ಸಾರಾಂಶ
ಶಿರಹಟ್ಟಿ: ಅಧಿಕಾರಿಗಳು ಪ್ರೋಟೋಕಾಲ್ ಸಂಪ್ರದಾಯ ಕಟ್ಟುನಿಟ್ಟಾಗಿ ಪಾಲಿಸಬೇಕು. ಸಕಾರಾತ್ಮಕವಾಗಿ ಎಲ್ಲರನ್ನು ಗೌರವಿಸುವಂತಹ ಕೆಲಸ ಆಗಬೇಕು. ಅಭಿವೃದ್ಧಿಯಲ್ಲಿ ರಾಜಕೀಯ ಬೇಡ. ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ಸಮಗ್ರ ಅಭಿವೃದ್ಧಿಗೆ ನಾವೆಲ್ಲರು ಬದ್ಧರಾಗಬೇಕು ಎಂದು ಶಾಸಕ ಡಾ.ಚಂದ್ರು ಲಮಾಣಿ ಹೇಳಿದರು.
ಬುಧವಾರ ತಾಲೂಕಿನ ಬೆಳ್ಳಟ್ಟಿ ಗ್ರಾಮದ ಹೊರವಲಯದಲ್ಲಿ ₹೭೧.೯೦ ಲಕ್ಷಗಳ ವೆಚ್ಚದ ಎಸ್‌ಬಿಎಂ ಯೋಜನೆಯಡಿಯಲ್ಲಿ ೩ಕೆಎಲ್‌ಡಿ ಫೀಕಲ್ ಮಲ ಸಂಸ್ಕರಣಾ ವಿಸರ್ಜನಾ ಘಟಕ ನಿರ್ಮಾಣದ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.ಚುನಾವಣೆ ಬಂದಾಗ ಮಾತ್ರ ರಾಜಕೀಯ ಮಾಡಬೇಕು. ಚುನಾವಣೆ ಮುಗಿದ ನಂತರ ಅದಕ್ಕೆ ಪೂರ್ಣವಿರಾಮ ನೀಡಬೇಕು. ಅದನ್ನು ಹೊರತುಪಡಿಸಿದರೆ ಮಿಕ್ಕೆಲ್ಲ ಸಮಯ ಅಭಿವೃದ್ಧಿಗೆ ಬಳಸೋಣ ಎಂದರು.
ರಾಜಕೀಯ ಅಥವಾ ಅಧಿಕಾರ ಶಾಶ್ವತವಲ್ಲ. ಅಧಿಕಾರದಲ್ಲಿದ್ದಾಗ ನಾವು ಮಾಡಿದ ಕಾರ್ಯಗಳು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತವೆ. ಗುತ್ತಿಗೆದಾರರು ಕೈಗೆತ್ತಿಕೊಳ್ಳುತ್ತಿರುವ ಮೂಲಭೂತ ಸೌಕರ್ಯಗಳ ಕಾಮಗಾರಿಯ ಗುಣಮಟ್ಟ ಉತ್ಕೃಷ್ಟವಾಗಿರುವಂತೆ ಗ್ರಾಪಂ ಸದಸ್ಯರು ಮತ್ತು ಊರಿನ ಪ್ರಮುಖರು ಗಮನಹರಿಸಬೇಕು ಎಂದು ಹೇಳಿದರು.ಶಿರಹಟ್ಟಿ ತಾಲೂಕಿನಲ್ಲಿ ಬೆಳ್ಳಟ್ಟಿ ಅತಿ ವೇಗವಾಗಿ ಬೆಳೆಯುತ್ತಿರುವ ಗ್ರಾಮವಾಗಿದ್ದು, ಗ್ರಾಮಕ್ಕೆ ಅಗತ್ಯವಾದ ಎಲ್ಲ ಮೂಲಭೂತ ಸೌಕರ್ಯ ಈಡೇರಿಕೆಗೆ ಸದಾ ಬದ್ದನಾಗಿದ್ದೇನೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಹಾಗೂ ಪ್ರೋತ್ಸಾಹ ಅಗತ್ಯವಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿಯೇ ಹಿಂದುಳಿದ ತಾಲೂಕು ಪ್ರದೇಶ ಎಂಬ ಹಣೆಪಟ್ಟಿ ಹೊಂದಿರುವ ಈ ಕ್ಷೇತ್ರದ ಅಭಿವೃದ್ಧಿಗೆ ಇನ್ನು ಹೆಚ್ಚಿನ ಅನುದಾನ ಬಿಡುಗಡೆ ಆಗಬೇಕಿದೆ. ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದಾಗಿ ತಿಳಿಸಿದರು. ಸಮಗ್ರ ತಾಲೂಕು ಅಭಿವೃದ್ಧಿಗೆ ಬಿಡುಗಡೆಯಾಗುತ್ತಿರುವ ಅನುದಾನ ಸಮರ್ಪಕವಾಗಿ ಬಳಕೆ ಮಾಡಿಕೊಂಡರೆ ತ್ವರಿತಗತಿಯಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ತಿಳಿಸಿದರು.ಗ್ರಾಪಂ ಸದಸ್ಯ ತಿಮ್ಮರಡ್ಡಿ ಮರಡ್ಡಿ ಮಾತನಾಡಿ, ಅತಿ ವೇಗವಾಗಿ ಬೆಳೆಯುತ್ತಿರುವ ಹಾಗೂ ವಾಣಿಜ್ಯ ಕೇಂದ್ರವಾಗಿ ಪ್ರಗತಿ ಹೊಂದುತ್ತಿರುವ ಬೆಳ್ಳಟ್ಟಿ ಗ್ರಾಮದ ಮೂಲಭೂತ ಸೌಕರ್ಯವಾದ ಒಳಚರಂಡಿ ವ್ಯವಸ್ಥೆಗೆ ಅಂದಾಜು ₹೩ ಕೋಟಿಗಳ ಅಗತ್ಯವಿದೆ. ಈಗಾಗಲೇ ಇದಕ್ಕೆ ಸಂಬಂಧಿಸಿದ ಅಗತ್ಯ ದಾಖಲೆ ಹಾಗೂ ಮನವಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ ಪಾಟೀಲ ಹಾಗೂ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಈ ವಿಷಯದಲ್ಲಿ ನೀವು ವಿಶೇಷ ಆಸಕ್ತಿ ವಹಿಸಿ ಸಚಿವರ ಗಮನಕ್ಕೆ ತಂದು ಅನುದಾನ ಮಂಜೂರು ಮಾಡಲು ಸಹಕರಿಸಬೇಕು ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷ ರಮೇಶ ನಿರ್ವಾಣಶೆಟ್ಟರ, ತಾಪಂ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಯುವ ಮುಖಂಡ ಜಾನು ಲಮಾಣಿ, ಗ್ರಾಪಂ ಸದಸ್ಯರಾದ ಮೋಹನ ಗುತ್ತೆಮ್ಮನವರ, ಶಿವನಗೌಡ ಪಾಟೀಲ, ಮಲ್ಲಯ್ಯ ಶಿಲವಂತಮಠ, ಮುಂಡರಗಿ ಬಿಜೆಪಿ ಮಂಡಳ ಅಧ್ಯಕ್ಷ ಹೇಮಗಿರೀಶ ಹಾವಿನಾಳ, ಇಲಾಖೆಯ ಎಇಇ ಮಲ್ಲಿಕಾರ್ಜುನ ಪಾಟೀಲ, ಮಹೇಶ ಕುಲಕರ್ಣಿ, ವೆಂಕಟೇಶ ವಡ್ಡರ, ರಾಘು ಗುತ್ತೆಮ್ಮನವರ, ರಾಘು ಬಡಿಗೇರ ಮತ್ತಿತರರು ಉಪಸ್ಥಿತರಿದ್ದರು.