ಯುದ್ಧ, ಹೋರಾಟ, ರಕ್ತಪಾತವಿಲ್ಲದ ಕ್ರಾಂತಿಯನ್ನು ಮಾಡಿದ ಪ್ರವಾದಿ ಮಹಮದ್ ಪೈಗಂಬರ್ ಜನರ ಮನಸ್ಸಿನ ನಂಬಿಕೆ, ಚಿಂತನೆಗಳನ್ನು ಬದಲಾಯಿಸಿ ಜ್ಞಾನದ ಕ್ರಾಂತಿಯ ಸಮಾಜ ಸುಧಾರಣೆ ಮಾಡಿದ್ದಾರೆ ಎಂದು ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ರಜಾ ಮಾನ್ವಿ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಶಿಕಾರಿಪುರ
ಯುದ್ಧ, ಹೋರಾಟ, ರಕ್ತಪಾತವಿಲ್ಲದ ಕ್ರಾಂತಿಯನ್ನು ಮಾಡಿದ ಪ್ರವಾದಿ ಮಹಮದ್ ಪೈಗಂಬರ್ ಜನರ ಮನಸ್ಸಿನ ನಂಬಿಕೆ, ಚಿಂತನೆಗಳನ್ನು ಬದಲಾಯಿಸಿ ಜ್ಞಾನದ ಕ್ರಾಂತಿಯ ಸಮಾಜ ಸುಧಾರಣೆ ಮಾಡಿದ್ದಾರೆ ಎಂದು ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ರಜಾ ಮಾನ್ವಿ ಅಭಿಪ್ರಾಯಪಟ್ಟರು.ಜಮಾಅತೆ ಇಸ್ಲಾಮಿ ಹಿಂದ್, ಶಿಕಾರಿಪುರ ಘಟಕ, ಕುಲ್ಮಿಕೇರಿಯ ಶಾದಿ ಮಹಲ್ ನಲ್ಲಿ ಆಯೋಜಿಸಿದ ಕ್ರಾಂತಿಯ ಜ್ಯೋತಿ ಪ್ರವಾದಿ ಮಹಮ್ಮದ್ (ಸ) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಡುಕು ಮುಕ್ತ ಸಮಾಜ ನಿರ್ಮಿಸಿ, ಮನುಷ್ಯರಲ್ಲಿ ಸಹ ಬಾಳ್ವೆ , ಸಹಿಷ್ಣುತೆ ತರುವುದು, ದೂರವಿದ್ದವರನ್ನು ಹತ್ತಿರ ಮಾಡುವುದು. ಮನಸು, ಕುಟುಂಬ, ಸಮಾಜ, ರಾಷ್ಟ್ರವನ್ನು ಬೆಸೆದು, ಕರುಣೆ ಮತ್ತು ಕ್ಷಮೆಯನ್ನು ಸಮಾಜದಲ್ಲಿ ಮೂಡಿಸುವ ದೊಡ್ಡ ಕ್ರಾಂತಿಯನ್ನು ಮಾಡಿದವರು ಪ್ರವಾದಿ ಮುಹಮ್ಮದ್ (ಸ) ಎಂದರು.
ಇನ್ನೊರ್ವ ಅತಿಥಿ ಕೆ.ಎಚ್. ಪುಟ್ಟಪ್ಪ ಬಿಳವಾಣಿ ಉಪನ್ಯಾಸಕ ಹಾಗೂ ಲೇಖಕ ಮಾತನಾಡಿ, ಪ್ರತಿಯೊಂದು ಧರ್ಮವು ಮಾನವನ ಘನತೆಯನ್ನು, ಸಮಾನತೆಯನ್ನು, ಹಕ್ಕನ್ನು ಎತ್ತಿ ಹಿಡಿದು, ಸುಂದರ, ಸ್ವಸ್ಥ ಸಮಾಜ ನಿರ್ಮಾಣದ ಉದ್ದೇಶ ಹೊಂದಿವೆ. ಮಾನವನ ಒಳಗಿನ ದ್ವೇಷ, ಅಸೂಯೆ ಬದಿಗಿಟ್ಟು ಪ್ರತಿಯೊಬ್ಬರ ಜೀವನ ವಿಧಾನಗಳನ್ನು ಗೌರವಿಸಬೇಕೆಂದರು.ಬಾಪೂಜಿ ಸಂಸ್ಥೆಯ ಅಧ್ಯಕ್ಷ ಬಿ. ಪಾಪಯ್ಯ ಮಾತನಾಡಿ, ಸರ್ವಧರ್ಮ ಸಮನ್ವಯತೆ ಇಂದು ಹೆಚ್ಚು ಪ್ರಸ್ತುತವಾಗಿದೆ ಎಂದರು.
ಜಮಾಅತೆ ಇಸ್ಲಾಮ್ ಸ್ಥಾನಿಯ ಅಧ್ಯಕ್ಷ ಅಬ್ದುಲ್ ಗಫೂರ್ ಮಾತನಾಡಿ, ಜಮಾಅತೆ ಸಂಘಟನೆಯು ಜಾತಿ ಮತಕ್ಕೆ ಸೀಮಿತಗೊಳ್ಳದೆ ಸಮಾಜದ ಕಾನೂನು, ಶಾಂತಿ, ಸುವ್ಯವಸ್ಥೆ ಕಾಪಾಡುವುದಾಗಿದೆ ಎಂದು ಪ್ರಸ್ತಾವಿಸಿದರು.ಅಧ್ಯಕ್ಷತೆಯನ್ನು ಶಿವಮೊಗ್ಗ ವಲಯ ಸಂಚಾಲಕ ಮೌಲಾನ ಸಲೀಂ ವಹಿಸಿದ್ದರು.
ಸಮಾಜದ ಮುಖಂಡ, ಉದ್ಯಮಿ ಮಹಮ್ಮದ್ ಹನೀಫ್, ಮತ್ತಿತರ ಮುಖಂಡರು ಉಪಸ್ಥಿತರಿದ್ದರು.ತನ್ವೀರ್ ಅಹ್ಮದ್ ಕುರಾನ್ ಪಠಿಸಿ, ಶಿಕ್ಷಕ ಮಹಮ್ಮದ್ ಆಸಿಫ್ ನಿರೂಪಿಸಿದರು.
--------ಫೋಟೋ: 05ಎಸ್‌ಕೆಪಿ02
ಕ್ರಾಂತಿಯ ಜ್ಯೋತಿ ಪ್ರವಾದಿ ಮಹಮ್ಮದ್ (ಸ) ಕಾರ್ಯಕ್ರಮದಲ್ಲಿ ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ರಜಾ ಮಾನ್ವಿ ಮಾತನಾಡಿದರು.