ಕುಂಟುತ್ತ ಸಾಗಿರುವ 20 ಕೆರೆ ತುಂಬಿಸುವ ಯೋಜನೆ

| Published : May 15 2025, 01:41 AM IST

ಸಾರಾಂಶ

ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕಿನ ಬಹು ಕೆರೆ ತುಂಬಿಸುವ ಯೋಜನೆಯ ಕಾಮಗಾರಿ ಕಳೆದ 7-8 ವರ್ಷಗಳಿಂದ ಕುಂಟುತ್ತ ಸಾಗಿದೆ.

ಅಶೋಕ ಸೊರಟೂರ

ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರ

ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕಿನ ಬಹು ಕೆರೆ ತುಂಬಿಸುವ ಯೋಜನೆಯ ಕಾಮಗಾರಿ ಕಳೆದ 7-8 ವರ್ಷಗಳಿಂದ ಕುಂಟುತ್ತ ಸಾಗಿದೆ.

ಕೋಟ್ಯಂತರ ರುಪಾಯಿಗಳ ಯೋಜನೆ ಅರ್ಧಕ್ಕೆ ನಿಂತು ಸಾರ್ವಜನಿಕರ ತೆರಿಗೆ ಹಣ ಪೋಲಾಗಿ ಹೋಗುತ್ತಿದ್ದರೂ ಯಾವೊಬ್ಬ ಅಧಿಕಾರಿಗಳು ಕಣ್ಣೆತ್ತಿ ನೋಡದಿರುವುದು ಅಚ್ಚರಿಯೇ ಸರಿ.

ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿ ತಾಲೂಕಿನ ಕೆರೆಗಳು ಬೇಸಿಗೆ ಕಾಲದಲ್ಲಿ ನೀರಿಲ್ಲದೆ ಬತ್ತಿ ಹೋಗುತ್ತಿದ್ದವು. ಇದರಿಂದ ಜಾನುವಾರುಗಳು ಹಾಗೂ ಪ್ರಾಣಿ ಪಕ್ಷಿಗಳು ನೀರಿಗಾಗಿ ಪರಿತಪಿಸುವಂತಾಗುತ್ತಿತ್ತು. ಅಲ್ಲದೆ ತಾಲೂಕಿನ ಕೊಳವೆ ಬಾವಿಗಳು ತಳ ಕಂಡು ಬೇಸಿಗೆ ಬೆಳೆಗಳು ಒಣಗುತ್ತಿದ್ದವು. ಇದನ್ನು ಅರಿತ ಅಂದಿನ ಶಾಸಕ ರಾಮಕೃಷ್ಣ ದೊಡ್ಡಮನಿ ಕ್ಷೇತ್ರದ ತಾಲೂಕಿನ ಎಲ್ಲ ಕೆರೆಗಳನ್ನು ತುಂಬಿಸುವ ಮಹತ್ವದ ಯೋಜನೆ ರೂಪಿಸಿ, ಸುಮಾರು ₹144 ಕೋಟಿ ವೆಚ್ಚದ ಕಾಮಗಾರಿಗೆ 2017ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಲಕ್ಷ್ಮೇಶ್ವರ ಪಟ್ಟಣದಲ್ಲಿ ಬೃಹತ್ ಸಮಾರಂಭ ಮಾಡಿ ಅಡಿಗಲ್ಲು ಹಾಕಿದರು.

ಬೃಹತ್ ನೀರಾವರಿ ಇಲಾಖೆಯ ಅಡಿಯಲ್ಲಿ ಬರುವ ಈ ಕಾಮಗಾರಿಯು ತಾಲೂಕಿನ 20 ಕೆರೆಗಳಿಗೆ ಹಾಗೂ ಬಾಂದಾರಗಳಿಗೆ ನೀರು ತುಂಬಿಸುವ ಮೂಲಕ ಅಂತರ್ಜಲ ಮಟ್ಟ ಹೆಚ್ಚಳ ಮಾಡುವುದು, ಜಾನುವಾರುಗಳಿಗೆ ಕುಡಿಯುವ ನೀರು ಸಿಗುವಂತೆ ಮಾಡುವ ಪ್ರಮುಖ ಉದ್ದೇಶ ಹೊಂದಿದೆ. ತಾಲೂಕಿನ ದೇವಿಹಾಳ ಗ್ರಾಮದ ಹೊಳಲಮ್ಮ ದೇವಿಯ ಗುಡ್ಡದ ಮೇಲೆ ಬೃಹತ್ ಟ್ಯಾಂಕ್ ನಿರ್ಮಿಸಿ, ಅದರಲ್ಲಿ ತುಂಗಭದ್ರಾ ನದಿ ನೀರನ್ನು ಶೇಖರಿಸಿ, ಅಲ್ಲಿಂದ ತಾಲೂಕಿನ ಕೆರಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದೆ.

ಮಂಗಳೂರಿನ ಓಸಿಯನ್ ಕಂಪನಿಯು 20 ಕೆರೆ ತುಂಬಿಸುವ ಯೋಜನೆಯ ಕಾಮಗಾರಿಯ ಗುತ್ತಿಗೆ ಪಡೆದುಕೊಂಡು ಕಾರ್ಯ ಆರಂಭಿಸಿ ತಾಲೂಕಿನ ಬಹುತೇಕ ಕಡೆಗಳಲ್ಲಿ ಬೃಹತ್ ಗಾತ್ರದ ಪೈಪ್ ಅಳವಡಿಕೆ ಕಾಮಗಾರಿ ಮಾಡಿ ಮುಗಿಸಿದ್ದಾರೆ. ಆರಂಭದಲ್ಲಿ ಸ್ವಲ್ಪ ಬಿರುಸಾಗಿ ಸಾಗಿದ ಕಾಮಗಾರಿಯು ನಂತರ ಆಮೆ ವೇಗದಲ್ಲಿ ಸಾಗುತ್ತಿದೆ. ಹೀಗಾಗಿ ತಾಲೂಕಿನ ಇನ್ನೂ ಹಲವು ಕಡೆಗಳಲ್ಲಿ ಕಾಮಗಾರಿಯು ಪೂರ್ಣಗೊಳಿಸದೆ ಅರ್ಧಕ್ಕೆ ನಿಂತು 7-8 ವರ್ಷ ಕಳೆದಿವೆ. ಇಷ್ಟಾದರೂ ಇನ್ನೂ ಕಾಮಗಾರಿ ಮುಗಿಯುವ ಲಕ್ಷಣ ಕಾಣುತ್ತಿಲ್ಲ.

ಈ ಯೋಜನೆ ಅಡಿಯಲ್ಲಿ ಎಂ.ಎಸ್‌. ಪೈಪ್‌ಲೈನ್‌ನ 23 ಕಿಮೀ, ಬಿಡಬ್ಲ್ಯೂಎಸ್‌ ಪೈಪ್ 29 ಕಿಮೀ ಹಾಗೂ ಎಚ್‌ಡಿ ಪೈಪ್‌ನ 35 ಕಿಮೀ ಕಾಮಗಾರಿಯಲ್ಲಿ ಬಿಡಬ್ಲ್ಯೂಎಸ್ ಪೈಪ್‌ಲೈನ್ 29 ಕಿಮೀ ಕಾಮಗಾರಿಯಲ್ಲಿ 6 ಕಿಮೀ ಕಾಮಗಾರಿ ಮಾತ್ರ ಬಾಕಿ ಉಳಿದಿವೆ. ಅಲ್ಲದೆ ಹೊಳೆ ಇಟಗಿ ಹತ್ತಿರ ಜಾಕ್‌ ವೆಲ್ಲ್‌ನ ಮೋಟಾರ್ ಅಳವಡಿಸಲಾಗಿದ್ದು ಬಹುತೇಕ ಕಾಮಗಾರಿ ಮುಗಿದಿದ್ದು, ಈ ಯೋಜನೆಗೆ 41 ಬೃಹತ್ ವಿದ್ಯುತ್ ಟಾವರ್ ಹಾಕುವ ಯೋಜನೆಯಲ್ಲಿ 39 ಟಾವರ್ ಹಾಕುವ ಕಾರ್ಯ ಮಾಡಲಾಗಿದ್ದು, ಅದರಲ್ಲಿ ನದಿಯ ಅಕ್ಕ ಪಕ್ಕದಲ್ಲಿ 3 ವಿದ್ಯುತ್ ಟಾವರ್ ನಿಲ್ಲಿಸುವ ಕಾರ್ಯ ನನೆಗುದಿಗೆ ಬಿದ್ದಿದೆ. ಹೀಗಾಗಿ ಕಾಮಗಾರಿ ವಿಳಂಬವಾಗಿದೆ ಎಂದು ಬೃಹತ್ ನೀರಾವರಿ ಇಲಾಖೆಯ ಅಧಿಕಾರಿಗಳು ಹೇಳಿದರು.

ಬೃಹತ್ ನೀರಾವರಿ ಇಲಾಖೆಯು 20 ಕೆರೆ ತುಂಬಿಸುವ ಯೋಜನೆ ಅಡಿಯಲ್ಲಿ ಆರಂಭದಲ್ಲಿ ಬೆಳ್ಳಟ್ಟಿ ಹಾಗೂ ಹೊಳೆ ಇಟಗಿ ಹತ್ತಿರ ಹಾಯ್ದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಆರಂಭವಾಗಿದ್ದರಿಂದ ಬೃಹತ್ ಗಾತ್ರ ಪೈಪ್ ಅಳವಡಿಸುವ ಕಾರ್ಯು ತಡವಾಗಿದೆ. 1.5 ಕಿಮೀ ಮೀಸಲು ಅರಣ್ಯ ಪ್ರದೇಶದಲ್ಲಿ ಪೈಪ್ ಲೈನ್ ಕಾಮಗಾರಿ ಮಾಡುವುದು ಬಾಕಿ ಉಳಿದಿದೆ. ಅಲ್ಲದೇ 3 ವಿದ್ಯುತ್ ಟಾವರ್ ಅಳವಡಿಸಿ 2 ತಿಂಗಳಲ್ಲಿ ಕಾಮಗಾರಿ ಮುಗಿಸುವ ಕಾರ್ಯ ಯೋಜನೆ ಹಾಕಿಕೊಳ್ಳಲಾಗಿದೆ. ಶೀಘ್ರದಲ್ಲಿ 20 ಕೆರೆ ತುಂಬಿಸುವ ಕಾಮಗಾರಿ ಮುಗಿಯುತ್ತದೆ ಎನ್ನುವ ವಿಶ್ವಾಸ ನಮ್ಮದಾಗಿದೆ ಎಂದು ಬೃಹತ್ ನೀರಾವರಿ ಇಲಾಖೆಯ ಎಇಇ ಬಸವರಾಜ ಅಂಬಿಗೇರ ಹೇಳಿದರು.

ಕಳೆದ 7-8 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಬೃಹತ್ ನೀರಾವರಿ ಇಲಾಖೆಯ 20 ಕೆರೆ ತುಂಬಿಸುವ ಕಾಮಗಾರಿಯು ಶೀಘ್ರದಲ್ಲಿ ಮುಕ್ತಾಯಗೊಂಡು ಸಾರ್ವಜನಿಕರಿಗೆ ಅನುಕೂಲವಾಗಬೇಕು. ಇದರಿಂದ ತಾಲೂಕಿನ ಅಂತರ್ಜಲ ಮಟ್ಟ ಹೆಚ್ಚಳವಾಗುತ್ತದೆ. ಅಲ್ಲದೆ ರೈತರ ಜಾನುವಾರುಗಳಿಗೆ, ಪ್ರಾಣಿ ಪಕ್ಷಿಗಳಿಗೆ ಹೆಚ್ಚಿನ ಉಪಕಾರವಾಗುತ್ತದೆ. ಶೀಘ್ರದಲ್ಲಿ ಯೋಜನೆ ಮುಕ್ತಾಯಗೊಳ್ಳದೆ ಹೋದಲ್ಲಿ ಹೋರಾಟದ ಹಾದಿ ಹಿಡಿಯುವುದು ಅನಿವಾರ್ಯವಾಗುತ್ತದೆ ಭಾರತೀಯ ಕೃಷಿಕ ಸಮಾಜದ ಚನ್ನಪ್ಪ ಷಣ್ಮುಖಿ ಹೇಳಿದ್ದಾರೆ.