ತಾಯಿ ಹಾಲಿನ ಮಹತ್ವ ತಿಳಿಸುವುದು ಸ್ತನ್ಯಪಾನ ಸಪ್ತಾಹದ ಉದ್ದೇಶ: ಡಾ. ಅಶ್ವಥ್‌ಬಾಬು

| Published : Aug 06 2025, 01:15 AM IST

ತಾಯಿ ಹಾಲಿನ ಮಹತ್ವ ತಿಳಿಸುವುದು ಸ್ತನ್ಯಪಾನ ಸಪ್ತಾಹದ ಉದ್ದೇಶ: ಡಾ. ಅಶ್ವಥ್‌ಬಾಬು
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ತಾಯಿ ಹಾಲು, ಅದರ ಮಹತ್ವ, ಮಗುವಿಗೆ ಆಗುವ ಪ್ರಯೋಜನದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಆಗಸ್ಟ್ ಮೊದಲ ವಾರದಲ್ಲಿ ಸ್ತನ್ಯಪಾನ ಸಪ್ತಾಹ ಆಚರಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವಥ್‌ಬಾಬು ಹೇಳಿದರು.

- ಜಿಲ್ಲಾ ಸರ್ಕಾರಿ ಆಸ್ಪತ್ರೆ ಸಭಾಂಗಣದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ತಾಯಿ ಹಾಲು, ಅದರ ಮಹತ್ವ, ಮಗುವಿಗೆ ಆಗುವ ಪ್ರಯೋಜನದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಆಗಸ್ಟ್ ಮೊದಲ ವಾರದಲ್ಲಿ ಸ್ತನ್ಯಪಾನ ಸಪ್ತಾಹ ಆಚರಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವಥ್‌ಬಾಬು ಹೇಳಿದರು.

ಜಿಲ್ಲಾ ಸರ್ಕಾರಿ ಆಸ್ಪತ್ರೆ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಜಿಲ್ಲಾಸ್ಪತ್ರೆ ಹಾಗೂ ಇನ್ನರ್ ವೀಲ್ಹ್‌ ಕ್ಲಬ್, ರೋಟರಿ ಕ್ಲಬ್, ರೋಟರಿ ಕಾಫಿ ಲ್ಯಾಂಡ್‌ನ ಸಂಯುಕ್ತಾಶ್ರಯದಲ್ಲಿ ಮಂಗಳವಾರ ನಡೆದ’ವಿಶ್ವ ಸ್ತನ್ಯಪಾನ ಸಪ್ತಾಹ’ ಉದ್ಘಾಟಿಸಿ ಮಾತನಾಡಿದರು.

ಸ್ತನ್ಯಪಾನದಿಂದ ಯಾವ ರೋಗಗಳನ್ನು ತಡೆಯಬಹುದು ಹಾಗೂ ಅದರ ಅನುಕೂಲತೆಗಳ ಬಗ್ಗೆ ಈ ಸಪ್ತಾಹದ ಮೂಲಕ ತಾಯಂದಿರಲ್ಲಿ ಜಾಗೃತಿ ಮೂಡಿಸಲಾಗುವುದೆಂದು ಹೇಳಿದರು.ಜಿಲ್ಲಾ ಆಸ್ಪತ್ರೆ ಸೂಪರಿಟೆಂಡೆಂಟ್‌ ಡಾ. ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿ, ಮಗು ಜನಿಸಿದ 6 ತಿಂಗಳು ತಪ್ಪದೇ ಸ್ತನ್ಯಪಾನ ಕಡ್ಡಾಯವಾಗಿ ನೀಡಬೇಕು ಎಂಬುದನ್ನು ತಾಯಂದಿರಲ್ಲಿ ಸಪ್ತಾಹದ ಮೂಲಕ ಅರಿವು ಮೂಡಿಸುವ ಅಗತ್ಯ ಇದೆ ಎಂದರು.

ಇದನ್ನು ಮನಗಂಡ ವಿಶ್ವ ಆರೋಗ್ಯ ಸಂಸ್ಥೆ ಪ್ರತೀ ವರ್ಷ ಈ ಬಗ್ಗೆ ಅರಿವು ಮೂಡಿಸಲು ಸ್ತನ್ಯಪಾನ ಸಪ್ತಾಹ ಆಚರಿಸುತ್ತಿದೆ. 2025 ರಲ್ಲಿ ’ತಾಯಿಯ ಹಾಲು ನೀಡುವುದರಲ್ಲಿ ಹೂಡಿಕೆ ಮಾಡಿದರೆ ಮಕ್ಕಳ ಆರೋಗ್ಯಕರ ಭವಿಷ್ಯಕ್ಕಾಗಿ ಹೂಡಿಕೆ ಮಾಡಿದಂತೆ’ ಎಂಬ ಘೋಷವಾಕ್ಯದೊಂದಿಗೆ ಶೇ.50 ರಷ್ಟು ಗುರಿ ತಲುಪಲು ನಿರ್ಧರಿಸಲಾಗಿದೆ ಎಂದು ಹೇಳಿದರು.ಸ್ತನ್ಯಪಾನದಿಂದ ತಾಯಿ ಮತ್ತು ಮಗು ಇಬ್ಬರಿಗೂ ಪ್ರಯೋಜನವಿದೆ. ಚುಚ್ಚುಮದ್ದು ಕೊಡುವುದರಿಂದ ಹಲವಾರು ರೋಗಗಳನ್ನು ತಡೆಗಟ್ಟಲು ಅವಕಾಶವಿರುವಂತೆ ಮಗುವಿಗೆ ರೋಗಗಳು ಬರದಂತೆ ತಡೆಯುವ ಶಕ್ತಿ ಸ್ತನ್ಯಪಾನಕ್ಕಿದೆ ಎಂದು ಹೇಳಿದರು.ಮಗು ಜನಿಸಿದ ಮೊದಲ ತಿಂಗಳಲ್ಲೇ ಮೃತಪಡುವುದು ಮತ್ತು ರೋಗಗಳಿಗೆ ತುತ್ತಾಗುವುದನ್ನು ತಡೆಯಲು ಸ್ತನ್ಯಪಾನ ದಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ತಾಯಂದಿರು ಮಗು ಆರೈಕೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕಾಗಿದೆ ಎಂದು ಕಿವಿಮಾತು ಹೇಳಿದರು.ಸ್ತನ್ಯಪಾನ ಮಾಡುವುದರಿಂದ ಮಹಿಳೆಯರ ಸೌಂದರ್ಯ ಹಾಳಾಗುತ್ತದೆಂಬ ಮೂಡ ನಂಬಿಕೆಯಿಂದ ಹೊರತರುವ ಕೆಲಸವನ್ನು ಈ ಸಪ್ತಾಹದ ಮೂಲಕ ತಾಯಂದಿರಲ್ಲಿ ಜಾಗೃತಿ ಮೂಡಿಸುವುದು ಪ್ರಮುಖ ಉದ್ದೇಶ ಎಂದರು.ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ. ಮಂಜುನಾಥ್ ಮಾತನಾಡಿ, ಮಗು ಜನಿಸಿದ 6 ತಿಂಗಳವರೆಗೆ ಎದೆ ಹಾಲು ನೀಡಿದರೆ ವಾಂತಿ ಭೇದಿ, ನ್ಯುಮೋನಿಯಾ ಮುಂತಾದವುಗಳಿಗೆ ತುತ್ತಾಗುವುದನ್ನು ತಡೆಯಬಹುದಾಗಿದೆ. ಹಾಲುಣಿಸುವ ಬಗ್ಗೆ ತಾಯಿಯಂದಿರಿಗೆ ಆರೋಗ್ಯ ಇಲಾಖೆ ಕಾರ್ಯಕರ್ತರು ಮನವರಿಕೆ ಮಾಡುತ್ತಿದ್ದಾರೆಂದು ಹೇಳಿದರು.ಕಾರ್ಯಕ್ರಮದಲ್ಲಿ ಡಾ. ಭಾರತಿ, ಡಾ. ಶಶಿಕಲಾ, ಶಿವರಾಜ್, ಸ್ತ್ರೀರೋಗ ತಜ್ಞ ಡಾ. ಪುಟ್ಟಪ್ಪ, ಮಕ್ಕಳ ತಜ್ಞರಾದ ಡಾ. ವರದಾ ವಿದ್ಯಾರಾಣಿ, ಡಾ. ಕಲ್ಪನಾ, ನಯನಾ ಸಂತೋಷ್, ನಾಗೇಶ್‌ ಕೆಂಜಿಗೆ ಉಪಸ್ಥಿತರಿದ್ದರು. ಡಿ.ಎನ್.ಒ. ರೇಣುಕ ಸ್ವಾಗತಿಸಿದರು. ಜಲಜಾಕ್ಷಿ ನಿರೂಪಿಸಿದರು. 5 ಕೆಸಿಕೆಎಂ 2ಚಿಕ್ಕಮಗಳೂರು ಜಿಲ್ಲಾ ಸರ್ಕಾರಿ ಆಸ್ಪತ್ರೆ ಸಭಾಂಗಣದಲ್ಲಿ ಮಂಗಳವಾರ ನಡೆದ ’ವಿಶ್ವ ಸ್ತನ್ಯಪಾನ ಸಪ್ತಾಹ’ ವನ್ನು ಡಿಎಚ್‌ಓ ಡಾ. ಅಶ್ವಥ್‌ಬಾಬು ಉದ್ಘಾಟಿಸಿದರು. ಡಾ. ಮಂಜುನಾಥ್‌, ಡಾ. ಚಂದ್ರಶೇಖರ್‌, ಡಾ. ಭಾರತಿ, ಡಾ. ಶಶಿಕಲಾ, ನಾಗೇಶ್‌ ಕೆಂಜಿಗೆ ಇದ್ದರು.