ಸಾರಾಂಶ
ಕನ್ನಡಪ್ರಭ ವಾರ್ತೆ ಚಿಂಚೋಳಿ
ತೆಲಂಗಾಣ ಗಡಿಪ್ರದೇಶಕ್ಕೆ ಹೊಂದಿಕೊಂಡಿರುವ ಮಿರಿಯಾಣ ಗ್ರಾಪಂ ಪಿಡಿಓ, ಕಾರ್ಯದರ್ಶಿ, ಅಧ್ಯಕ್ಷರು, ಉಪಾಧ್ಯಕ್ಷರು ಪ್ರತಿನಿತ್ಯ ಕರ್ತವ್ಯಕ್ಕೆ ಹಾಜರಾಗದೇ ಕಚೇರಿಯ ಬಿಕೋ ಎನ್ನುತ್ತಿದೆ. ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸುವವರೇ ಇಲ್ಲದಂತಾಗಿದೆ ಎಂದು ಗ್ರಾಮಸ್ಥರಾದ ಅಬ್ದುಲ್ ರವೂಫ, ಚಂದ್ರಕಾಂತ ಮಿರಿಯಾಣ ಮತ್ತು ಚಿಟ್ಟಿಸ್ವಾಮಿ ದೂರಿದ್ದಾರೆ.ತಾಲೂಕಿನ ಗಡಿಪ್ರದೇಶದ ಮಿರಿಯಾಣ ಗ್ರಾಪಂವು ಕಿಷ್ಟಾಪೂರ, ಭೈರಂಪಳ್ಳಿ, ಕಲ್ಲೂರ, ಸೋಮಲಿಂಗದಳ್ಳಿ, ಮಿರಿಯಾಣ ಗ್ರಾಮಗಳನ್ನು ಒಳಗೊಂಡಿದ್ದು, ಒಟ್ಟು ೨೬ ಸದಸ್ಯರನ್ನು ಹೊಂದಿದೆ. ಗ್ರಾಮದಲ್ಲಿ ಕುಡಿವ ನೀರು ಪೊರೈಕೆ ಸರಿಯಾಗಿ ಆಗುವುದಿಲ್ಲ, ಚರಂಡಿಯಲ್ಲಿ ತುಂಬಿದ ಹೊಲಸು ನೀರು ತುಂಬಿಕೊಂಡಿದ್ದು ಸೊಳ್ಳೆಗಳ ಕಾಟದಿಂದ ಜನರು ಮಲೇರಿಯಾ, ನೆಗಡಿ, ಜ್ವರ, ಕೆಮ್ಮು ಸಣ್ಣಪುಟ್ಟ ಕಾಯಿಲೆಗಳಿಂದಾಗಿ ಆಸ್ಪತ್ರೆ ಅಲೆಯುವಂತಾಗಿದೆ. ಗ್ರಾಮಗಳಲ್ಲಿ ವಿದ್ಯುತ್ ದೀಪಗಳಿಲ್ಲ ಶೌಚಾಲಯಗಳ ಸರಿಯಾಗಿಲ್ಲ ಗಬ್ಬು ನಾರುತ್ತಿವೆ ಎಂದು ಹೇಳಿದರು.
ಮಿರಿಯಾಣ ಗ್ರಾಪಂ ವ್ಯಾಪ್ತಿಯ ಜನರಿಗೆ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲಸ ಕೊಡುತ್ತಿಲ್ಲ, ರೈತರ ಹೊಲಗಳಲ್ಲಿ ಬದು ನಿರ್ಮಾಣ, ಹೂಳೆತ್ತುವ ಕಾರ್ಯ ನಡೆಯುತ್ತಿಲ್ಲ. ಬೇಸಿಗೆಯಲ್ಲಿ ಕೂಲಿ ಕಾರ್ಮಿಕರಿಗೆ ಕೆಲಸವಿಲ್ಲದೇ ಮನೆಯಲ್ಲಿಯೇ ಕುಳಿತುಕೊಳ್ಳಬೇಕಾಗಿದೆ. ಹೆಚ್ಚಾಗಿ ಕೂಲಿಕಾರ್ಮಿಕರು, ಗಣಿಕಾರ್ಮಿಕರು ವಾಸಿಸುವ ಸುತ್ತಲಿನ ಜನರು ಕೆಲಸವಿಲ್ಲದಿದ್ದರೆ ಅವರ ಕುಟುಂಬ ಉಪಜೀವನಕ್ಕಾಗಿ ತೆಲಂಗಾಣ ರಾಜ್ಯದ ತಾಂಡೂರಿಗೆ ಕಲ್ಲುಪರಸಿ ಕೆಲಸಕ್ಕಾಗಿ ಹೋಗುತ್ತಾರೆ. ಇಂತಹ ಸಮಸ್ಯೆಗಳ ಬಗ್ಗೆ ಪಿಡಿಓ ಮತ್ತು ಅಧ್ಯಕ್ಷ ಉಪಾಧ್ಯಕ್ಷರ ಮನವರಿಕೆ ಮಾಡಿಕೊಡಲಾಗಿದೆ. ಆದರೆ, ಯಾವುದೇ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಕಚೇರಿಗೆ ಪ್ರತಿನಿತ್ಯ ಬೀಗ ಹಾಕಿಯೇ ಇರುತ್ತದೆ ಒರ್ವ ಜವಾನ ಮಹಿಳೆ ಮಾತ್ರ ಕಾಯುತ್ತಿದ್ದಾಳೆ ಎಂದು ಆರೋಪಿಸಿದರು.ಮಿರಿಯಾಣ ಗ್ರಾಪಂ ವತಿಯಿಂದ ಬಡವರಿಗೆ ಬಸವ, ಅಂಬೇಡ್ಕರ ವಸತಿ ಯೋಜನೆಗಳ ಮನೆಗಳ ಸರಿಯಾಗಿ ಹಂಚಿಕೆ ಮಾಡಿಲ್ಲ. ಗ್ರಾಮ ಸಭೆ ನಡೆಸಿಲ್ಲ ಜನಪ್ರತಿನಿಧಿಗಳ ಅಭಿಪ್ರಾಯ ಪಡೆದಿಲ್ಲ. ಸರಕಾರದ ಸೌಲಭ್ಯಗಳು ಮತ್ತು ಯೋಜನೆಗಳು ಸರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಡಂಗೂರ ಸಾರಿ ಜನರಿಗೆ ತಿಳಿಸಿಲ್ಲ. ೧೫ನೇ ಹಣಕಾಸು ಯೋಜನೆ ಅಡಿಯಲ್ಲಿ ಕೈಕೊಂಡ ಅಭಿವೃದ್ಧಿ ಕೆಲಸಗಳೆಲ್ಲವೂ ಹಾಳಾಗಿ ಹೋಗಿವೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಗ್ರಾಮಸ್ಥರೆಲ್ಲರೂ ತಿಳಿಸಿದ್ದರೂ ಅಧಿಕಾರಿಗಳು ಕಚೇರಿಗೆ ಬಂದು ಪರಿಶೀಲನೆ ನಡೆಸಿಲ್ಲವೆಂದು ಅತೃಪ್ತಿ ವ್ಯಕ್ತಪಡಿಸಿದರು.
ಗ್ರಾಮದಲ್ಲಿ ನಡೆಯುತ್ತಿರುವ ಜೆಜೆಎಮ್ ಕಾಮಗಾರಿ ಸಂಪೂರ್ಣವಾಗಿ ಕಳೆಪೆಮಟ್ಟದಿಂದ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.