ಸಾರಾಂಶ
ಕನ್ನಡಪ್ರಭ ವಾರ್ತೆ ಹುಣಸೂರು
ಪಟ್ಟಣದ ನಗರಸಭೆಯ ಡಾ.ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಲೋಕಾಯುಕ್ತ ಅಧಿಕಾರಿಗಳಿಂದ ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆಯಲ್ಲಿ ಸಾರ್ವಜನಿಕರು ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟರು.ಬಿಳಿಕೆರೆ ಕೆಂಪರಾಜು ಮಾತನಾಡಿ, ತಾಲೂಕಿನ ಬಿಳಿಕೆರೆಯಲ್ಲಿ 20 ವರ್ಷಗಳ ಹಿಂದೆ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಒಕ್ಕಲಿಗ ಸಮುದಾಯ ಭವನಕ್ಕೆ ನೀಡಲಾಗಿತ್ತು. ಈ ಕುರಿತು ನಾನು ಸರ್ಕಾರಿ ಆಸ್ತಿಯನ್ನು ಉಳಿಸುವತ್ತ ನಡೆಸಿದ ಹೋರಾಟದ ಫಲವಾಗಿ ವರ್ಷದ ಹಿಂದೆ ಭೂಮಿಯನ್ನು ಗ್ರಾಮೀಣಾಭಿವೃದ್ಧಿ ಇಲಾಖೆ ತನ್ನ ವಶಕ್ಕೆ ಪಡೆಯಲು ಸರ್ಕಾರ ಸೂಚಿಸಿದೆ. ಹೀಗಿದ್ದೂ ತಾಪಂ ಅಧಿಕಾರಿಗಳು, ಗ್ರಾಪಂ ಪಿಡಿಒ ಈ ಕುರಿತು ಕ್ರಮವಹಿಸುತ್ತಿಲ್ಲ. ನಿಮಗೆ ನಿಮ್ಮ ಆಸ್ತಿ ಬೇಡವೇನ್ರಿ? ನನ್ನ ಆಸ್ತಿ ಬಗ್ಗೆ ನಾನು ಹೋರಾಡುತ್ತಿಲ್ಲ ಸ್ವಾಮಿ, ನೀವು ಯಾರ ಮುಲಾಜಿಗೇನಾದ್ರು ಒಳಗಾಗಿದ್ದೀರಾ. ನಿವೇಶನ ವಶಕ್ಕೆ ಪಡೆದು ಅಂದು ಅಕ್ರಮದಲ್ಲಿ ಭಾಗಿಯಾಗಿದ್ದಾರೆನ್ನಲಾದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಒತ್ತಾಯಿಸಿದರು.
ಲೋಕಾಯುಕ್ತ ಡಿವೈಎಸ್‌ಪಿ ವೆಂಕಟೇಶ್ ಮಾತನಾಡಿ, ಸರ್ಕಾರದ ಆದೇಶವಿದ್ದರೂ ಯಾಕೆ ವಿಳಂಬವಾಗಿದೆ ಎಂದು ಪ್ರಶ್ನಿಸಿದಾಗ, ಸೆ.16ರಂದು ಈ ಕುರಿತು ಸಭೆ ಆಯೋಜಿಸಿದ್ದ ಶೀಘ್ರ ವಶಕ್ಕೆ ಪಡೆಯುವುದಾಗಿ ಇಒ ಕೆ. ಹೊಂಗಯ್ಯ ಉತ್ತರಿಸಿದರು.ನಗರದ ಹಳೆ ಬಸ್ ನಿಲ್ದಾಣದ ಬಳಿಯ ಫುಡ್ ಬಜಾರ್ ಮಾಲ್ ನಿಂದ ಆರಂಭಗೊಂಡು ಅಕ್ಷಯಭಂಡಾರ್ ವರೆಗಿನ ಫುಟ್ ಪಾತ್ ಸಂಪೂರ್ಣವಾಗಿ ತಳ್ಳುವಗಾಡಿಗಳಿಂದ ತುಂಬಿ ಹೋಗಿದ್ದು, ನಗರಸಭೆಯ ಮಳಿಗೆಗಳಲ್ಲಿ ವ್ಯಾಪಾರ ನಡೆಸುವ ವರ್ತಕರಿಗೆ ಆರ್ಥಿಕವಾಗಿ ತೀವ್ರತೆರನಾದ ಹೊಡೆತ ಬಿದ್ದಿದೆ. ಈಗಾಗಲೇ ಎರಡು ಬಾರಿ ಲೋಕಾಯುಕ್ತ ಸಭೆಯಲ್ಲಿ ಈ ಕುರಿತು ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ನಾಮಕಾವಸ್ತೆಗೆ ಒಂದೆರಡು ಬಾರಿ ನಗರಸಭೆ ಅಧಿಕಾರಿಗಳು ತೆರವುಗೊಳಿಸುವ ಪ್ರಕ್ರಿಯೆ ನಡೆಸಿ ಸುಮ್ಮನಾಗುತ್ತಿದ್ದಾರೆ. ಮತ್ತೆ ಫುಟ್ ಪಾತ್ ವ್ಯಾಪಾರಿಗಳು ಬಂದು ಕೂರುತ್ತಿದ್ದಾರೆ. ಬಂಡವಾಳ ಹಾಕಿಕೊಂಡು ಬಸವಳಿಯುತ್ತಿದ್ದೇವೆ ಎಂದು ವರ್ತಕರಾದ ರಾಜೇಶ್ ಕಾಕಡೆ, ದಾಮೋದರ್, ಮಂಜುನಾಥ್ ಇತರರು ಅವಲತ್ತುಕೊಂಡರು.
ಪೌರಾಯುಕ್ತೆ ಕೆ.ಮಾನಸ ಮಾತನಾಡಿ, ಶೀಘ್ರದಲ್ಲಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಂಚಿನ ಗ್ರಾಮಗಳಲ್ಲಿ ಹುಲಿ, ಚಿರತೆ ಮತ್ತು ಕಾಡಾನೆಗಳ ದಾಳಿ ಅವಿರತವಾಗಿ ನಡೆಯುತ್ತಿದೆ ಎಂಬ ದೂರುಗಳು ಬಂದಿದ್ದು, ಈ ಕುರಿತು ಅರಣ್ಯ ಇಲಾಖೆ ಏನು ಕ್ರಮವಹಿಸಿದೆ ಎಂದು ಡಿವೈಎಸ್‌ಪಿ ವೆಂಕಟೇಶ್ ಆರ್‌ಎಫ್‌ಒ (ಪ್ರಾದೇಶಿಕ ವಿಭಾಗ) ನಂದಕುಮಾರ್ ಅವರನ್ನು ಪ್ರಶ್ನಿಸಿದಾಗ, ತಾಲೂಕಿನ ಕಾಡಂಚಿನ ಗ್ರಾಮಗಳಾದ ಬಿಲ್ಲೇನಹೊಸಳ್ಳಿ, ನೇರಳಕುಪ್ಪೆ, ಸಿಂಡೇನಹಳ್ಳಿ, ಕೊಳವಿಗೆ, ಶೆಟ್ಟಳ್ಳಿ ಲಕ್ಕಪಟ್ಟಣ ಮುಂತಾದ ಕಡೆಗಳಲ್ಲಿ ಹುಲಿ ದಾಳಿ ನಡೆಸಿ ಜಾನುವಾರುಗಳನ್ನು ಕೊಂದು ಹಾಕುವ ಘಟನೆ ನಡೆದಿದೆ. 4 ತಿಂಗಳ ಹಿಂದೆ ಗಿರಿಜನ ವ್ಯಕ್ತಿ ಕೂಡ ಹುಲಿ ದಾಳಿಗೆ ಬಲಿಯಾಗಿದ್ದಾರೆ. ಇಲಾಖೆ ಈ ಕುರಿತು ಹುಲಿಗಳ ಪತ್ತೆಕಾರ್ಯಕ್ಕಾಗಿ ಹುಲಿಗಳ ಚಲನವಲನಗಳನ್ನು ಗಮನಿಸುವ ಕಾರ್ಯ ನಡೆಯುತ್ತಿದೆ. ಅರಣ್ಯಭಾಗದಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾಗಳ ಮೂಲಕ ಗುರುತಿಸಲ್ಪಟ್ಟ ಹುಲಿಗಳ ಚಲನವಲನ ದಾಖಲಾಗುತ್ತಿದೆ. ಪದೇ ಪದೇ ಕಾಡಿನಿಂದ ಹೊರಬರುತ್ತಿರುವ ಒಂದೆರಡು ಹುಲಿಗಳ ಸೆರೆಗಾಗಿ ಸರ್ಕಾರದ ಮಟ್ಟದಲ್ಲಿ ಅನುಮತಿ ಪಡೆಯುವ ಪ್ರಕ್ರಿಯೆ ನಡೆದಿದ್ದು, ಶೀಘ್ರ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಡಿವೈಎಸ್‌ಪಿ ವೆಂಕಟೇಶ್ ಮಾತನಾಡಿ, ಹುಣಸೂರಿನಲ್ಲಿ ಲೋಕಾಯುಕ್ತ ಅಹವಾಲು ಸ್ವೀಕಾರ ಸಭೆ ಕುರಿತು ಮಾದ್ಯಮಗಳಲ್ಲಿ ಮಾಹಿತಿ ಬಂದಿಲ್ಲವೆಂಬ ವಿಷಯ ತಿಳಿದುಕೊಂಡಿದ್ದೇನೆ. ಈ ವಿಷಯದಲ್ಲಿ ನಮ್ಮದೂ ತಪ್ಪಾಗಿದೆ. ಮುಂದಿನ ದಿನಗಳಲ್ಲಿ ಸ್ಥಳೀಯವಾಗಿ ಮಾಧ್ಯಮಗಳಿಗೆ ಮಾಹಿತಿ ನೀಡಲಾಗುವುದು. ಇಂದಿನ ಸಭೆಯಲ್ಲಿ ಗೈರಾಗಿರುವ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಗೈರಾದ ಅದಿಕಾರಿಗಳಿಗೆ ಕಾರಣ ಕೇಳಿ ನೋಟೀಸ ನೀಡಲಾಗುವುದು ಎಂದು ತಿಳಿಸಿದರು.ಸಭೆಯಲ್ಲಿ ಲೋಕಾಯುಕ್ತ ಇನ್ಸ್ ಪೆಕ್ಟರ್ ಉಮೇಶ್, ರವಿಕುಮಾರ್, ತಹಸೀಲ್ದಾರ್ ಜೆ. ಮಂಜುನಾಥ್, ಲೋಕಾಯುಕ್ತ ಸಿಬ್ಬಂದಿ ತ್ರಿವೇಣಿ, ನಿತಿನ್, ದಿನೇಶ್, ಬಸವರಾಜ ಅರಸ್, ಮೋಹನ್ ಕುಮಾರ್, ನಾಗೇಶ್ ಪಾಟೀಲ್, ಅಧಿಕಾರಿಗಳು ಇದ್ದರು.