ಸಾರಾಂಶ
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ರಾಜ್ಯದಲ್ಲಿ ಶಿಕ್ಷಕರ ಕೊರತೆ ನೀಗಿಸಲು 20 ಸಾವಿರ ಶಿಕ್ಷಕರ ನೇಮಕಾತಿಯ ಪ್ರಕ್ರಿಯೆಗೆ ಶೀಘ್ರ ಚಾಲನೆ ಸಿಗಲಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನೂತನ ಕೊಠಡಿಗಳ ಉದ್ಘಾಟನೆ, 2025-26ನೇ ಸಾಲಿನ ಕ್ರೀಡೆ, ಸಾಂಸ್ಕೃತಿಕ ಹಾಗೂ ಎನ್‌ಎಸ್‌ಎಸ್ ಚಟುವಟಿಕೆಗಳ ಉದ್ಘಾಟನಾ ಹಾಗೂ ಬೈಲಹೊಂಗಲ ನಗರದ ಗುರುಭವನ ಕಟ್ಟಡದ ಅಡಿಗಲ್ಲು ಮತ್ತು ವಕ್ಕುಂದ ಗ್ರಾಮದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯ ನೂತನ ಕೊಠಡಿಗಳ ಅಡಿಗಲ್ಲು ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ಶಾಲಾ-ಕಾಲೇಜುಗಳಿಗೆ ಕರೆಂಟ್ ಬಿಲ್ ಕಟ್ಟಲು ಕಷ್ಟದ ಕೆಲಸವಾಗಿತ್ತು. ನಮ್ಮ ಸರ್ಕಾರ ಅಧಿಕಾರ ಬಂದಾಗಿನಿಂದ ರಾಜ್ಯದಲ್ಲಿ ಸರ್ಕಾರಿ ಶಾಲೆ-ಕಾಲೇಜುಗಳಿಗೆ ವಿದ್ಯುತ್ ಉಚಿತವಾಗಿ ಪೂರೈಕೆ ಮಾಡಲಾಗುತ್ತಿದೆ. ರಾಜ್ಯದ ಬಡ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗದಂತೆ ಸಿಇಟಿ ಮತ್ತು ನೀಟ್ ಕೋಚಿಂಗ್ ಉಚಿತವಾಗಿ ನೀಡುತ್ತಿದ್ದೇವೆ. ಮುಂದಿನ ದಿನಮಾನಗಳಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಈ ಯೋಜನೆ ತಲುಪುವುಂತೆ ಕ್ರಮ ಜರುಗಿಸುತ್ತೇವೆ ಎಂದು ಭರವಸೆ ನೀಡಿದರು.ರಾಜ್ಯ ಸರ್ಕಾರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಸದುಪಯೋಗ ಪಡೆದುಕೊಂಡು ಸಾಧನೆ ಮಾಡಬೇಕು. ಪ್ರತಿಭಾವಂತ ಮಕ್ಕಳಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡುವುದು ತುಂಬ ಕಷ್ಟದ ಕೆಲಸ. ಕಷ್ಟಪಟ್ಟು ಅಧ್ಯಯನ ಮಾಡಿದರೇ ಯಾವುದು ಕೂಡಾ ಅಸಾಧ್ಯವಲ್ಲ. ಈ ವೀರರ ಪುಣ್ಯ ಭೂಮಿಯಲ್ಲಿ ತಾವು ಅಧ್ಯಯನ ಮಾಡುತ್ತಿರುವುದು ನಿಮ್ಮೆಲ್ಲರ ಸೌಭಾಗ್ಯ ಎಂದರು. ಸಿಎಂ, ಡಿಸಿಎಂ, ಪಕ್ಷದ ವರಿಷ್ಠರು ಶಿಕ್ಷಣ ಇಲಾಖೆಯ ಜವಾಬ್ದಾರಿ ನಿರ್ವಹಿಸುವುದು ತುಂಬಾ ಕಷ್ಟದ ಕೆಲಸ. ಈ ಕೆಲಸವನ್ನು ನನಗೆ ನಿರ್ವಹಿಸಿದ್ದು ಇದನ್ನು ಸವಾಲಾಗಿ ಸ್ವೀಕರಿಸಿ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದ್ದೇನೆ. ಈ ಇಲಾಖೆಯ ವ್ಯಾಪ್ತಿಯಲ್ಲಿ 46 ಸಾವಿರ ಅನುದಾನಿತ ಶಾಲೆ, 48 ಸಾವಿರ ಸರ್ಕಾರಿ ಪದವಿ ಪೂರ್ವದಲ್ಲಿ ಒಟ್ಟು 1 ಕೋಟಿ 8 ಲಕ್ಷ ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದಾರೆ. ಇಲಾಖೆಯಲ್ಲಿ ಸಾಕಷ್ಟು ನ್ಯೂನ್ಯೆತಗಳಿದ್ದರೂ ಅವುಗಳನ್ನು ಸರಿಪಡಿಸಿಕೊಂಡು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುತ್ತಿದ್ದೇನೆ. ಮಕ್ಕಳ ಪೌಷ್ಟಿಕ ಆಹಾರದ ಕೊರತೆ ನಿಗಿಸಲು ಅಜಿಂ ಪ್ರೇಮಜೀ ಅವರು ₹1591 ಕೋಟಿ ದೇಣಿಗೆ ನೀಡಿದ್ದರಿಂದ ಶಾಲಾ ಮಕ್ಕಳಿಗೆ ಮೊಟ್ಟೆ ಮತ್ತು ಬಾಳೆಹಣ್ಣು ವಿತರಣೆಗೆ ಸಹಕಾರಿಯಾಗಿದೆ ಎಂದರು.ರಾಜಕಾರಣದಲ್ಲಿ ಹಾಳಾಗಬೇಕಾದರೇ ಹಂತವರನ್ನು ಶಿಕ್ಷಣ ಸಚಿವರನ್ನಾಗಿ ಮಾಡಿದರೇ ಸಾಕು ರಾಜಕಾರಣ ಹಾಳಾಗುತ್ತದೆ. ನನ್ನ ಮೇಲೆ ವಿಶ್ವಾಸವಿಟ್ಟು ಶಿಕ್ಷಣ ಸಚಿವ ಸ್ಥಾನದ ಜವಾಬ್ದಾರಿ ನೀಡಿದ್ದು ಅದನ್ನು ಸವಾಲಾಗಿ ಸ್ವೀಕರಿಸಿ, ಶಿಕ್ಷಣ ಕ್ಷೇತ್ರದ ಪ್ರಗತಿಗೆ ಶ್ರಮಿಸುತ್ತಿದ್ದೇನೆ. ಅನುದಾನದ ವಿಚಾರದಲ್ಲಿ ಬೇರೆ ಯಾವ ಉದ್ದೇಶಕ್ಕೆ ನೀಡದೇ ಕೇವಲ ಶಾಲೆಗಳಿಗೆ ಹೆಚ್ಚು ಅನುದಾನ ಒದಗಿಸುತ್ತಿದ್ದೇನೆ ಎಂದು ತಿಳಿಸಿದರು.ಶಾಸಕ ಮಹಾಂತೇಶ ಕೌಜಲಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಸೌಲಭ್ಯ ಪಡೆದುಕೊಂಡು ಭವಿಷ್ಯತ್ತಿನಲ್ಲಿ ಸಾಧಕರಾಗಿ ಸಮಾಜಕ್ಕೆ ಅಮೋಘ ಕೊಡುಗೆ ನೀಡಬೇಕು. ನನ್ನ ಮತಕ್ಷೇತ್ರದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದೇನೆ. ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರ ಕೊರತೆ ಇದ್ದು, ಶೀಘ್ರ ಸರ್ಕಾರದಿಂದ ಉಪನ್ಯಾಸಕರ ಕೊರತೆ ನೀಗಿಸಬೇಕೆಂದು ವಿನಂತಿಸಿದರು. ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು, ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ಹಿರಿಯ ಉಪನ್ಯಾಸಕ ಬಿ.ಎಂ.ಕೊಳವಿ ಪ್ರಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಪ್ರವೀಣ ಜೈನ್, ತಹಸೀಲ್ದಾರ್ ಎಚ್.ಎನ್.ಶಿರಹಟ್ಟಿ, ಡಿವೈಎಸ್ಪಿ ಡಾ.ವೀರಯ್ಯ ಹಿರೇಮಠ, ಎಇಇ ಮಹೇಶ ಹೂಲಿ, ಬಿಇಒ ಎ.ಎನ್.ಪ್ಯಾಟಿ, ಪುರಸಭೆ ಅಧ್ಯಕ್ಷ ವಿಜಯ ಬೋಳನ್ನವರ, ತಾಪಂ ಇಒ ಸಂಜೀವ ಜುನ್ನೂರ, ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕ ಎಂ.ಎಂ.ಕಾಂಬಳೆ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಅಶೋಕ ವಾಲಿ, ಸರ್ವ ಸದಸ್ಯರು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಲೀಲಾವತಿ ಹಿರೇಮಠ, ಎಇ ನಿಕಿತಾ ಶೆಟ್ಟರ, ಉದ್ಯಮಿ ರಾಜು ಮೆಟಗುಡ್ಡ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸಬೀಯಾ ಯಕ್ಕುಂಡಿ ಸ್ವಾಗತಿಸಿದರು. ಕಾವೇರಿ ಭಜಂತ್ರಿ ನಿರೂಪಿಸಿದರು. ಪ್ರಿಯಾ ಹಿರೇಮಠ ವಂದಿಸಿದರು. ಈ ಸಂದರ್ಭದಲ್ಲಿ ಉಪನ್ಯಾಸಕರು, ಸಾವಿರಾರು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗ ಇದ್ದರು.ಸಚಿವರ ಮಿಂಚಿನ ಸಂಚಾರ
ಬೈಲಹೊಂಗಲ ಪಟ್ಟಣದ ಗುರುಭವನ ಕಟ್ಟಡದ ಅಡಿಗಲ್ಲು ಸಮಾರಂಭ ನೆರವೇರಿಸಿ. ವೀರರಾಣಿ ಕಿತ್ತೂರು ಚನ್ನಮ್ಮಾಜಿಯ ಐಕ್ಯಸ್ಥಳಕ್ಕೆ ಭೇಟಿ ನೀಡಿ ಗೌರವ ಸಮರ್ಪಿಸಿದರು. ನಂತರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನೂತನ ಕೊಠಡಿಗಳ ಉದ್ಘಾಟನೆ, 2025-26ನೇ ಸಾಲಿನ ಕ್ರೀಡೆ, ಸಾಂಸ್ಕೃತಿಕ ಹಾಗೂ ಎನ್‌ಎಸ್‌ಎಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿ, ಆನಿಗೋಳ ಗ್ರಾಮದ ಶಾಲೆಗೆ ಭೇಟಿ ನೀಡಿ ಅಲ್ಲಿಂದ ವಕ್ಕುಂದ ಗ್ರಾಮದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯ ನೂತನ ಕೊಠಡಿಗಳ ಅಡಿಗಲ್ಲು ಸಮಾರಂಭ ಉದ್ಘಾಟಿಸಿ, ನಂತರ ಮಧ್ಯಾಹ್ನದದಲ್ಲಿ ಮಕ್ಕಳೊಂದಿಗೆ ಕುಳಿತು ಭೋಜನ ಸವಿದರು. ಶಾಸಕ ಮಹಾಂತೇಶ ಕೌಜಲಗಿ ಸಾಥ ನೀಡಿದರು. ಈ ಸರ್ಕಾರಿ ಪದವಿ ಪೂರ್ವ ಕಾಲೇಜು ಒಂದು ಚಿಕ್ಕ ಕೊಠಡಿಯಿಂದ ಪ್ರಾರಂಭಗೊಂಡು ಅಲ್ಫಾವಧಿಯಲ್ಲಿ ಬೃಹತಾಕರದ ಸುಸಜ್ಜಿತವಾದ ಕಟ್ಟಡ ನಿರ್ಮಿಸಿ ಸುಮಾರು 2400 ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಮಹಾವಿದ್ಯಾಲಯಕ್ಕೆ ಬೇಕಾಗುವ ಎಲ್ಲ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತೇನೆ. ದೇಶದ ಭವಿಷ್ಯತ್ತಿನ ಪ್ರಜೆಗಳಾಗುವ ಮಕ್ಕಳೇ ಉತ್ತಮ ಸಾಧನೆ ಮಾಡಬೇಕು.-ಮಧು ಬಂಗಾರಪ್ಪ,
ಸಚಿವರು.