡೆದು ಗಾಯಗೊಂಡಿದ್ದಾರೆ. ದೊಡ್ಡ ವಾಹನಗಳು ಹಂದಿಗೆ ಡಿಕ್ಕಿ ಹೊಡೆದಿವೆ.ಹೆದ್ದಾರಿಯಲ್ಲಿ ದಿಢೀರ್ ನುಗ್ಗುವ ಹಂದಿಗಳಿಗೆ ವಾಹನಗಳು ಡಿಕ್ಕಿ ಹೊಡೆಯುವುದು ಒಂದೆಡೆಯಾದರೆ ಮತ್ತೊಂದೆಡೆ ಹಂದಿಗಳ ಗ್ರಾಮದೊಳಗಿನ ಮನೆಗಳ ಮುಂದಿನ ಚರಂಡಿ ಬಿದ್ದು ಮನೆಯ ಮುಂದೆ ಕೆಸರು ಚೆಲ್ಲಿ ಹೋಗುತ್ತಿವೆ.
ಅಲ್ಲದೆ ಮನೆಯ ಮುಂದೆ ಹಂದಿಗಳ ತಿರುಗಾಟ ಮತ್ತು ಮನೆಯ ಮುಂದೆ ಇದ್ದ ವಸ್ತುಗಳನ್ನು ಚೆಲ್ಲಾ ಪಿಲ್ಲಿಯಾಗಿ ಚೆಲ್ಲುತ್ತಿವೆ ಹಾಗೂ ಗ್ರಾಮದೊಳಗೂ ಹಂದಿಗಳ ದರ್ಬಾರ್ ನಡೆಸುತ್ತಿವೆ. ಬೇಸಿಗೆ ಆರಂಭವಾಗಿದ್ದು ಸಾಂಕ್ರಾಮಿಕ ರೋಗ ಹರಡುವ ಸಂಭವ ಇದ್ದರೂ ಸ್ಥಳೀಯ ಬೇಗೂರು ಗ್ರಾಪಂ ಹಂದಿಗಳ ಸಾಕಾಣಿಕೆಗೆ ಬ್ರೇಕ್ ಹಾಕುವ ಮೂಲಕ ಹಂದಿಗಳ ಹಾವಳಿ ತಪ್ಪಿಸುವ ಕೆಲಸ ಮಾಡಬೇಕಿದೆ.ಬೀದಿಗೆ ಬುಡಂಗಿಲ್ಲ:
ಗ್ರಾಮದಲ್ಲಿ ಹಂದಿ ಸಾಕುವ ಜನರು ಹಂದಿಗಳಿಗೆ ಶೆಡ್ಡು ನಿರ್ಮಿಸಿ ಹಂದಿ ಸಾಕುತ್ತಿಲ್ಲ. ಹಂದಿಗಳು ಗ್ರಾಮದೊಳಗೆಲ್ಲ ತಿರುಗಾಡಲು ಬಿಡುವುದನ್ನು ತಡೆಯಲು ಗ್ರಾಪಂ ಮುಂದಾಗುತ್ತಿಲ್ಲ. ಹಂದಿಗಳ ಹಾವಳಿ ಗ್ರಾಮದಲ್ಲಿ ಯಾವಾಗಲು ಇದ್ದದ್ದೇ? ಹಾಗಂತ ರಸ್ತೆಯಲ್ಲಿ ಮೇಯಲು ಅವಕಾಶವಿಲ್ಲ.ಗ್ರಾಮದ ಜನರ ಹಿತದೃಷ್ಟಿಯಿಂದ ಊರಿನಿಂದಾಚೆ ಸಾಕಲು ಹೇಳುತ್ತಿಲ್ಲ ಎಂಬುದು ಗ್ರಾಮಸ್ಥರ ದೂರಾಗಿದೆ.ಬೇಗೂರು ಗ್ರಾಮದಲ್ಲಿ ಹಂದಿಗಳ ಹಾವಳಿ ಮಿತಿ ಮೀರಿರುವ ಬಗ್ಗೆ ಕನ್ನಡಪ್ರಭ ಗಮನಕ್ಕೆ ತಂದಿದೆ. ಹಂದಿಗಳನ್ನು ಗ್ರಾಮದಾಚೆ ಸಾಕುವಂತೆ ನೋಟೀಸ್ ಕೊಡಲು ಪಿಡಿಒಗೆ ಸೂಚಿಸುತ್ತೇನೆ.
ರಾಮಲಿಂಗಯ್ಯ,ತಾಪಂ ಇಒ