ಸುಗ್ಗಿ ಸಂಕ್ರಾಂತಿ ಹಬ್ಬದ ಅಗತ್ಯ ವಸ್ತುಗಳ ಖರೀದಿ ಜೋರು..!

| Published : Jan 15 2024, 01:51 AM IST

ಸಾರಾಂಶ

ಹಲಗೂರು ಪ್ರಮುಖ ವೃತ್ತದಿಂದ ಚನ್ನಪಟ್ಟಣ ರಸ್ತೆಯ ಉದ್ದಕ್ಕೂ ಎರಡೂ ಬದಿಗಳಲ್ಲಿ ಗೆಣಸು, ಕಬ್ಬು, ಅವರೇಕಾಯಿ, ಕಡಲೇಕಾಯಿ, ವಿವಿಧ ಬಗೆಯ ಸೊಪ್ಪು, ಹೂ, ಹಣ್ಣುಗಳ ಖರೀದಿ ಭರಾಟೆ, ವಸ್ತುಗಳ ಬೆಲೆ ಏರಿಕೆ ನಡುವೆ ಜನರು ಸಂಕ್ರಾಂತಿ ಹಬ್ಬಕ್ಕಾಗಿ ಕಡ್ಲೆಬೀಜ, ಸಕ್ಕರೆ ಅಚ್ಚು, ಕೊಬ್ಬರಿ, ಬೆಲ್ಲ, ಅವರೆ, ತರಕಾರಿ, ಹೂ ಸೇರಿದಂತೆ ರಾಸುಗಳನ್ನು ಸಿಂಗರಿಸಲು ವಸ್ತುಗಳನ್ನು ಕೊಳ್ಳುತ್ತಿದ್ದರು.

ಕನ್ನಡಪ್ರಭ ವಾರ್ತೆ ಹಲಗೂರುಮಕರ ಸಂಕ್ರಾಂತಿ ಹಬ್ಬದ ನಿಮಿತ್ತ ಸುತ್ತಮುತ್ತಲಿನ ಗ್ರಾಮಸ್ಥರು, ಸಾರ್ವಜನಿಕರು ಎಳ್ಳು, ಬೆಲ್ಲ, ಕಬ್ಬು, ಸಕ್ಕರೆ ಅಚ್ಚು, ಹೂವು, ಹಣ್ಣು, ತರಕಾರಿ ಸೇರಿದಂತೆ ಹಬ್ಬಕ್ಕೆ ಬೇಕಾದ ಅಗತ್ಯ ಪದಾರ್ಥಗಳ ಖರೀದಿ ಭರಾಟೆ ಜೋರಾಗಿತ್ತು.

ಸುಗ್ಗಿ ಹಬ್ಬ ಸಂಕ್ರಾಂತಿ ಅಂಗವಾಗಿ ಅವರೇಕಾಯಿ, ಕಡಲೇಕಾಯಿ, ಗೆಣಸು, ಕಬ್ಬು, ಹೂವು ಸೇರಿದಂತೆ ಅಗತ್ಯ ದಿನಬಳಕೆ ವಸ್ತುಗಳ ಬೆಲೆ ದುಬಾರಿಯಾಗಿದ್ದರೂ ಗ್ರಾಹಕರು ಖರೀದಿ ಮಾಡಿದರು.

ಹಲಗೂರು ಪ್ರಮುಖ ವೃತ್ತದಿಂದ ಚನ್ನಪಟ್ಟಣ ರಸ್ತೆಯ ಉದ್ದಕ್ಕೂ ಎರಡೂ ಬದಿಗಳಲ್ಲಿ ಗೆಣಸು, ಕಬ್ಬು, ಅವರೇಕಾಯಿ, ಕಡಲೇಕಾಯಿ, ವಿವಿಧ ಬಗೆಯ ಸೊಪ್ಪು, ಹೂ, ಹಣ್ಣುಗಳ ಖರೀದಿ ಭರಾಟೆಯೂ ಜೋರಾಗಿ ನಡೆಯಿತು.

ಹಬ್ಬದಲ್ಲಿ ರಾಸುಗಳಿಗೆ ಸಿಂಗಾರ ಮಾಡಿ ಕಿಚ್ಚು ಹಾಯಿಸುವ ಪದ್ಧತಿ ಇದ್ದು, ಹಸುಗಳನ್ನು ಸಿಂಗರಿಸಲು ಅಲಂಕಾರಿಕ ವಸ್ತುಗಳನ್ನು ರೈತರು ಉತ್ಸಾಹದಿಂದ ಖರೀದಿಸುತ್ತಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಒಂದೆಡೆ ಸೇರಿದ್ದರಿಂದ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಯಿತು.

ವಾಹನ ಸವಾರರಿಗೆ ತೊಂದರೆಯಾಗದಂತೆ ಸಬ್ ಇನ್ಸ್ ಪೆಕ್ಟರ್ ಬಿ.ಮಹೇಂದ್ರ ಹಾಗೂ ಸಿಬ್ಬಂದಿಗಳು ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

ಭಾರತೀನಗರದಲ್ಲೂ ಅಗತ್ಯ ವಸ್ತುಗಳ ಖರೀದಿ

ಮಕರ ಸಂಕ್ರಾಂತಿ ಅಂಗವಾಗಿ ಅಗತ್ಯ ವಸ್ತುಗಳ ಖರೀದಿಗಾಗಿ ಸಾರ್ವಜನಿಕರು ಪಟ್ಟಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.

ವಸ್ತುಗಳ ಬೆಲೆ ಏರಿಕೆ ನಡುವೆ ಜನರು ಸಂಕ್ರಾಂತಿ ಹಬ್ಬಕ್ಕಾಗಿ ಕಡ್ಲೆಬೀಜ, ಸಕ್ಕರೆ ಅಚ್ಚು, ಕೊಬ್ಬರಿ, ಬೆಲ್ಲ, ಅವರೆ, ತರಕಾರಿ, ಹೂ ಸೇರಿದಂತೆ ರಾಸುಗಳನ್ನು ಸಿಂಗರಿಸಲು ವಸ್ತುಗಳನ್ನು ಕೊಳ್ಳುತ್ತಿದ್ದರು.

ಭಾರತೀನಗರ ಸುತ್ತಮುತ್ತಲ ಹಳ್ಳಿಗಳಿಗೆ ಕೇಂದ್ರ ಸ್ಥಳವಾಗಿರುವುದರಿಂದ ಸಂಕ್ರಾಂತಿ ಹಬ್ಬದ ಅಂಗವಾಗಿ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲು ಆಗಮಿಸಿರುವುದರಿಂದ ಮದ್ದೂರು-ಮಳವಳ್ಳಿ ಹೆದ್ದಾರಿಯಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಿರುವುದರಿಂದ ಟ್ರಾಫಿಕ್ ಜಾಮ್ ಉಂಟಾಗಿದೆ. ಪೊಲೀಸರು ರಸ್ತೆಯನ್ನು ಸುಗಮಗೊಳಿಸುವಲ್ಲಿ ಮುಂದಾಗಿದ್ದರು.

ದೇಶಿ ಸಂಸ್ಕೃತಿ ಉಳಿಸಲು ಸಂಕ್ರಾಂತಿ ಸಂಭ್ರಮ:ಶಿವಮ್ಮಭಾರತೀನಗರ: ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿರುವ ಮಕ್ಕಳಲ್ಲಿ ದೇಶಿಯ ಸಂಸ್ಕೃತಿ ಉಳಿಸಲು ಸಂಕ್ರಾಂತಿ ಸಂಭ್ರಮ ಆಯೋಜಿಸಲಾಗಿದೆ ಎಂದು ಶಾಲೆ ಮುಖ್ಯಸ್ಥೆ ಶಿವಮ್ಮ ಶಿವಕುಮಾರ್ ಹೇಳಿದರು.

ಮೆಣಸಗೆರೆ ಜ್ಞಾನಮುದ್ರ ವಿದ್ಯಾಮಂದಿರ ಶಾಲೆಯಲ್ಲಿ ಸಂಕ್ರಾಂತಿ ಸಂಭ್ರಮಾಚರಣೆಯನ್ನು ಮಕ್ಕಳೊಂದಿಗೆ ಭತ್ತದ ರಾಶಿ, ಕಬ್ಬಿನ ಜಲ್ಲೆ, ಮಡಿಕೆಗಳಿಗೆ ಪೂಜೆ ಸಲ್ಲಿಸಿ ಉದ್ಘಾಟಿಸಿ ಮಾತನಾಡಿದರು.

ಇಂದಿನ ಪೀಳೆಗೆಯ ಮಕ್ಕಳಿಗೆ ರೈತರ ಬದುಕು ತಿಳಿದಿಲ್ಲ. ಮೊರ, ಇಬ್ಬಳಿಗೆ, ಸೇರು ಇತ್ಯಾದಿ ಹಳ್ಳಿಯಲ್ಲಿ ಬಳಸುವ ಪದಾರ್ಥಗಳ ಹೆಸರು ಗೊತ್ತಿಲ್ಲ. ಅವುಗಳ ಬಗ್ಗೆ ಅದನ್ನು ಮಕ್ಕಳಲ್ಲಿ ತಿಳಿಸಿ ಹಳ್ಳಿ ಸೊಬಗನ್ನು ಪ್ರಜ್ವಲಿಸಲು ಸುಗ್ಗಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಶಾಲೆ ಛೇರ್‍ಮೆನ್ ಪ್ರಭಾವತಿ ಮಾತನಾಡಿ, ಹಿರಿಯರು ಹಾಕಿಕೊಟ್ಟ ಸಂಪ್ರದಾಯಗಳನ್ನು ನಾವು ಪಾಲಿಸಬೇಕು. ಹಾಗೆಯೇ ದೇಶಿ ಉಡುಪು, ದೇಶಿ ಆಹಾರ ಮರು ಹುಟ್ಟಿಸಬೇಕು ಎಂದರು.

ಶಾಲೆಯಲ್ಲಿ ಪೋಷರಿಗಾಗಿ ಆಯೋಜಿಸಿದ್ದ ಗ್ರಾಮೀಣ ಕ್ರೀಡಾಕೂಟದಲ್ಲಿ ವಿಜೇತರಾದ ಪೋಷಕರಿಗೆ ಬಹುಮಾನ ವಿತರಣೆ ಮಾಡಲಾಯಿತು. ನಂತರ ರಾಸುಗಳನ್ನು ಶಾಲಾ ಆವರಣದಲ್ಲಿ ಕಿಚ್ಚು ಹಾಯಿಸಲಾಯಿತು. ಮಕ್ಕಳಿಂದ ಸಂಕ್ರಾಂತಿ ಸಂಭ್ರಮದ ಜಾನಪದ ಗೀತೆಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಈ ವೇಳೆ ಶಾಲೆ ಸಂಸ್ಥಾಪಕಿ ಸೌಮ್ಯರಾಜೇಶ್, ಪ್ರಾಂಶುಪಾಲ ಮಂಜುನಾಥ್ ಸೇರಿದಂತೆ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.