ಪೈಗಂಬರ್ ಅವರ ಜೀವನ ಮತ್ತು ಸಂದೇಶಗಳು ಸಮಸ್ತ ಮಾನವ ಸಮುದಾಯಕ್ಕೆ ಪ್ರಸ್ತುತವಾಗಿದ್ದು, ಇಂತಹ ಮಹಾತ್ಮರನ್ನು ಕೇವಲ ಒಂದು ನಿರ್ದಿಷ್ಟ ಸಮುದಾಯಕ್ಕೆ ಸೀಮಿತಗೊಳಿಸದೇ ಪ್ರತಿಯೊಬ್ಬರೂ ಅವರ ಜೀವನ ಕ್ರಮಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ.

ಶಿರಹಟ್ಟಿ: ಮುಸ್ಲಿಂ ಧರ್ಮಗುರು ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜಯಂತಿ ಈದ್ ಮಿಲಾದ್ ಹಬ್ಬವನ್ನು ಬುಧವಾರ ಮುಸ್ಲಿಮರು ಪಟ್ಟಣದಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಿದರು.ನಂತರ ಮೌಲಾನಾ ಮಜರ ಅಲಿಖಾನ ಪಠಾಣ ಮಾತನಾಡಿ, ಸೌಹಾರ್ದ, ಶಾಂತಿ ಮತ್ತು ಸಹಬಾಳ್ವೆಯ ಸಂದೇಶ ಸಾರುವ ಉದ್ದೇಶದಿಂದ ಭವ್ಯ ಮೆರವಣಿಗೆ ನಡೆಯಿತು. ವಿಶ್ವ ಮಾನವತಾ ಸಂದೇಶದ ಮೂಲಕ ಜಗತ್ತಿನ ಸಕಲ ಜೀವಾತ್ಮರಿಗೂ ಘನತೆ ಮತ್ತು ಗೌರವದ ಬದುಕಿನ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದ ಕೀರ್ತಿ ಪ್ರವಾದಿ ಮಹಮ್ಮದ್ ಪೈಗಂಬರ್ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.ಪೈಗಂಬರ್ ಅವರ ಜೀವನ ಮತ್ತು ಸಂದೇಶಗಳು ಸಮಸ್ತ ಮಾನವ ಸಮುದಾಯಕ್ಕೆ ಪ್ರಸ್ತುತವಾಗಿದ್ದು, ಇಂತಹ ಮಹಾತ್ಮರನ್ನು ಕೇವಲ ಒಂದು ನಿರ್ದಿಷ್ಟ ಸಮುದಾಯಕ್ಕೆ ಸೀಮಿತಗೊಳಿಸದೇ ಪ್ರತಿಯೊಬ್ಬರೂ ಅವರ ಜೀವನ ಕ್ರಮಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದರು.

ಪ್ರವಾದಿ ಗುಣಗಾನದ ಹಾಡುಗಳು, ಪ್ರವಾದಿ ಜೀವನದ ಸಂದೇಶ ನೀಡುವುದರ ಮೂಲಕ ಶಾಂತಿಯುತ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭದಲ್ಲಿ ವಿವಿಧ ಸ್ಥಳಗಳಲ್ಲಿಯ ಮುಸ್ಲಿಮರು ಪರಸ್ಪರ ಈದ್ ಶುಭಾಶಯ ಕೋರಿದರು.

ಮುಖಂಡರಾದ ಹುಮಾಯೂನ್ ಮಾಗಡಿ, ಚಾಂದಸಾಬ ಮುಳಗುಂದ, ಅಬ್ಬು ಕುಬುಸದ, ಹಮೀದ ಸನದಿ, ನಜೀರ ಡಂಬಳ, ಹಸರತ ಢಾಲಾಯತ, ಮಹಬೂಬ ಮಾಚೇನಹಳ್ಳಿ, ಇಸಾಕ್ ಆದ್ರಳ್ಳಿ, ಶೌಕತ್ ಮನಿಯಾರ, ಬುಡನಶ್ಯಾ ಮಕಾನದಾರ, ಕಾಶೀಂಶಾ ಮಕಾನದಾರ, ಬಾಬು ತಹಸೀಲ್ದಾರ, ಶೌಕತ ಬುವಾಜಿ, ರಾಜೇಸಾಬ ಶಿಗ್ಲಿ, ಬಾಬಾಜಾನ ಕೋಳಿವಾಡ ಸೇರಿ ಅನೇಕರು ಇದ್ದರು.ಹಜರತ್ ಮಹಬೂಬ ಸುಬ್ಹಾನಿ ದರ್ಗಾದಿಂದ ಮೆರವಣಿಗೆಯು ಪ್ರಾರಂಭವಾಗಿ ಪ್ರಮುಖ ವೃತ್ತಗಳಲ್ಲಿ ಸಂಚರಿಸಿತು. ಹೊಸ ಬಟ್ಟೆಗಳನ್ನು ಧರಿಸಿದ ಯುವಕರು ಬೈಕ್ ಅಟೋಗಳಲ್ಲಿ ಕಾರುಗಳಿಗೆ, ಟೆಂಪೋಗಳಿಗೆ ಬಾವುಟ ಹಾಕಿಕೊಂಡು ಭವ್ಯ ಮೆರವಣಿಗೆ ನಡೆಸಿದರು. ಸಮಾಜದ ಹಿರಿಯರು, ಯುವಕರು, ಚಿಕ್ಕಮಕ್ಕಳು ಸೇರಿದಂತೆ ಸಾವಿರಾರು ಜನರು ಅತ್ಯಂತ ಉತ್ಸಾಹದಿಂದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.ಪಟ್ಟಣದಲ್ಲಿ ಶಾಂತಿಯುತವಾಗಿ ಭವ್ಯ ಮೆರವಣಿಗೆ ನಡೆಸಿದರು. ನೆಹರು ವೃತ್ತ, ಸಂಗೊಳ್ಳಿ ರಾಯಣ್ಣ ಪ್ರತಿಮೆ, ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಮೆರವಣಿಗೆಯುದ್ದಕ್ಕೂ ಸರ್ವಧರ್ಮಿಯರಿಗೂ ಮುಸ್ಲಿಮರು ಶುಭ ಕೋರುತ್ತಾ ಭಾವೈಕ್ಯತೆ ಮೆರೆದರು. ಮೆರವಣಿಗೆಯುದ್ದಕ್ಕೂ ಮೌಲಾನ್‌ಗಳು ಈದ್ ಸಂದೇಶ ಸಾರಿದರು.