ಸಾರಾಂಶ
ಯಲ್ಲಾಪುರ: ಜೀವನದಲ್ಲಿ ಕಾರಣಾಂತರಗಳಿಂದ ನೊಂದು, ಬೆಂದು ತಮ್ಮ ಸಂಸಾರದ ಸುಂದರಾನುಭೂತಿಯನ್ನು ಕಳೆದುಕೊಂಡು ಪರಿತಪಿಸುತ್ತಿರುವ ವ್ಯಕ್ತಿಗಳಿಗೆ ಮನಃಪರಿವರ್ತನೆಯ ಮೂಲಕ ಶಕ್ತಿ ತುಂಬಿ, ಹೊಸಜೀವನ ಕಲ್ಪಿಸುವುದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹತ್ವಾಕಾಂಕ್ಷಿ ಕಾರ್ಯಕ್ರಮವಾದ ಮದ್ಯವರ್ಜನ ಶಿಬಿರದ ಉದ್ದೇಶವಾಗಿದೆ ಎಂದು ಎಸ್‌ಕೆಡಿಆರ್‌ಡಿಪಿ ಶಿರಸಿ ಜಿಲ್ಲೆಯ ನಿರ್ದೇಶಕ ಎ. ಬಾಬು ನಾಯ್ಕ ತಿಳಿಸಿದರು.ತಾಲೂಕಿನ ಮಂಚಿಕೇರಿಯ ರಾ.ರಾ. ರಂಗಮಂದಿರದಲ್ಲಿ ವಿವಿಧ ಸಂಘ- ಸಂಸ್ಥೆಗಳು ಹಾಗೂ ದಾನಿಗಳ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಒಂದು ವಾರದ ೧೮೮೦ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಕಾಳಿಂಗರಾಜ್ ಮಾತನಾಡಿ, ತಪ್ಪು ಮಾಡಿದ ವ್ಯಕ್ತಿಗಳಿಗೆ ಅರಿವು ಮೂಡಿಸುವ ಮೂಲಕ ನೂತನ ಮಾರ್ಗದರ್ಶನ ಮಾಡುವುದು ಶಿಬಿರದ ಪ್ರಮುಖ ಗುರಿಯಾಗಿದೆ ಎಂದರು. ಜಿಲ್ಲಾ ಜನಜಾಗೃತಿ ವೇದಿಕೆಯ ನಿರ್ದೇಶಕ ಡಿ.ಎನ್. ಗಾಂವ್ಕರ ಮಾತನಾಡಿ, ನರಕ ಸದೃಶವಾಗಿರುವ ವ್ಯಕ್ತಿಗಳ ಬದುಕನ್ನು ಹಸನುಗೊಳಿಸುವ ಮೂಲಕ ಹೊಸ ಬದುಕು ನೀಡುವ ಉದ್ದೇಶದಿಂದ ಧ.ಗ್ರಾ.ಯೋ. ಇಂತಹ ಉಪಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಶಿಬಿರದಲ್ಲಿ ಪಾಲ್ಗೊಂಡ ವ್ಯಕ್ತಿಗಳಿಗೆ ಶಿಬಿರದಿಂದ ಉಪಯೋಗವಾದರೆ ಕಾರ್ಯಕ್ರಮ ಸಾರ್ಥಕತೆ ಪಡೆಯಲು ಸಾಧು ಎಂದರು.ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿಯ ಗೌರವಾಧ್ಯಕ್ಷ ರಾಘವೇಂದ್ರ ಭಟ್ಟ ಹಾಸಣಗಿ ಮಾತನಾಡಿ, ಇಂತಹ ಶಿಬಿರಗಳು ವ್ಯಕ್ತಿಗಳಿಗೆ ವ್ಯಸನ ಮುಕ್ತರನ್ನಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಮಾ ಹೆಗಡೆ ಕಬ್ಬಿನಗದ್ದೆ ಮಾತನಾಡಿ, ಹಲವರ ನೆರವಿನಿಂದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಧಾನ ಆಶ್ರಯದಲ್ಲಿ ಹಮ್ಮಿಕೊಂಡ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ತಿಳಿಸಿದರು. ಜಿಲ್ಲಾ ಜನಜಾಗೃತಿ ವೇದಿಕೆಯ ಉಪಾಧ್ಯಕ್ಷೆ ಗೌರಿ ನಾಯ್ಕ, ಹಿತ್ಲಳ್ಳಿ ವ್ಯ.ಸೇ.ಸ. ಸಂಘದ ಅಧ್ಯಕ್ಷ ಜಿ.ವಿ. ಹೆಗಡೆ, ಉಮ್ಮಚಗಿ ಗ್ರಾಪಂ ಅಧ್ಯಕ್ಷ ಕುಪ್ಪಯ್ಯ ಪೂಜಾರಿ, ಕಾರ್ಯಕ್ರಮವನ್ನು ಉದ್ಘಾಟಿಸಿದ ಕಂಪ್ಲಿ ಗ್ರಾಪಂ ಅಧ್ಯಕ್ಷೆ ರೇಣುಕಾ ಭೋವಿವಡ್ಡರ್, ಅಧ್ಯಕ್ಷತೆ ವಹಿಸಿದ್ದ ಹಾಸಣಗಿ ಗ್ರಾಪಂ ಅಧ್ಯಕ್ಷೆ ವಿನೋದಾ ಬಿಲ್ಲವ ಮಾತನಾಡಿದರು.ಭವ್ಯಾ ಶಿರನಾಲಾ ಅವರ ಪ್ರಾರ್ಥನೆಯೊಂದಿಗೆ ಶಿಬಿರ ಆರಂಭವಾಯಿತು. ಧ.ಗ್ರಾ. ಯೋಜನಾಧಿಕಾರಿ ಹನುಮಂತ ನಾಯ್ಕ ಸ್ವಾಗತಿಸಿದರು. ಜಿಲ್ಲಾ ಜನಜಾಗೃತಿ ವೇದಿಕೆಯ ಯೋಜನಾಧಿಕಾರಿ ಗಣೇಶ ಆಚಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಧ.ಗ್ರಾ.ಯೋ. ಮೇಲ್ವಿಚಾರಕ ಯಲ್ಲಪ್ಪ ಹೊಸಮನಿ ನಿರ್ವಹಿಸಿದರು. ಇಡಗುಂದಿ ಸೇವಾ ಪ್ರತಿನಿಧಿ ರಾಜೀವಿ ನಾಯ್ಕ ವಂದಿಸಿದರು. ಗ್ರಾಪಂ ಸದಸ್ಯರಾದ ಸದಾಶಿವ ಚಿಕ್ಕೊತ್ತಿ, ಪವನಕುಮಾರ ಕೇಸರಕರ, ರಘುಪತಿ ಹೆಗಡೆ, ಎಂ.ಕೆ. ಭಟ್ಟ ಯಡಳ್ಳಿ ಉಪಸ್ಥಿತರಿದ್ದರು.