ಸಾರಾಂಶ
ಮತಾಂತರ ಆಗುತ್ತಿರುವವರಿಗೆ ನಮ್ಮ ಸಮಾಜ ಶ್ರೇಷ್ಠ ಎಂದು ಹೇಳುತ್ತಿದ್ದೇವೆ ಎಂದು ಸಿದ್ಧಲಿಂಗೇಶ್ವರ ಮಹಾಸ್ವಾಮೀಜಿಗಳು ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಅಖಿಲ ಕರ್ನಾಟಕ ಬಂಜಾರಾ ಧರ್ಮ ಗುರು ಮಹಾಸಭಾ ನೇತೃತ್ವದಲ್ಲಿ ಸಂತರ ನಡೆ ತಾಂಡಾ ಕಡೆ ಯಾತ್ರೆ ವಿಜಯಪುರ ತಾಲೂಕು ತಲುಪಿದೆ. ತಾಲೂಕಿನ ವಿವಿಧ ತಾಂಡಾಗಳಲ್ಲಿ ಯಾತ್ರೆ ಪ್ರಾರಂಭಿಸಲಾಗಿದೆ ಎಂದು ಲಿಂಗಸೂರಿನ ಸಿದ್ಧಲಿಂಗೇಶ್ವರ ಮಹಾಸ್ವಾಮಿಜಿಗಳು ಹೇಳಿದರು.ನಗರದ ಬಂಜಾರಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಯಾತ್ರೆ ಸದ್ಯ ನಿಡಗುಂದಿ, ಕೊಲ್ಹಾರ, ಬಸವನಬಾಗೇವಾಡಿ ಮುಗಿಸಿಕೊಂಡು ಇದೀಗ ವಿಜಯಪುರ ನಗರಕ್ಕೆ ಬಂದಿದೆ ಎಂದರು.
ಈ ಯಾತ್ರೆಯ ಮುಖ್ಯ ಉದ್ದೇಶ ತಾಂಡಾದ ಮುಗ್ಧ ಜನರು ಅವರಲ್ಲಿರುವ ದುಶ್ಚಟಗಳನ್ನು ಮೊದಲು ಬಿಡಬೇಕು. ಕುಡಿತ, ಜೂಜಾಟ ಸೇರಿದಂತೆ ದುಶ್ಚಟಗಳಿಂದ ಅವರು ದೂರ ಇರಬೇಕು ಅನ್ನೋದು ಬಂಜಾರ ಮಹಾಸಭಾ ಆಶಯವಾಗಿದೆ. ಇನ್ನು ಬಂಜಾರ ಸಮಾಜದ ಮುಗ್ಧ ಜನರು ಏನು ಮತಾಂತರ ಆಗುತ್ತಿದ್ದಾರೆ, ಅವರಿಗೆ ನಿಮ್ಮ ಸಮಾಜ ಶ್ರೆಷ್ಠವಾಗಿದೆ. ಸೇವಾಲಾಲರು ಸಮಾಜಕ್ಕೆ ವಿಶೇಷ ಕೊಡುಗೆ, ಸಂದೇಶ ಕೊಟ್ಟಿದ್ದಾರೆ ಎಂದು ತಿಳಿವಳಿಕೆ ಕೊಡುತ್ತಿದ್ದೇವೆ ಎಂದು ಯಾತ್ರೆ ಉದ್ದೇಶ ತೆರೆದಿಟ್ಟರು.ಸಣ್ಣವರು, ದೊಡ್ಡವರು, ಮಹಿಳೆಯರು, ಯುವಕರು ಯಾವುದೆ ಬೇಧ ಭಾವ ಇಲ್ಲದೆ ಎಲ್ಲರನ್ನು ಸ್ವಾಗತಿಸುತ್ತಿದ್ದಾರೆ. ಇನ್ನು ತಾಂಡಾಗಳಲ್ಲಿ ಅದ್ಧೂರಿ ಕಾರ್ಯಕ್ರಮ ನಡೆಯುತ್ತಿದ್ದು, ಬಂಜಾರ ಸಮಾಜದ ಜನರು ಬಹಳ ಖುಷಿ ಆಗುತ್ತಿದ್ದಾರೆ. ನಮ್ಮ ಮಕ್ಕಳನ್ನು ಶಾಲೆಗೆ ಕಳಿಸುತ್ತೇವೆ. ಮತಾಂತರ ಆಗಲ್ಲ ಅಂತ ಭರವಸೆ ನಿಡಿದ್ದಾರೆ. ಅವರ ಪ್ರೀತಿಗೆ ನಾವು ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆ ಎಂದು ವಿವರಿಸಿದರು.
ಇನ್ನು ರಾಜಕೀಯ ಮುಖಂಡರು ಪಕ್ಷಾತೀತವಾಗಿ ಕೆಲಸ ಮಾಡುತ್ತಿದ್ದಾರೆ. ಬಂಜಾರ ಸಮಾಜದ ನೇಮ, ನಿತ್ಯ, ಪದ್ಧತಿ ಬಹಳ ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ. ರಾತ್ರಿ 11 ಗಂಟೆಯಾದ್ರೂ ಪ್ರೀತಿಯಿಂದ ಸ್ವಾಗತ ಕೋರುತ್ತಿದ್ದಾರೆ. ಈ ಯಾತ್ರೆ ಇದೆ ರೀತಿ ಮುಂದೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಮುಂದುವರೆಯಲಿದೆ ಎಂದರು.ಎಲ್ಲೋ 100ಕ್ಕೆ ಒಬ್ಬರು ಮಾತ್ರ ಮತಾಂತರ ಆಗಿದ್ದಾರೆ. ಅವರಿಗೆಲ್ಲ ತಿಳಿ ಹೇಳುವ ಕೆಲಸ ಮಾಡುತ್ತಿದ್ದಾರೆ. ಸಮಾಜದ ಸಂತರು ಶ್ರಾವಣದಲ್ಲಿ ತಮ್ಮ ಮಠಗಳನ್ನು ಬಿಟ್ಟು ಈ ಕೆಲಸ ಮಾಡುತ್ತಿದ್ದಾರೆ. ಅವರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.ಬಂಜಾರ ಸಮಾಜದ ಮಹರಾಜರಾದ ಮುರಾರಿ ಮಹಾರಾಜರು, ಭೀಮಶಿ ಮಹಾರಾಜರು, ಗೋಪಾಲ ಮಹರಾಜರು, ನಾಗುವ ಮಹಾರಾಜರು, ರಾಷ್ಟ್ರೀಯ ಬಂಜಾರ ಪರಿಷದ ರಾಜ್ಯಾಧ್ಯಕ್ಷ ಪ್ರಕಾಶ ಚವ್ಹಾಣ, ಧನಸಿಂಗ್ ಮಹರಾಜರು ಸೇರಿದಂತೆ ಮುಂತಾದವರು ಇದ್ದರು.