ಸಾರಾಂಶ
ಜಾತಿ ಗಣತಿಗೆ ಶಿಕ್ಷಕರು ಸೇರಿದಂತೆ ಸಾರ್ವಜನಿಕರು ಸಹಕರಿಸುವ ಮೂಲಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯನ್ನು ಪೂರ್ಣಗೊಳಿಸುವಂತೆ ಶಾಸಕ ಬಸವರಾಜ ಶಿವಣ್ಣನವರ ಕರೆ ನೀಡಿದರು.
ಬ್ಯಾಡಗಿ: ಜಾತಿ ಗಣತಿಗೆ ಶಿಕ್ಷಕರು ಸೇರಿದಂತೆ ಸಾರ್ವಜನಿಕರು ಸಹಕರಿಸುವ ಮೂಲಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯನ್ನು ಪೂರ್ಣಗೊಳಿಸುವಂತೆ ಶಾಸಕ ಬಸವರಾಜ ಶಿವಣ್ಣನವರ ಕರೆ ನೀಡಿದರು.
ಪಟ್ಟಣದ ನದಾಫ್ ಪ್ಲಾಟನ್ ಮನೆಯೊಂದರಲ್ಲಿ ಜಾತಿಗಣತಿ ಪ್ರಕ್ರಿಯೆಗೆ ಚಾಲನೆ ನೀಡುವ ಮೂಲಕ ಅವರು ಮಾತನಾಡಿದರು. ಜಾತಿ ಗಣತಿ ವಿಚಾರದಲ್ಲಿ ವಾಸ್ತವತೆಯನ್ನು ಕಾಯ್ದುಕೊಳ್ಳಬೇಕು. ಇದರಿಂದ ಮಾತ್ರ ನಿಜವಾದ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯಗಳು ಸಿಗಲು ಸಾಧ್ಯ. ಈ ನಿಟ್ಟಿನಲ್ಲಿ ತಾವೆಲ್ಲರೂ ಸರ್ಕಾರದ ಜತೆ ಕೈಜೋಡಿಸಬೇಕಾಗಿದೆ ಎಂದರು.ಕಾಟಾಚಾರದ ಕೆಲಸಕ್ಕೆ ತಕ್ಕ ಶಾಸ್ತಿ: ಜಾತಿಗಣತಿ ಒಂದು ಸಮುದಾಯಕ್ಕೆ ಸೀಮಿತವಲ್ಲ, ಅದು ಆಗಲೂಬಾರದು. ಜಾತಿ ಗಣತಿ ಮಾಡಲು ನೇಮಕ ಮಾಡಿದ ಸಿಬ್ಬಂದಿಗಳು ತಪ್ಪದೇ ಖುದ್ದಾಗಿ ಮನೆ ಮನೆಗೆ ತೆರಳಿ ಎಲ್ಲ ಮಾಹಿತಿಯನ್ನು ಪಡೆದುಕೊಂಡು ವಿವರವಾದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕಾಗಿದೆ. ಒಂದು ವೇಳೆ ಇಂತಹದ್ದೊಂದು ತಪ್ಪುಗಳು ಕಂಡು ಬಂದಲ್ಲಿ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮವಾಗಲಿದೆ ಎಂದರು.
ಎಲ್ಲೋ ಕುಳಿತು ಗಣತಿ ಮಾಡದಿರಿ: ಪುರಸಭೆ ಅಧ್ಯಕ್ಷ ಬಾಲಚಂದ್ರ ಪಾಟೀಲ ಮಾತನಾಡಿ, ಗಣತಿ ಸಂದರ್ಭಗಳಲ್ಲಿ ಎಲ್ಲೋ ಕುಳಿತು ಅಕ್ಕ ಪಕ್ಕದವರ ಮಾಹಿತಿ ಪಡೆದು ವರದಿ ಸಲ್ಲಿಸಿದಂತಹ ಸಾಕಷ್ಟು ನಿದರ್ಶನಗಳಿವೆ. ಇಂತಹ ಘಟನೆಗಳಿಗೆ ಅವಕಾಶ ನೀಡದೇ ಗಣತಿದಾರರು ಖುದ್ದಾಗಿ ತೆರಳಿ ಸತ್ಯವಾದ ಮಾಹಿತಿಗೆ ಒತ್ತು ನೀಡುವಂತೆ ಸಲಹೆ ನೀಡಿದರು.ಒತ್ತಡಕ್ಕೆ ಮಣಿಯದಿರಿ: ಪುರಸಭೆ ಸದಸ್ಯ ಬಸವರಾಜ ಛತ್ರದ ಮಾತನಾಡಿ, ರಾಜ್ಯ ಸರ್ಕಾರ ಕೈಗೊಂಡಿರುವ ಜಾತಿಗಣತಿ ವಿಚಾರವಾಗಿ ಪರ ಮತ್ತು ವಿರೋಧಗಳಿವೆ. ಈ ಹಿನ್ನೆಲೆಯಲ್ಲಿ ಗಣತಿ ಸಿಬ್ಬಂದಿಗಳು ಯಾವುದೇ ಒತ್ತಡಕ್ಕೆ ಮಣಿಯದಂತೆ ಸಲಹೆ ನೀಡಿದ ಅವರು, ತಮ್ಮ ಒಂದು ತಪ್ಪಿನಿಂದ ಒಂದು ಕುಟುಂಬ ಸೇರಿದಂತೆ ಸಮುದಾಯಕ್ಕೆ ಸಿಗಬೇಕಾದ ಸೌಲಭ್ಯ ವಂಚಿತರಾಗುವ ಸಾಧ್ಯತೆಗಳಿದ್ದು ಎಚ್ಚರದಿಂದ ಕೆಲಸ ನಿರ್ವಹಿಸುವಂತೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಬಿಇಓ ಎಸ್.ಜಿ.ಕೋಟಿ, ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೋಳ, ಹಿಂದುಳಿ ವರ್ಗಗಳ ಇಲಾಖೆಯ ಪ್ರಸಾದಿಮಠ, ತಹಸೀಲ್ದಾರ ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿಗಳು ಉಪಸ್ಥಿತರಿದ್ದರು.