ಸಾರಾಂಶ
ಪಕ್ಷದ ಅಧ್ಯಕ್ಷರಾಗಿರುವ ಹೆಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವರಾದ ನಂತರ ರಾಜ್ಯದಲ್ಲಿ ಜೆಡಿಎಸ್ ಸಂಘಟನೆ ಸೊರಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪಕ್ಷವನ್ನು ಬೇರು ಮಟ್ಟದಿಂದ ಸಂಘಟನೆ ಮಾಡಲು ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಇದ್ದಾರೆಂಬ ಸಂದೇಶ ಸಾರುವ ಉದ್ದೇಶದಿಂದ ಜನರಿಂದ ಜನತಾದಳ ಯಾತ್ರೆ ಹಮ್ಮಿಕೊಳ್ಳಲಾಗಿದೆ
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ರಾಜ್ಯಾದ್ಯಂತ ಜೆಡಿಎಸ್ ಪಕ್ಷವನ್ನು ಪರಿಣಾಮಕಾರಿಯಾಗಿ ಸಂಘಟನೆ ಮಾಡಿ ಮತ್ತೆ ಅಧಿಕಾರಕ್ಕೆ ತರುವ ಸಲುವಾಗಿ ಪಕ್ಷದ ಯುವ ಘಟಕದ ರಾಜ್ಯಧ್ಯಕ್ಷರಾಗಿರುವ ನಿಖಿಲ್ ಕುಮಾರಸ್ವಾಮಿ ಹಮ್ಮಿಕೊಂಡಿರುವ ‘ಜನರೊಂದಿಗೆ ಜನತಾದಳ’ ಯಾತ್ರೆ ಜು.೧೦ರಂದು ತಾಲೂಕಿಗೆ ಆಗಮಿಸಲಿದೆ ಎಂದು ಸಂಸದ ಎಂ.ಮಲ್ಲೇಶಬಾಬು ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪಕ್ಷದ ಮುಖಂಡರ ಪೂರ್ವಭಾವಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪಕ್ಷದ ಅಧ್ಯಕ್ಷರಾಗಿರುವ ಹೆಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವರಾದ ನಂತರ ರಾಜ್ಯದಲ್ಲಿ ಜೆಡಿಎಸ್ ಸಂಘಟನೆ ಸೊರಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪಕ್ಷವನ್ನು ಬೇರು ಮಟ್ಟದಿಂದ ಸಂಘಟನೆ ಮಾಡಲು ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಇದ್ದಾರೆಂಬ ಸಂದೇಶ ಸಾರುವ ಉದ್ದೇಶದಿಂದ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.10ರಂದು ಕೋಲಾರಕ್ಕೆ ಯಾತ್ರೆ
ಜನತಾದಳ ಯಾತ್ರೆ ಈಗಾಗಲೇ ಕೆಲವು ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಸಂಚರಿಸಿದ್ದು ಜು.೧೦ರಂದು ಕೋಲಾರಕ್ಕೆ ಕಾಲಿಡಲಿದೆ. ಅಂದು ಮೊದಲು ಪಟ್ಟಣಕ್ಕೆ ಬಂದು ಎಸ್.ಎನ್.ರೆಸಾರ್ಟ್‌ನಿಂದ ಬೈಕ್‌ಗಳ ಬೃಹತ್ ರ‍್ಯಾಲಿ ಮೂಲಕ ದೇಶಿಹಳ್ಳಿಯಲ್ಲಿರುವ ಆರ್‌ಆರ್ ಕಲ್ಯಾಣ ಮಂಟಪದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸುವರು ಎಂದು ತಿಳಿಸಿದರು.ಅಂದು ಪಕ್ಷದ ಸದಸ್ಯತ್ವಕ್ಕೂ ಚಾಲನೆ ನೀಡಿ ಕಾರ್ಯಕರ್ತರೊಂದಿಗೆ ಪಕ್ಷ ಸಂಘಟನೆ ಬಗ್ಗೆ ಸಮಾಲೋಚನೆ ನಡೆಸುವರು, ಹಾಗೆಯೇ ವರ್ಷದ ಕೊನೆಯಲ್ಲಿ ಬರುವಂತಹ ಗ್ರಾಪಂ ಮತ್ತು ಪುರಸಭೆ ಚುನಾವಣೆಗೆ ಹಾಗೂ ಇದಕ್ಕೂ ಮೊದಲು ಜಿಪಂ,ಹಾಗೂ ತಾಪಂ ಚುನಾವಣೆ ಬಂದರೆ ಕಾರ್ಯಕರ್ತರನ್ನು ಮಾನಸಿಕವಾಗಿ ಸಜ್ಜುಗೊಳಿಸುವ ನಿಟ್ಟಿನಲ್ಲಿ ಈ ಜನರೊಂದಿಗೆ ಜನತಾದಳ ಯಾತ್ರೆ ಪೂರಕವಾಗಿದೆ ಎದು ಹೇಳಿದರು.ಜಿಲ್ಲಾ, ತಾಲೂಕು ಅಧ್ಯಕ್ಷರ ನೇಮಕ
ಪಕ್ಷದ ತಾಲೂಕು ಘಟಕದ ಅಧ್ಯಕ್ಷ ಸ್ಥಾನ ಖಾಲಿಯಿದ್ದು ಯಾವಾಗ ತುಂಬುವಿರಿ ಎಂಬ ಪ್ರಶ್ನೆಗೆ ಪಕ್ಷದ ಸದಸ್ಯತ್ವ ಅಭಿಯಾನ ಜು.೧೦ರಂದು ಆರಂಭಿಸಲಾಗುವುದು ನಂತರ ಹಂತ ಹಂತವಾಗಿ ತಾಲೂಕು, ಜಿಲ್ಲಾ ಘಟಕ ಹಾಗೂ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಲಾಗುವುದು ಎಂದರು. ಬಿಜೆಪಿ ಪಕ್ಷದೊಂದಿಗೆ ಮೈತ್ರಿಯಾಗಿದೆ ಎಂದಾಕ್ಷಣ ಪಕ್ಷ ಸಂಘಟನೆ ಮಾಡದಿರಲು ಅಸಾಧ್ಯ, ಚುನಾವಣೆಗಳು ಬಂದಾಗ ಮೈತ್ರಿ ಧರ್ಮಪಾಲನೆಯಾಗುತ್ತದೆ ಎಂದು ಸ್ಪಷ್ಟಪಡಿಸಿದರು.ಇದು ಪಕ್ಷ ಸಂಘಟನೆ ಯಾತ್ರೆಯಾಗಿರುವುದರಿಂದ ಬಿಜೆಪಿ ಮುಖಂಡರನ್ನು ಯಾತ್ರೆಗೆ ಆಹ್ವಾನಿಸುವುದು ಬಿಡುವುದು ರಾಜ್ಯ ನಾಯಕರಿಗೆ ಬಿಟ್ಟಿದ್ದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಈ ವೇಳೆ ಪುರಸಭೆ ಸದಸ್ಯ ವೈ.ಸುನೀಲ್, ಬೂ ಬ್ಯಾಂಕ್ ನಿರ್ದೇಶಕ ಬಾಲಕೃಷ್ಣ,ಮುಖಂಡರಾದ ಹನುಮಂತಯ್ಯ, ಆರ್.ಸತೀಶ್, ಮುನಿಯಪ್ಪ, ದೇವರಾಜ್, ಶಿವಕುಮಾರ್, ಚಂದ್ರಪ್ಪ, ಕೀಲುಕೊಪ್ಪ ಯಲ್ಲಪ್ಪ, ರಾಜು ಇತರರು ಇದ್ದರು.