ಬಿಡಾಡಿ ದನಗಳ ಹಾವಳಿ ನಿಯಂತ್ರಣಕ್ಕೆ ಸಂಸದ ಹಾಗೂ ಶಾಸಕರು ಜಂಟಿ ಸಭೆ ನಡೆಸಿ, ನಗರಸಭೆಗೆ ಆದೇಶ ನೀಡಿ, 20 ದಿನ ಕಳೆದರೂ ಯಾವುದೇ ಕ್ರಮವಾಗಿಲ್ಲ. ಬಿಡಾಡಿ ಜಾನುವಾರುಗಳಿಂದ ಆಗುತ್ತಿರುವ ಸಮಸ್ಯೆ ಹಾಗೆಯೇ ಇದೆ.
ಕನ್ನಡಪ್ರಭ ವಾರ್ತೆ ಶಿರಸಿ
ಬಿಡಾಡಿ ದನಗಳ ಹಾವಳಿ ನಿಯಂತ್ರಣಕ್ಕೆ ಸಂಸದ ಹಾಗೂ ಶಾಸಕರು ಜಂಟಿ ಸಭೆ ನಡೆಸಿ, ನಗರಸಭೆಗೆ ಆದೇಶ ನೀಡಿ, 20 ದಿನ ಕಳೆದರೂ ಯಾವುದೇ ಕ್ರಮವಾಗಿಲ್ಲ. ಬಿಡಾಡಿ ಜಾನುವಾರುಗಳಿಂದ ಆಗುತ್ತಿರುವ ಸಮಸ್ಯೆ ಹಾಗೆಯೇ ಇದೆ.ನಗರ ವ್ಯಾಪ್ತಿ ಹಾಗೂ ರಸ್ತೆಗಳಲ್ಲಿ ಬಿಡಾಡಿ ದನಗಳಿಂದ ಪ್ರತಿನಿತ್ಯ ಒಂದಿಲ್ಲೊಂದು ಅಪಘಾತ ಸಂಭವಿಸುತ್ತಿರುವ ಹಿನ್ನೆಲೆ ಅವುಗಳನ್ನು ನಿಯಂತ್ರಿಸಲು ನ. 18ರಂದು ನಗರದ ಆಡಳಿತ ಸೌಧದ ಸಭಾಂಗಣದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಶಾಸಕ ಭೀಮಣ್ಣ ನಾಯ್ಕ ಜಂಟಿ ಅಧ್ಯಕ್ಷತೆಯಲ್ಲಿ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಿ, ನಗರಸಭೆ, ಪೊಲೀಸ್ ಮತ್ತು ಪಶು ಸಂಗೋಪನಾ ಇಲಾಖೆಗಳ ಜಂಟಿ ಕಾರ್ಯಾಚರಣೆ ನಡೆಸಲು ತೀರ್ಮಾನ ಕೈಗೊಂಡಿದ್ದರು. ರಸ್ತೆಯಲ್ಲಿ ಕಂಡುಬರುವ ಜಾನುವಾರುಗಳನ್ನು ವಶಕ್ಕೆ ಪಡೆದು ಕೊಂಡವಾಡೆಗೆ ಸಾಗಿಸಿ, ಮಾಲಕರು ಅದನ್ನು ಪಡೆಯಲು ಬಂದ ವೇಳೆ ಪ್ರತಿ ದಿನ ನಿರ್ವಹಣಾ ವೆಚ್ಚ ₹250 ರಿಂದ 300 ಪಡೆಯುವುದು ಮತ್ತು ಇನ್ನು ಮುಂದೆ ಅವುಗಳನ್ನು ರಸ್ತೆಗೆ ಬಿಡದಂತೆ ಕರಾರು ಪತ್ರ ಪಡೆಯಲು ಕಾರ್ಯಾಚರಣೆ ಆರಂಭಿಸಲು ಸೂಚಿಸಲಾಗಿತ್ತು. 20ದಿನ ಕಳೆದರೂ ಇಲಾಖೆಗಳ ಮೌನ ವಹಿಸಿರುವುದಕ್ಕೆ ಸಾರ್ವಜನಿಕರು ಪ್ರಶ್ನಿಸುತ್ತಿರುವುದಲ್ಲದೇ, ಸಂಸದರ ಹಾಗೂ ಶಾಸಕರು ಆದೇಶಕ್ಕೂ ಅಧಿಕಾರಿಗಳು ಬೆಲೆ ನೀಡುತ್ತಿಲ್ಲವೇ ಎಂದು ಪ್ರಶ್ನಿಸುತ್ತಿದ್ದಾರೆ.
ನಗರದ ಝೂ ಸರ್ಕಲ್, ಬಿಡ್ಕಿಬೈಲ್, ಶಿವಾಜಿ ಚೌಕ, ಅಶ್ವಿನಿ ಸರ್ಕಲ್, ಟಿಎಸ್‌ಎಸ್, ಕಾಲೇಜು, ಹುಲೇಕಲ್ ರಸ್ತೆ, ಯಲ್ಲಾಪುರ ನಾಕಾ ಸೇರಿದಂತೆ ಇನ್ನುಳಿದ ಕಡೆಗಳಲ್ಲಿ ಬಿಡಾಡಿ ದನಗಳಿಂದ ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಪ್ರತಿನಿತ್ಯವೂ ಕಿರಿಕಿರಿ ಅನುಭವಿಸುತ್ತಿದ್ದಾರೆ. ಜಾನುವಾರುಗಳನ್ನು ಕಟ್ಟಿ ಸಾಕುತ್ತಿಲ್ಲ. ಬಿಡಾಡಿ ದನಗಳ ಹಿಂಡು ಹಿಂಡಾಗಿ ರಸ್ತೆಯ ಮಧ್ಯದಲ್ಲಿಯೇ ಮಲಗುವುದು ಹಾಗೂ ಒಂದಕ್ಕೊಂದು ಹಾಯುತ್ತಾ ರಸ್ತೆಯಲ್ಲಿಯೇ ಕಾದಾಡಲು ಪ್ರಾರಂಭಿಸಿದರೆ, ಆ ರಸ್ತೆಯಲ್ಲಿ ಸಂಚಾರವೇ ಸಂಪೂರ್ಣಗೊಳ್ಳುತ್ತದೆ. ಶಿರಸಿ ನಗರದಲ್ಲಿ ಬಿಡಾಡಿ ದನಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆ ಅಪಾಯ ಉಂಟಾಗುತ್ತಿದೆ. ಆದರೂ ಇಲಾಖೆಯು ಮಾತ್ರ ನಿರ್ಲಕ್ಷ್ಯ ವಹಿಸುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.ಕೊಂಡವಾಡಿ ಬಳಕೆಗಿಲ್ಲ:
ನಗರದ ರಾಘವೇಂದ್ರ ಸರ್ಕಲ್ ಬಳಿಯಲ್ಲಿರುವ ನೀರು ಶುದ್ಧೀಕರಣ ಘಟಕದ ಬಳಿಯಲ್ಲಿ ನಗರಸಭೆಯು ಅಂದಾಜು ₹21 ಲಕ್ಷ ಅನುದಾನದಲ್ಲಿ ಕೊಂಡವಾಡಿ ನಿರ್ಮಾಣಗೊಂಡಿದೆ. ಆದರೆ ಅದರ ಬಳಕೆ ಮಾತ್ರ ಇನ್ನೂ ಆಗಿಲ್ಲ. ಕಾಟಾಚಾರಕ್ಕೆ ನಿರ್ಮಿಸದಂತಾಗಿದ್ದು, ಬಿಡಾಡಿ ದನಗಳ ನಿಯಂತ್ರಣದ ನೆಪದಲ್ಲಿಯಾದರೂ ಅದನ್ನು ಬಳಕೆಗೆ ನಗರಸಭೆ ಕ್ರಮ ಕೈಗೊಳ್ಳಬೇಕಿದೆ.ಸರ್ಕಾರಿ ಗೋ ಶಾಲೆ ಬಳಕೆಯಾಗಲಿ:ಅನಾಥ, ವೃದ್ಧ, ಬಿಡಾಡಿ ಮತ್ತು ವಧಾಗೃಹಗಳಿಗೆ ಸಾಗಿಸುವ ವೇಳೆ ರಕ್ಷಣೆಗೊಳಪಟ್ಟ ದನ-ಕರುಗಳಿಗಾಗಿ ತಾಲೂಕಿನ ಅಜ್ಜೀಬಳದಲ್ಲಿ ₹50 ಲಕ್ಷ ವೆಚ್ಚದಲ್ಲಿ ಸುಮಾರು 7 ಎಕರೆ ಜಾಗದಲ್ಲಿ ಗರಿಷ್ಠ 100 ದನಗಳಿಗೆ ಆಶ್ರಯ ನೀಡಲು ಸರ್ಕಾರ ವತಿಯಿಂದ ಗೋ ಶಾಲೆ ನಿರ್ಮಿಸಲಾಗಿದೆ. ಪ್ರತಿವರ್ಷ ನಿರ್ವಹಣೆಗೆ ₹50ರಿಂದ 60 ಲಕ್ಷ ಅನುದಾನ ಅವಶ್ಯವಿರುತ್ತದೆ. ಆದರೆ ನಿರ್ವಹಣೆಗೆ ಅನುದಾನ ಕೊರತೆಯಿಂದ ಇನ್ನೂ ಆರಂಭಗೊಂಡಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.