ನೀರು ಕೊಡಿ, ಇಲ್ಲವೇ ವಿಷ ಕೊಡಿ: ರೈತರ ಆಗ್ರಹ

| Published : Dec 23 2023, 01:45 AM IST

ಸಾರಾಂಶ

ಫೆಬ್ರವರಿ ಅಂತ್ಯದವರೆಗೆ ಕಾಲುವೆಗೆ ನೀರು ಹರಿಸ ಬೇಕೆಂದು ಒತ್ತಾಯಿಸಿ ದಿಢೀರನೆ ಬಂದ್‌ ಮಾಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಇಲ್ಲಿನ ಭೀಮರಾಯನಗುಡಿ ಕೆಬಿಜೆಎನ್‌ಎಲ್‌ ಕಚೇರಿ ಮುಂದೆ ಎತ್ತಿನ ಗಾಡಿ ಹಾಗೂ ಎತ್ತುಗಳನ್ನು ಕಟ್ಟಿ ಹಾಕಿ ರೈತ ಮುಖಂಡರು ಪ್ರತಿಭಟಿಸಿದರು.

ಕನ್ನಡಪ್ರಭ ವಾರ್ತೆ ಶಹಾಪುರ

ಫೆಬ್ರವರಿ ಅಂತ್ಯದವರೆಗೆ ಕಾಲುವೆಗೆ ನೀರು ಹರಿಸ ಬೇಕೆಂದು ಒತ್ತಾಯಿಸಿ ದಿಢೀರನೆ ಬಂದ್‌ ಮಾಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಇಲ್ಲಿನ ಭೀಮರಾಯನಗುಡಿ ಕೆಬಿಜೆಎನ್‌ಎಲ್‌ ಕಚೇರಿ ಮುಂದೆ ಎತ್ತಿನ ಗಾಡಿ ಹಾಗೂ ಎತ್ತುಗಳನ್ನು ಕಟ್ಟಿ ಹಾಕಿದ ರೈತ ಮುಖಂಡರು, ನಂತರ ಮಧ್ಯಾಹ್ನ ನಾಲ್ಕು ಗಂಟೆಗೆ ಕಚೇರಿ ಪ್ರವೇಶ ದ್ವಾರ ಸೇರಿ ನಾಲ್ಕು ಕಡೆ ಕಚೇರಿಗೆ ಬೀಗ ಜಡಿದು ಶಹಾಪುರ, ಸುರಪುರ ಹಾಗೂ ಜೇವರ್ಗಿ ತಾಲೂಕಿನ ವಿವಿಧ ಗ್ರಾಮಗಳ ರೈತರು ಕಳೆದ ಐದು ದಿನಗಳಿಂದ ಆಹೋರಾತ್ರಿ ಧರಣಿ ನಡೆಸಿ ರೈತರ ಜಮೀನಿಗೆ ನೀರು ಕೊಡಿ ಇಲ್ಲ, ವಿಷ ಕೊಡಿ ಎಂದು ಧರಣಿನಿರತರು ಸರ್ಕಾರಕ್ಕೆ ಒತ್ತಾಯಿಸಿದರು.

ಕಾಲುವೆ ನೀರು ನಂಬಿದ ರೈತರು ಈಗಾಗಲೇ ಬೆಳೆದು ನಿಂತಿರುವ ಕೋಟ್ಯಂತರ ರು. ಗಳ ಮೌಲ್ಯದ ಬೆಳೆಗಳಾದ ಶೇಂಗಾ, ಮೆಣಸಿನಕಾಯಿ, ಹತ್ತಿ, ಜೋಳ, ಸಜ್ಜೆ ಬೆಳೆಗಳಿಗೆ ಇನ್ನು ಎರಡು ಮೂರು ಬಾರಿ ನೀರು ಒದಗಿಸದಿದ್ದಲ್ಲಿ ಸಂಪೂರ್ಣ ಬೆಳೆ ನಷ್ಟವಾಗುತ್ತದೆ. ಈಗ ಭೀಕರ ಬರಗಾಲ ಆವರಿಸಿದ್ದರಿಂದ ರೈತರ ಬದುಕು ದಿನದಿಂದ ದಿನಕ್ಕೆ ಸಂಕಷ್ಟದ ಸ್ಥಿತಿಗೆ ತಲುಪುತ್ತಿದೆ.

ಸಾಲ ಮಾಡಿ ಎಕರೆಗೆ 2 ರಿಂದ 2.50 ಲಕ್ಷ ಮೆಣಸಿನಕಾಯಿ ಬೆಳೆಗೆ ಖರ್ಚು ಮಾಡಿದ ರೈತರಿಗೆ ಸಾವು ಒಂದೇ ಬಾಕಿ ಇದೆ. ಫೆಬ್ರವರಿ ಅಂತ್ಯದವರೆಗೆ ನೀರು ಕೊಟ್ಟರೆ ರೈತರು ಬದುಕುತ್ತಾರೆ. ಇಲ್ಲದೆ ಹೋದರೆ ರೈತರ ಪರಸ್ಥಿತಿ ತುಂಬಾ ಜನ ಚಿಂತಾ ಜನಕವಾಗಿದೆ. ರೈತರ ಗೋಳು ಕೇಳದ ಸರ್ಕಾರ, ವಿರೋಧ ಪಕ್ಷಗಳು ರೈತರ ಪಾಲಿಗೆ ಸತ್ತಂತೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ್ ಸತ್ಯಂಪೇಟೆ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ರೈತ ಸಂಘದ ಉಪಾಧ್ಯಕ್ಷೆ ನಾಗರತ್ನ ವಿ. ಪಾಟೀಲ್ ಮಾತನಾಡಿ, ಆಲಮಟ್ಟಿ ಜಲಾಶಯದಿಂದ ಜಿಂದಾಲ್‌ ಕಂಪನಿಗೆ ನೀರು ಬಿಡುವ ಉದ್ದೇಶಕ್ಕಾಗಿ ರೈತರ ಹಿತದೃಷ್ಠಿಯನ್ನು ಕಡೆಗಣಿಸುತ್ತಿರುವುದು ಖಂಡನೀಯ. ಕೂಡಲೇ ಜಿಂದಾಲ್‌ ಕಂಪನಿಗೆ ನೀರು ಬಿಡುವುದನ್ನು ನಿಲ್ಲಿಸಿ ರೈತರ ಬೆಳೆದು ನಿಂತಿರುವ ಬೆಳೆಗೆ ಫೆಬ್ರವರಿ ಅಂತ್ಯದವರೆಗೆ ನೀರು ಕೊಡಬೇಕು. ಇಲ್ಲವಾದರೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಅಮಾತೆಪ್ಪ ಕಂದಕುರ, ಜೇವರ್ಗಿಯ ಬಿಜೆಪಿ ಮುಖಂಡ ಧರ್ಮಣ್ಣ ದೊಡ್ಮನಿ, ಚಂದ್ರಕಲಾ ವಡಿಗೇರಾ, ಮಲ್ಲಣ್ಣ ಚಿಂತಿ, ಪ್ರಭು ಕೊಂಗಂಡಿ, ಮಲ್ಲಣ್ಣ ನೀಲಹಳ್ಳಿ, ಹಣಮಂತ ಕೊಂಗಂಡಿ, ಗುರಣ್ಣ ದೇಸಾಯಿ, ಶಂಕರ್ ನಾಯಕ ಜಾದವ್, ಸಿದ್ದಣ್ಣ ಯಂಕಂಚಿ, ಮುದ್ದಣ್ಣ ಅಮ್ಮಪುರ್, ಬಾಬುರಾವ್ ಹೊಸಮನಿ, ತಿಪ್ಪಣ್ಣ ಬಿರಾದಾರ್, ಭೀಮಣ್ಣ ಮಿಲ್ಟ್ರಿ, ಅನಿಲಕುಮಾರ್, ಮರೆಪ್ಪ ಲಕ್ಷ್ಮಿಪುರ, ಶ್ರೀಮಂತಗೌಡ ಇತರರಿದ್ದರು.