ಚಳ್ಳಕೆರೆ ತಾಲೂಕಿನ ಪೆತ್ತಮ್ಮನವರಹಟ್ಟಿ ಗ್ರಾಮದಲ್ಲಿ ಗ್ರಾಮದೇವತೆ, ಚೌಡೇಶ್ವರಿ ದೇವಿಯ ಗಂಗಾಪೂಜೆಗೆ ಮೆರವಣಿಗೆ ಮೂಲಕ ತೆರಳಿದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ತಾಲೂಕಿನ ನನ್ನಿವಾಳ ಕಟ್ಟಮನೆ ವ್ಯಾಪ್ತಿಯ ಪೆತ್ತಮ್ಮನವರಹಟ್ಟಿ ಹಾಗೂ ಎತ್ತನಗೌಡರಹಟ್ಟಿಯ ಮ್ಯಾಸಬೇಡರ ಆರಾಧ್ಯ ದೈವ, ಗ್ರಾಮ ದೇವತೆ ಚೌಡೇಶ್ವರಿ ದೇವಿ ದೇವಸ್ಥಾನದ ರಾಜಗೋಪುರ, ಕಳಸಾರೋಹಣ, ಹಾಗೂ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಎರಡು ದಿನಗಳ ಕಾಲ ಬುಡಕಟ್ಟು ಆಚರಣೆಯಂತೆ ಅದ್ಧೂರಿ ನಡೆದವು.

ಗ್ರಾಮದ ಯದಲದಹಳ್ಳದಲ್ಲಿ ದೇವಿಯ ಗಂಗಾಪೂಜೆ ವಿಶೇಷ ಅಲಂಕಾರ, ಹೂ, ಹಣ್ಣಿನ ನೈವೇದ್ಯದೊಂದಿಗೆ ನಡೆಯಿತು. ವಿವಿಧ ಕಲಾತಂಡಗಳೊಂದಿಗೆ ಪೂಜಾರಿಗಳು, ಭಕ್ತರು ಒಪ್ಪೊತ್ತಿನಲ್ಲಿ ಮೆರವಣಿಗೆ ಮೂಲಕ ತೆರಳಿ ಪೂಜಾಕಾರ್ಯದಲ್ಲಿ ಪಾಲ್ಗೊಂಡರು.

ಮಧ್ಯಾಹ್ನ 4ರ ವೇಳೆಗೆ ಚೌಡೇಶ್ವರಿ ದೇವಸ್ಥಾನ ಪ್ರಾಂಗಣದಲ್ಲಿ ನಂದಿಪೂಜೆ, ಪುಣ್ಯಶುದ್ಧಿ, ಕಳಸಕ್ಕೆ ದಾನ್ಯಾದಿ ಪೂಜೆ, ರಾಘೋಗ್ನ ಹೋಮ, ಅಘೋರಿಹೋಮ, ಗಣಪತಿ ಪೂಜೆ, ದೇವತಾಹೋಮ, ವಾಸ್ತುಹೋಮ, ನವಗ್ರಹ ಹೋಮಗಳು ನಡೆದವು ಸುತ್ತಮುತ್ತಲ ನೂರಾರು ಭಕ್ತರು ಬೆಳ್ಳಗೆಯಿಂದಲೇ ದೇವಸ್ಥಾನದಲ್ಲಿ ನಡೆದ ಪೂಜಾಕಾರ್ಯದಲ್ಲಿ ಪಾಲ್ಗೊಂಡರು. ಶುಕ್ರವಾರ ಬೆಳಗ್ಗೆ ಬುಲುಡ್ಲು ವಂಶದ ಬುಳ್ಳೋಬಯ್ಯನವರು ಕಳಸಾರೋಹಣ ಕಾರ್ಯಕ್ರಮ ನಡೆಸಿದರು. ನೂರಾರು ಭಕ್ತರು ಕಳಸ ಪೂಜೆಯಲ್ಲಿ ಪಾಲ್ಗೊಂಡರು. ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗವಾಯಿತು.

ಈ ವೇಳೆ ಮಾತನಾಡಿದ ದೇವಸ್ಥಾನ ಸಮಿತಿಯವರು, ಪ್ರತಿವರ್ಷವೂ ಮಹಾ ಚೌಡೇಶ್ವರಿ ದೇವಿಯ ಜಾತ್ರೆ, ಪೂಜಾ ಕಾರ್ಯಗಳನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದರು.

ಮ್ಯಾಸಬೇಡರ ಉಪ ಕುಲದ ಬುಲುಡ್ಲು ಬುಳ್ಳೋಬಯ್ಯ ಕಳಸರೋಹಣ ನೆರವೇರಿಸಿ ಮಾತನಾಡಿ, ಪೆತ್ತಮ್ಮನವರಹಟ್ಟಿ ಹಾಗೂ ಎತ್ತನಗೌಡರಹಟ್ಟಿಯ ಬುಡಕಟ್ಟು ಸಮುದಾಯವಾಗಿದ್ದು ನಮ್ಮ ಕುಲದೈವದ ಮೇಲೆ ಎಲ್ಲರಿಗೂ ಅಪಾರ ಭಕ್ತಿ, ಶ್ರದ್ಧೆ ಹಾಗೂ ಕಾಳಜಿ ಇದೆ. ನಾವೆಲ್ಲರೂ ಪ್ರತಿವರ್ಷವೂ ಈ ಕಾರ್ಯಕ್ರಮದಲ್ಲಿ ನಮ್ಮೆಲ್ಲಾ ಕೆಲಸ ಕಾರ್ಯಗಳನ್ನು ಬದಿಗೊತ್ತಿ ದೇವಿಯ ಉತ್ಸವ ಆಚರಿಸಿ ನಮ್ಮ ಸಮುದಾಯದ ಅಭಿವೃದ್ಧಿಗೆ ಎಲ್ಲರೂ ಶಕ್ತಿಮೀರಿ ಶ್ರಮಿಸಬೇಕು. ಇತ್ತೀಚಿನ ವರ್ಷಗಳಲ್ಲಿ ನಮ್ಮಲ್ಲಿ ಸಂಘಟನೆ ಕೊರತೆಯಿಂದ ಹೆಚ್ಚು ಜನಸೇರುತ್ತಿಲ್ಲ. ಮುಂದಿನ ದಿನಗಳಲ್ಲಿ ನಾವೆಲ್ಲರೂ ಒಂದು ಎಂಬ ಭಾವನೆಯಿಂದ ಸೇರಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣವೆಂದರು.

ಕಾರ್ಯಕ್ರಮದಲ್ಲಿ ಯಜಮಾನ ಗೊಂಚಿಕಾರ ಪಾಪಯ್ಯ, ಉಡೇದ ಬೋರಯ್ಯ, ಸೆಂಚಯ್ಯ, ದೊರೆ ಪಾಲಯ್ಯ, ಜೋಗವ್ವನವರ ಪಾಪಯ್ಯ, ಗ್ರಂಥಪಾಲಕ ಡಾ.ದೊರೆ ಪಾಪಣ್ಣ, ವೈ.ಪಾಪಯ್ಯ, ಗೌಡ್ರಹಟ್ಟಿ ತಿಪ್ಪೇಸ್ವಾಮಿ, ಬಾಲು, ಯರಯ್ಯನವರ ಪಾಲಯ್ಯ, ಪಾಲಮ್ಮ, ಚಿನ್ನಯ್ಯ, ಪೆದ್ದಪಾಪಯ್ಯ, ದಡ್ಡಿ ಓಬಯ್ಯ, ಪ್ರಾಂಶುಪಾಲ ಡಾ.ಎಂ.ಕೆ.ದೇವಪ್ಪ, ಪ್ರಾಧ್ಯಾಪಕ ಡಾ.ಡಿ.ಎನ್.ರಘುನಾಥ, ದೊರೆ ಬೈಯಣ್ಣ ಹಾಗೂ ಗ್ರಾಮದ ಮುಖಂಡರು ಭಾಗವಹಿಸಿದ್ದರು.