ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿ
ತಾಲೂಕಿನಲ್ಲಿ ಬೇಸಿಗೆ ಆರಂಭವಾಗುವ ಮುನ್ನವೇ ಕುಡಿಯುವ ನೀರಿನ ಸಮಸ್ಯೆ ಆರಂಭವಾಗಿದೆ. ಸರ್ಕಾರ ಈಗಾಗಲೇ ಅಥಣಿ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿ ಮೂರು ತಿಂಗಳಾದರೂ ಯಾವುದೇ ಬರ ಪರಿಹಾರ ಬಂದಿಲ್ಲ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಗ್ರಾಮಮಟ್ಟದ ಅಧಿಕಾರಿಗಳಿಗೆ ಮೇಲಧಿಕಾರಿಗಳು ಅನುಮತಿ ನೀಡದೆ ಇರುವುದು ತೋಟದ ವಸತಿ ಜನರಿಗೆ ಸಕಾಲಕ್ಕೆ ನೀರು ಸರಬರಾಜು ಸಾಧ್ಯವಾಗುತ್ತಿಲ್ಲ. ಇದು ಜನಾಕ್ರೋಶಕ್ಕೆ ಕಾರಣವಾಗಿದೆ.ತಾಲೂಕಿನ ಪೂರ್ವ ಭಾಗದ ತೆಲಸಂಗ ಹೋಬಳಿ ಮಟ್ಟದ ತೆಲಸಂಗ, ಪಡತರವಾಡಿ, ಐಗಳಿ, ಕೋಹಳ್ಳಿ, ಕೆಸ್ಕರದಡ್ಡಿ, ಕಕಮರಿ, ರಾಮತೀರ್ಥ, ಕೊಟ್ಟಲಗಿ, ಬನ್ನೂರ, ಕನ್ನಾಳ, ಹಾಲಳ್ಳಿ, ಅರಟಾಳ, ಬಾಡಗಿ, ಮಾಣಿಕನಗರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ತಾಲೂಕಿನ ಐಗಳಿ ಕ್ರಾಸ್ ಮಾಣಿಕ ನಗರದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಯಾಗಿದ್ದರೂ ಕೂಡ ಪಂಪ್‌ಸೆಟ್ ರಿಪೇರಿ ನೆಪದಲ್ಲಿ ಕಳೆದ 15 ದಿನಗಳಿಂದ ನದಿಯಲ್ಲಿ ನೀರು ಸರಬರಾಜು ಸಾಧ್ಯವಾಗಿಲ್ಲ. ಹೆಚ್ಚುವರಿ ಪಂಪ್‌ಸೆಟ್ ಇಟ್ಟುಕೊಂಡು ಕುಡಿಯುವ ನೀರು ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕಾದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದನ್ನು ಕಂಡು 11 ಗ್ರಾಮಗಳ ಜನರು ಆಯಾ ಗ್ರಾಪಂಗಳ ಮುಂದೆ ಪ್ರತಿಭಟನೆ ನಡೆಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವ ಪ್ರಸಂಗ ಸಾಮಾನ್ಯವಾಗಿವೆ.ಟ್ಯಾಂಕರ್‌ನಿಂದ ನೀರು ಪೂರೈಕೆ: ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಟ್ಯಾಂಕರ್ ನೀರು ಪೂರೈಸಲು ತಾಲೂಕು ಆಡಳಿತ ಸಿದ್ಧತೆ ಮಾಡಿಕೊಂಡಿದೆ. ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದರೆ, ಮೊದಲಿಗೆ ಗ್ರಾಮದ ರೈತರ ಬೋರ್‌ವೆಲ್‌ಗಳಿಂದ ಸರಬರಾಜು ಮಾಡಲು ಆದ್ಯತೆ ನೀಡಿ ಕ್ರಮ ಕೈಗೊಳ್ಳಲು, ರೈತರಿಂದ ನೀರು ಪಡೆಯಲು ಅವಕಾಶವಿಲ್ಲದ ಸಂದರ್ಭದಲ್ಲಿ ಗ್ರಾಪಂ ಪಿಡಿಒಗಳು ತಹಸೀಲ್ದಾರಗೆ ಮಾಹಿತಿ ನೀಡಬೇಕು. ತಹಸೀಲ್ದಾರರು ಜಿಲ್ಲಾಧಿಕಾರಿಗೆ ಗಮನಕ್ಕೆ ತರಲು ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಪಂ ಪಿಡಿಒ ತುರ್ತು ಕ್ರಮಕೈಗೊಳ್ಳಲು ಅವಕಾಶ ಇಲ್ಲ. ಹೀಗಾಗಿ ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತಿಲ್ಲ ಎಂದು ಗ್ರಾಮ ಪಂಚಾಯಿತಿ ಅಧಿಕಾರಿಗಳ ವಾದವಾಗಿದೆ.
ತಾಲೂಕಿನ ಅನೇಕ ಗ್ರಾಮಗಳಲ್ಲಿ ಮತ್ತು ತೋಟದ ವಸತಿ ಜನರಿಗೆ ಟ್ಯಾಂಕರ್ ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಕಳೆದ ಮೂರು ನಾಲ್ಕು ದಿನಗಳಿಂದ ಟ್ಯಾಂಕರ್ ಗಳ ಬೇಡಿಕೆ ಹೆಚ್ಚಾಗಿದ್ದು, ಗ್ರಾಮ ಪಂಚಾಯತಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಹೆಚ್ಚುವರಿ ಟ್ಯಾಂಕರ್‌ಗಳನ್ನು ಒದಗಿಸಲಾಗುವುದು. ಈಗಾಗಲೇ ನೀರು ಪೂರೈಸಿದ ಟ್ಯಾಂಕರ್ ಗಳಿಗೆ ಹಣ ಬಿಡುಗಡೆ ಮಾಡಿದ್ದು, ಟ್ಯಾಂಕರ್ ಗಳ ಬಿಲ್ ಬಾಕಿ ಉಳಿಸಿಕೊಂಡಿಲ್ಲ. ಕೃಷ್ಣಾ ನದಿಯಲ್ಲೂ ಕೂಡ ನೀರಿನ ಮಟ್ಟ ಕಡಿಮೆಯಾಗುತ್ತಿದ್ದು, ಸಾರ್ವಜನಿಕರು ನೀರನ್ನ ಮಿತವಾಗಿ ಬಳಸಬೇಕು.-ವಾಣಿ.ಯು ತಹಸೀಲ್ದಾರ್ ಅಥಣಿ.ಸರ್ಕಾರ ತಾಲೂಕನ್ನು ಬರಗಾಲ ಪೀಡಿತ ಎಂದು ಘೋಷಣೆ ಮಾಡಿದರೂ ರೈತರಿಗೆ ಬರ ಪರಿಹಾರ ಕೆಲಸಗೂ ನಡೆಯುತ್ತಿಲ್ಲ. ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಿದ್ದರೂ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಟ್ಯಾಂಕರ್‌ನಿಂದ ಕುಡಿಯುವ ನೀರು ಪೂರೈಸಲು ಜಿಲ್ಲಾಡಳಿತ ಅನುಮತಿ ನೀಡಿಲ್ಲ. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಸಮಸ್ಯೆಯಾಗಿದ್ದರೂ ಗ್ರಾಪಂ ಪಿಡಿಒಗಳು ಅಸಹಾಯಕರಾಗಿದ್ದಾರೆ. ಜಿಲ್ಲಾಡಳಿತ ಕೂಡಲೇ ಟೆಂಡರ್ ಪ್ರಕ್ರಿಯೆ ನಡೆಸಿ ತೋಟದ ವಸತಿಗಳಿಗೆ ನೀರು ಪೂರೈಕೆ ಮಾಡಬೇಕು. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಪಂಪ್ ಸೆಟ್ ತಕ್ಷಣ ರಿಪೇರಿ ಮಾಡಿ ನಲ್ಲಿಗಳಿಗೆ ನೀರು ಸರಬರಾಜು ಮಾಡಬೇಕು.
- ದೇವೇಂದ್ರ ಬೆಳಗಲಿ, ಗ್ರಾಪಂ ಮಾಜಿ ಸದಸ್ಯ ಐಗಳಿನಮ್ಮ ತೋಟದ ವಸತಿಗಳಲ್ಲಿ 40ಕ್ಕೂ ಅಧಿಕ ಕುಟುಂಬಗಳಿವೆ. ಸುತ್ತಮುತ್ತಲಿನ ಯಾವ ಬಾವಿ ಮತ್ತು ಬೋರ್ವೆಲ್‌ಗಳಿಂದ ನೀರು ಸಿಗದೆ ಪರದಾಡುವಂತಾಗಿದೆ. ಗ್ರಾಮ ಪಂಚಾಯಿತಿಯವರಿಗೆ ಹೇಳಿದರೆ ವಾರಕ್ಕೆ ಒಂದೆರಡು ಟ್ಯಾಂಕರ್ ಮಾತ್ರ ಕಳಿಸುತ್ತಾರೆ. ಇಲ್ಲಿನ ಜನ ಮತ್ತು ಜಾನುವಾರುಗಳಿಗೆ ನೀರು ಸಾಲುತ್ತಿಲ್ಲ. ಕೂಡಲೇ ಹೆಚ್ಚುವರಿ ಟ್ಯಾಂಕರ್ ಆರಂಭಿಸಬೇಕು. ಇಲ್ಲದಿದ್ದರೆ ಜಾನುವಾರುಗಳ ಸಮೇತ ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ.- ಹಣಮಂತ ತೆಲಸಂಗ ವಸತಿ ತೋಟ ಐಗಳಿ.