ಸೋಮವಾರ ಎಂಟನೇ ದಿನಕ್ಕೆ ಕಾಲಿಟ್ಟ ದಲಿತ ಸಂಘಟನೆಗಳ ಪ್ರತಿಭಟನೆ

| Published : Jan 28 2025, 12:50 AM IST

ಸಾರಾಂಶ

ಜಿಲ್ಲೆಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಸೇರಿ ಎಲ್ಲಾ ಹಿಂದುಳಿದ ಅಲ್ಪಸಂಖ್ಯಾತ ಭೂಹೀನರು, ರೈತರು ತಮ್ಮ ತಮ್ಮ ಗ್ರಾಮಗಳಲ್ಲಿ ಲಭ್ಯವಿರುವ ಸರ್ಕಾರಿ ಗೋಮಾಳ, ಅನಗತ್ಯ ಅರಣ್ಯ ಮೀಸಲು ಭೂಮಿಗಳಲ್ಲಿ ಬಗರ್ ಹುಕುಂ ಸಾಗುವಳಿ ಮಾಡುತ್ತಿದ್ದು, ಫಾರಂ ನಂ 50, 53, 57 ಅನ್ನು ಸಲ್ಲಿಸಿ ಭೂಮಿ ಮಂಜೂರಾತಿಗಾಗಿ ಕಾಯುತ್ತಿರುವ ಭೂಹೀನರಿಗೆ ಸರ್ಕಾರವು ಭೂಮಿ ಮಂಜೂರು ಮಾಡಬೇಕು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ದಲಿತರ ಮೂಲಭೂತ ಸಮಸ್ಯೆಗಳು ಮತ್ತು ದಲಿತರ ಮೇಲಿನ ದೌರ್ಜನ್ಯಗಳ ಬಗ್ಗೆ ಜಿಲ್ಲಾಡಳಿತದ ನಿರ್ಲಕ್ಷ್ಯ ಹಾಗೂ ದಲಿತ, ರೈತರ ವಿರೋಧಿ ನೀತಿಯನ್ನು ಖಂಡಿಸಿ, ನಗರದ ಉಪವಿಭಾಗಾಧಿಕಾರಿಗಳ ಕಚೇರಿ ಆವರಣದಲ್ಲಿ ದಲಿತ ಸಂಘರ್ಷ ಸಮಿತಿ ಮತ್ತು ಜಿಲ್ಲಾ ಗಡಿನಾಡು ರೈತ ಸಂಘಗಳ ವತಿಯಿಂದ ಅನಿರ್ದಿಷ್ಟಾವಧಿ ಸತ್ಯಾಗ್ರಹ ಸೋಮವಾರ ಎಂಟನೇ ದಿನಕ್ಕೆ ಕಾಲಿಟ್ಟಿತು.

ಸೋಮವಾರ ಕರ್ನಾಟಕ ವಿಕಲಚೇತನರ ಒಕ್ಕೂಟ, ಲಿಂಗತ್ವ ಅಲ್ಪಸಂಖ್ಯಾತರ ಒಕ್ಕೂಟ ಮತ್ತು ಶಾಶ್ವತ ನೀರಾವರಿ ಹೋರಾಟ ಸಮಿತಿ ಬೆಂಬಲ ವ್ಯೆಕ್ತ ಪಡಿಸಿ ಧರಣಿ ಸತ್ಯಾಗ್ರಹದಲ್ಲಿ ಭಾಗಿಯಾದವು.

ಶಾಶ್ವತ ನೀರಾವರಿ ಹೋರಾಟ ಸಮಿತಿ ಸಂಚಾಲಕ ಮಾತನಾಡಿ, ಎಲ್ಲರಿಗೂ ಸಮಪಾಲು, ಎಲ್ಲರಿಗೂ ಸಮಬಾಳು ಎಂಬ ಘೋಷವಾಕ್ಯವು ಕೇಳಲು ಮಾತ್ರ ಹಿತವೆನಿಸುವುದೇ ಹೊರತು, ಕಾರ್ಯರೂಪಕ್ಕೆ ಬರುವುದು ಕನಸಿನ ಮಾತಾಗಿದೆ. ದೇಶಕ್ಕೆ ಸ್ವಾತಂತ್ರ್ಯಹಸ್ತಾಂತರಗೊಂಡು 77 ವರ್ಷಗಳೇ ಕಳೆದರೂ, ಸಹ ಇಂದಿಗೂ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯ ಅಸಮಾನತೆ, ಜಾತಿ ತಾರತಮ್ಯಗಳು ಕಣ್ಣಿಗೆ ರಾಚುವಂತಿದ್ದು, ಬಡವರು, ದಲಿತರು, ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳು ಮಿತಿಮೀರಿವೆ ಮತ್ತು ಮಹಿಳೆಯರ ಮೇಲಿನ ಅತ್ಯಾಚಾರಗಳು ಎಗ್ಗಿಲ್ಲದೆ ಸಾಗುತ್ತಿವೆ. ಸಾಮಾನ್ಯ ಜನರಿಗೆ ಮೂಲಭೂತವಾಗಿ ಬೇಕಾದ ಭೂಮಿ, ವಸತಿ, ಕುಡಿಯುವ ನೀರಿಗಾಗಿ ಹೋರಾಟ ಮಾಡಬೇಕಾದ ಪರಿಸ್ಥಿತಿ ಉಂಟಾಗಿರುವುದು ನಾಚಿಕೆ ಗೇಡಿನ ಸಂಗತಿಯಾಗಿದೆ. ಆಳುವ ಸರ್ಕಾರಗಳು ಜನರ ಬದುಕಿನಲ್ಲಿ ಚೆಲ್ಲಾಟವಾಡುತ್ತಿವೆ ಎಂದು ಕಿಡಿಕಾರಿದರು.

ಕರ್ನಾಟಕ ವಿಕಲಚೇನರ ಹಾಗೂ ನಿಸರ್ಗ ಲಿಂಗತ್ವ ಅಲ್ಪಸಂಖ್ಯಾತರ ಒಕ್ಕೂಟದ ಬಿ.ಕಿರಣ್ ನಾಯಕ್ ಮಾತನಾಡಿ, ಜಿಲ್ಲೆಯಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಜನ ವಿಕಲಚೇತರು ನಿವೇಶನ ಇಲ್ಲದೆ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಅರ್ಹ ವಿಕಲಚೇತನ ಫಲಾನುಭವಿಗಳಿಗೆ ಗ್ರಾಮ ಪಂಚಾಯಿತಿಯಲ್ಲೇ ಕೂಡಲೇ ನಿವೇಶನ ಹಾಗೂ ವಸತಿ ಸೌಲಭ್ಯವನ್ನು ನೀಡಬೇಕು, ಜಿಲ್ಲೆಯ ಹಾಲಿ ಕಂದಾಯ ಜಮೀನುಗಳಲ್ಲಿ ಉಳುಮೆ ಮಾಡುತ್ತಿರುವ ಕೆಲವೇ ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ವ್ಯವಸಾಯ ಮಾಡುವ ರೈತರಿಗೆ ಅನುಕೂಲ ಕಲ್ಪಿಸಬೇಕು. ಕ್ರಷರ್, ಗಣಿಗಾರಿಕೆಗಳಿಗೆ ಅನುಮತಿ ನೀಡಬಾರದು, ಕ್ರಷರ್ ಗಳಿಂದ ಸುಮಾರು ರೈತರು ಬೆಳೆಯುವ ಬೆಳೆಗಳು ನಾಶವಾಗುತ್ತಿದ್ದು, ಆರೋಗ್ಯದ ಮೇಲೆಯೂ ದುಷ್ಪರಿಣಾಮ ಬೀರುತ್ತಿದೆ, ಇದನ್ನು ತಡೆಗಟ್ಟಬೇಕು ಎಂದು ಒತ್ತಾಯಿಸಿದರು.

ದಲಿತ ಸಂಘರ್ಷ ಸಮಿತಿ ರಾಜ್ಯ ಮುಖಂಡ ಕೆ.ಸಿ, ರಾಜಕಾಂತ್ ಮಾತನಾಡಿ, ಜಿಲ್ಲೆಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಸೇರಿ ಎಲ್ಲಾ ಹಿಂದುಳಿದ ಅಲ್ಪಸಂಖ್ಯಾತ ಭೂಹೀನರು, ರೈತರು ತಮ್ಮ ತಮ್ಮ ಗ್ರಾಮಗಳಲ್ಲಿ ಲಭ್ಯವಿರುವ ಸರ್ಕಾರಿ ಗೋಮಾಳ, ಅನಗತ್ಯ ಅರಣ್ಯ ಮೀಸಲು ಭೂಮಿಗಳಲ್ಲಿ ಬಗರ್ ಹುಕುಂ ಸಾಗುವಳಿ ಮಾಡುತ್ತಿದ್ದು, ಫಾರಂ ನಂ 50, 53, 57 ಅನ್ನು ಸಲ್ಲಿಸಿ ಭೂಮಿ ಮಂಜೂರಾತಿಗಾಗಿ ಕಾಯುತ್ತಿರುವ ಭೂಹೀನರಿಗೆ ಸರ್ಕಾರವು ಭೂಮಿ ಮಂಜೂರು ಮಾಡಬೇಕು. ವಸತಿ ರಹಿತರಿಗೆ ನಿವೇಶನ ಕೊಡಬೇಕೆಂಬುದು ಸೇರಿ ನಮ್ಮ ಒಟ್ಟು 14 ಹಕ್ಕೊತ್ತಾಯಗಳನ್ನು ಈಡೇರಿಸಿದರೆ ಧರಣಿ ಸತ್ಯಾಗ್ರಹ ಕೈಬಿಡುತ್ತೇವೆ ಎಂದು ತಿಳಿಸಿದರು.

ಪ್ರತಿಭಟನಾ ನಿರತರ ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್, ಉಪವಿಭಾಗಾಧಿಕಾರಿ ಡಿ.ಎಚ್.ಅಶ್ವಿನ್, ಮತ್ತಿತರ ಅಧಿಕಾರಿಗಳೊಂದಿಗೆ ಆಗಮಿಸಿದ ಜಿಲ್ಲಾ ಪಂಚಾಯತಿ ಸಿಇಒ ಪ್ರಕಾಶ್ ಜಿ.ಟಿ.ನಿಟ್ಟಾಲಿ ಮಾತನಾಡಿ, ನಾಳೆ ಜಿಲ್ಲಾಧಿಕಾರಿಗಳು, ಅಧಿಕಾರಿಗಳ ಸಭೆಯಲ್ಲಿ ಸಮಸ್ಯೆಗಳ ಈಡೇರಿಕೆಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತಾರೆ, ಪ್ರತಿಭಟನೆ ಕೈಬಿಡುವಂತೆ ಧರಣಿ ನಿರತರ ಮನವೊಲಿಸಲು ಪ್ರಯತ್ನಿಸಿದರು. ಆದರೆ ಧರಣಿ ನಿರತರು ಮೊದಲು ಸಮಸ್ಯೆಗಳನ್ನು ಪರಿಹರಿಸಿ ನಂತರ ಸತ್ಯಾಗ್ರಹ ಕೈಬಿಡುತ್ತೇವೆ ಎಂದು ಧರಣಿ ಮುಂದುವರಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಅಹಿಂದ ಮುಖಂಡರಾದ ಕಳವಾರ ಶ್ರೀಧರ್, ಸುಮಿತ್ರಮ್ಮ, ಚಂದ್ರಕಲಾ, ಲಾಯರ್ ಮುನಿಕೃಷ್ಣ, ರಾಮಕೃಷ್ಣಪ್ಪ, ದಸಂಸ ಮುಖಂಡರಾದ ಸಿ.ಜಿ.ಗಂಗಪ್ಪ, ಎನ್.ಪರಮೇಶ್, ಟೈಲರ್ ಮುನಿರಾಜು, ನರಸಿಂಹಮೂರ್ತಿ, ತ್ಯಾಗರಾಜು , ಕರಗಪ್ಪ, ಮುನಿನಾರಾಯಣಪ್ಪ, ಚಿನ್ನಪ್ಪ, ಕಣಿತಹಳ್ಳಿ ಮುನಿಯಪ್ಪ, ಮೂರ್ತಿ, ವೆಂಕಟೇಶ್, ಲಕ್ಷ್ಮಯ್ಯ, ಜಿಲ್ಲಾ ಗಡಿನಾಡು ರೈತ ಸಂಘದ ಉಪ್ಪಾರ ಬಿ.ವೆಂಕಟೇಶ್, ಟಿ.ಮುನಿರಾಜು, ಎಸ್.ಡಿ.ರಾಮಕೃಷ್ಣ, ಎಂ.ಎನ್.ರಾಜಶೇಖರರೆಡ್ಡಿ, ಚಂದ್ರಪ್ಪ, ವಿಕಲಚೇತನರ, ಲಿಂಗತ್ವ ಅಲ್ಪಸಂಖ್ಯಾತರ ಒಕ್ಕೂಟದ ವೆಂಕಟರೆಡ್ಡಿ, ಮಮತ, ಕೃಷ್ಣಪ್ಪ ಮತ್ತಿತರರು ಇದ್ದರು.

.