ಅಸಂಘಟಿತರಿಗೆ ಕಾನೂನು ಜಾಗೃತಿ ಮೂಡಿಸುವುದೇ ಕಾರ್ಮಿಕ ದಿನದ ಉದ್ದೇಶ

| Published : May 03 2024, 01:04 AM IST / Updated: May 03 2024, 01:05 AM IST

ಅಸಂಘಟಿತರಿಗೆ ಕಾನೂನು ಜಾಗೃತಿ ಮೂಡಿಸುವುದೇ ಕಾರ್ಮಿಕ ದಿನದ ಉದ್ದೇಶ
Share this Article
  • FB
  • TW
  • Linkdin
  • Email

ಸಾರಾಂಶ

ಕಾರ್ಮಿಕ ದಿನಾಚರಣೆ ಅಂಗವಾಗಿ ಅರವಿಂದ ಗಾರ್ಮೆಂಟ್ಸ್‌ನಲ್ಲಿ ಕಾರ್ಮಿಕರಿಗಾಗಿ ಏರ್ಪಡಿಸಲಾಗಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಗೀತ ಕೆ.ಬಿ. ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಸೌಲಭ್ಯಗಳಿಂದ ವಂಚಿತರಾಗಿರುವ ಅಸಂಘಟಿತ ಕಾರ್ಮಿಕರಿಗೆ ಹಕ್ಕುಗಳ ಕುರಿತು ಕಾನೂನು ಜಾಗೃತಿ ಮೂಡಿಸುವುದು ಕಾರ್ಮಿಕ ದಿನಾಚರಣೆ ಉದ್ದೇಶ ಎಂದು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ಬಿ.ಗೀತಾ ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಕಾರ್ಮಿಕ ಇಲಾಖೆ ಸಹಯೋಗದೊಂದಿಗೆ ಮಾಳಪ್ಪನಹಟ್ಟಿ ರಸ್ತೆಯಲ್ಲಿರುವ ಅರವಿಂದ ಗಾರ್ಮೆಂಟ್ಸ್‌ನಲ್ಲಿ ಕಾರ್ಮಿಕ ದಿನಾಚರಣೆ ಪ್ರಯುಕ್ತ ಕಾರ್ಮಿಕರಿಗಾಗಿ ಗುರುವಾರ ಏರ್ಪಡಿಸಲಾಗಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಮೇರಿಕಾದ ಚಿಕಾಗೋ ನಗರದಲ್ಲಿ 1881ರಲ್ಲಿ ಮೊಟ್ಟ ಮೊದಲ ಬಾರಿಗೆ ಕಾರ್ಮಿಕರು ತಮ್ಮ ನ್ಯಾಯಯುತ ಬೇಡಿಕೆ ಈಡೇರಿಕೆಗಾಗಿ ದೊಡ್ಡ ಚಳುವಳಿ ಆರಂಭಿಸಿದಾಗ ಅನೇಕ ಸಾವು-ನೋವು ಸಂಭವಿಸಿತು. ಅಂದಿನಿಂದ ಪ್ರತಿ ವರ್ಷ ಮೇ 1ರಂದು ಕಾರ್ಮಿಕ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ನಿರ್ಧಿಷ್ಟವಾದ ಸಮಯವಿಲ್ಲದೆ ಹಗಲು-ರಾತ್ರಿ ಕಾರ್ಮಿಕರು ದುಡಿಯಬೇಕಿತ್ತು. ಕೆಲಸಕ್ಕೆ ತಕ್ಕಂತೆ ವೇತನವಿರುತ್ತಿರಲಿಲ್ಲ. ಕಾಲ ಕಾಲಕ್ಕೆ ಸರಿಯಾಗಿ ಸಿಗಬೇಕಾದ ಸೌಲತ್ತುಗಳಿಂದ ಕಾರ್ಮಿಕರು ವಂಚನೆಗೊಳಗಾಗುತ್ತಿದ್ದರು. ವಿಶ್ರಾಂತಿಯಿಲ್ಲದೆ ಕಾರ್ಮಿಕರು ದುಡಿಯಬೇಕಾಗಿತ್ತು. ಹೀಗೆ ಹತ್ತು ಹಲವಾರು ಸಮಸ್ಯೆ ಮುಂದಿಟ್ಟುಕೊಂಡು ಕಾರ್ಮಿಕರು ನಡೆಸಿದ ಬೃಹತ್ ಚಳುವಳಿಯಿಂದಾಗಿ ಅನೇಕ ಕಾನೂನು ಜಾರಿಗೊಳಿಸಲಾಯಿತು. ನಾನಾ ರೀತಿ ತೊಂದರೆ ಸವಾಲು ಎದುರಿಸುತ್ತಿದ್ದ ಕಾರ್ಮಿಕರಿಗೆ ಯವ್ಯಾವ ಕಾನೂನುಗಳಿವೆ ಎನ್ನುವ ಅರಿವು ಮೂಡಿಸುವುದೇ ಕಾರ್ಮಿಕ ದಿನಾಚರಣೆ ಉದ್ದೇಶ ಎಂದರು.

ಯಾವುದೇ ಒಂದು ಸುಂದರ ಕಟ್ಟಡ ನೋಡಿ ಸಂತೋಷಪಡುವವರು, ಕಟ್ಟಡ ನಿರ್ಮಾಣದ ಹಿಂದಿರುವ ಕಾರ್ಮಿಕರ ಪರಿಶ್ರಮ ಗುರುತಿಸುವುದಿಲ್ಲ. ಎಲ್ಲಿ ಕಾರ್ಮಿಕರ ಶ್ರಮ ಗೌರವಿಸಲಾಗುತ್ತದೋ ಅಂತಹ ಕಡೆ ಅಭಿವೃದ್ಧಿ ಕಾಣಬಹುದು. ಯಾವುದೇ ಒಂದು ಕಟ್ಟಡ ಸುಭದ್ರವಾಗಿದ್ದು, ಬಹಳ ದಿನಗಳ ಕಾಲ ಬಾಳಿಕೆ ಬರಬೇಕಾದರೆ ಅಡಿಪಾಯ ಮುಖ್ಯ. ಹಾಗಾಗಿ ಕಟ್ಟಡ ಕಾರ್ಮಿಕರ ಕೆಲಸಕ್ಕೆ ಮಹತ್ವವಿದೆ. ಕಾರ್ಮಿಕರು ಕೆಲಸದ ಜೊತೆ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ಕೊಟ್ಟು ಸುವ್ಯವಸ್ಥಿತ ಜೀವನ ನಡೆಸುವಂತೆ ಶ್ರೀಮತಿ ಬಿ.ಗೀತ ಕರೆ ನೀಡಿದರು.

ಕಾರ್ಮಿಕ ಅಧಿಕಾರಿ ಬಿ.ಜಿ.ಚಂದ್ರಶೇಖರಯ್ಯ ಮಾತನಾಡಿ, ಕಟ್ಟಡ ಕಾರ್ಮಿಕರ ಸೌಲಭ್ಯಗಳನ್ನು ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುವವರು ತೆಗೆದುಕೊಳ್ಳಬಾರದು. ಒಂದು ವೇಳೆ ಕಾರ್ಡ್ ತೆಗೆದುಕೊಂಡಿದ್ದರೆ ಇಲಾಖೆಗೆ ಹಿಂದಿರುಗಿಸಿ. ಇಲ್ಲವಾದಲ್ಲಿ ಎಫ್ಐಆರ್ ದಾಖಲಿಸಲಾಗುವುದೆಂದು ಎಚ್ಚರಿಸಿದರು.

1996ರಲ್ಲಿ ಕಾಯಿದೆ ಬಂದ ನಂತರ ಕಾರ್ಮಿಕರಿಗೆ ಅನೇಕ ರೀತಿಯ ಸೌಲತ್ತು ನೀಡಲಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿ ಕಾರ್ಮಿರಿಗೆ ಫುಡ್ ಕಿಟ್ ಸೇರಿ ನಾನಾ ರೀತಿ ಸಲಕರಣೆ ನೀಡಲಾಯಿತು. ಕಾರ್ಮಿಕರ ಮಾಹಿತಿ ಪಡೆದುಕೊಳ್ಳುವುದಕ್ಕಾಗಿ ಸರ್ಕಾರ ಈ ಶ್ರಮ್ ಯೋಜನೆ ತಂದಾಗ 38 ಲಕ್ಷ ಅಸಂಘಟಿತ ಕಾರ್ಮಿಕರು ನೋಂದಾಯಿಸಿಕೊಂಡಿದ್ದಾರೆ. 2 ಲಕ್ಷ ರು.ಗಳ ವಿಮೆ ಸೌಲಭ್ಯವಿದೆ. ನೀವು ಕೆಲಸ ಮಾಡುವ ಜಾಗದಲ್ಲಿ ಏನಾದರೂ ಲೈಂಗಿಕ ಕಿರುಕುಳವಾದರೆ ಸಂಬಂಧಪಟ್ಟವರಲ್ಲಿ ಶೇರ್ ಮಾಡಿಕೊಂಡು ರಕ್ಷಣೆ ಪಡೆದುಕೊಳ್ಳಿ. ಕಾರ್ಮಿಕ ಇಲಾಖೆಯಿಂದ ಅನೇಕ ಸೌಲಭ್ಯಗಳಿವೆ. ಕಾಯಿದೆ ಹೇಳಿದ್ದೆಲ್ಲವನ್ನು ಕೇಳಿ. ಆದರೆ ಯಾವುದು ಸರಿ ತಪ್ಪು ಎನ್ನುವ ನಿರ್ಧಾರ ತೆಗೆದುಕೊಳ್ಳುವುದು ನಿಮ್ಮ ಕೈಯಲ್ಲಿದೆ ಎಂದು ತಿಳಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ಕಾರ್ಮಿಕರ ಹಕ್ಕುಗಳ ಕುರಿತು ಮಾತನಾಡಿದರು.

ವಕೀಲರ ಸಂಘದ ಉಪಾಧ್ಯಕ್ಷ ಬಿ.ಎಂ.ಅನಿಲ್‍ಕುಮಾರ್, ಪ್ರಧಾನ ಕಾರ್ಯದರ್ಶಿ ಆರ್.ಗಂಗಾಧರ್, ಕಾರ್ಮಿಕ ನಿರೀಕ್ಷಕ ಡಿ.ರಾಜಣ್ಣ, ಅರವಿಂದ ಗಾರ್ಮೆಂಟ್ಸ್‍ನ ಚೀಫ್ ಮ್ಯಾನೇಜರ್ ಆರ್.ಮುತ್ತುಕುಮಾರ್ ವೇದಿಕೆಯಲ್ಲಿದ್ದರು.