ಕೊಪ್ಪಳ: ಸಚಿವ ಸ್ಥಾನ ತಪ್ಪಿದ್ದಕ್ಕೆ ನಾನು ರಾಜೀನಾಮೆ ನೀಡುತ್ತೇನೆ ಎಂದು ಹೇಳಿಯೇ ಇಲ್ಲ. ಅದೆಲ್ಲವೂ ಮಾಧ್ಯಮಗಳ ಸೃಷ್ಟಿ. ನಾನು ಪಕ್ಷದ ಶಿಸ್ತಿನ ಸಿಪಾಯಿ ಆಗಿದ್ದು, ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದ್ದಾರೆ.

ಕೊಪ್ಪಳದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಮುನಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಅವರೊಂದಿಗೆ ಮಾತಿನ ಚಕಮಕಿಯೂ ಆಗಿಲ್ಲ. ಅವರು ನನ್ನ ರಾಜಕೀಯ ಗುರುಗಳು, ನಮ್ಮ ಪಾಲಿನ ದೇವರು. ಅವರ ಜತೆಗೆ ಮುನಿಸಿಕೊಂಡಿದ್ದಾರೆ ಎನ್ನುವುದೆಲ್ಲ ಸುಳ್ಳು ಎಂದರು.

ಅಭಿವೃದ್ಧಿ ಕಾಮಗಾರಿಗಳ ಅಡಿಗಲ್ಲು ಸಮಾರಂಭದ ಪ್ಲೆಕ್ಸ್‌ನಲ್ಲಿ ಸಿದ್ದರಾಮಯ್ಯ ಅವರ ಫೋಟೋ ಕೈಬಿಟ್ಟು ಹೋಗಿದ್ದರೆ ಅದು ನಮ್ಮ ಕಾರ್ಯಕರ್ತರಿಂದ ಆಗಿರುವ ತಪ್ಪಾಗಿದೆ ಎಂದರು.

ಗೆದ್ದಿರುವ ಎಲ್ಲರೂ ಸಚಿವರಾಗಲು ಅರ್ಹರು. ಹಾಗೆ ನೋಡಿದರೆ 70ಕ್ಕೂ ಹೆಚ್ಚು ಶಾಸಕರಿಗೆ ಸಚಿವ ಸ್ಥಾನ ನೀಡಬೇಕಾಗುತ್ತದೆ. ಅದರಲ್ಲಿ 50ಕ್ಕೂ ಹೆಚ್ಚು ಶಾಸಕರು ನನ್ನಂತೆ ಮೂರು ಬಾರಿಗಿಂತ ಹೆಚ್ಚು ಬಾರಿ ಗೆಲವು ಸಾಧಿಸಿದ್ದಾರೆ. ಎಲ್ಲರಿಗೂ ಸಚಿವ ಸ್ಥಾನ ನೀಡಲು ಸಾಧ್ಯವಿಲ್ಲ. ಸಚಿವ ಸ್ಥಾನ ಸಿಗದಿದ್ದಕ್ಕೆ ನೋವಾಗಿದೆಯೇ ಹೊರತು ಅದು ಪಕ್ಷದ ವಿರುದ್ಧದ ಅಸಮಾಧಾನವಲ್ಲ. ನನಗೆ ಸೂಕ್ತ ಸಮಯದಲ್ಲಿ ಪಕ್ಷ ಸೂಕ್ತ ಸ್ಥಾನಮಾನ ನೀಡಿಯೇ ನೀಡುತ್ತದೆ ಎನ್ನುವ ವಿಶ್ವಾಸವಿದೆ. ಹೀಗಾಗಿ, ನಾನು ರಾಜೀನಾಮೆ ನೀಡುತ್ತೇನೆ ಎನ್ನುವುದೆಲ್ಲ ಸುಳ್ಳು, ಉಳಿದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

ಕೊಪ್ಪಳ ಜಿಲ್ಲೆಗೆ 2 ಸಚಿವ ಸ್ಥಾನ ಸಿಕ್ಕಿದೆ. ನನಗೆ ಯಾರ ಬಗ್ಗೆಯೂ ಮುನಿಸು ಇಲ್ಲ. ಇಬ್ಬರು ಸಚಿವರು ಜಿಲ್ಲೆಯವರೇ ಇರುವುದರಿಂದ ಇನ್ನಷ್ಟು ಅಭಿವೃದ್ಧಿಗೆ ಅವಕಾಶ ಆಗಲಿದೆ ಎಂದರು.


ಹಾಗೆ ನೋಡಿದರೆ ಕೊಪ್ಪಳ ಕ್ಷೇತ್ರಕ್ಕೆ 1956ರಿಂದಲೂ ಸಚಿವ ಸ್ಥಾನ ಸಿಕ್ಕಿಲ್ಲ. ಕ್ಷೇತ್ರದ ಜನರಲ್ಲಿ ಈ ನೋವು ಇದ್ದೇ ಇದೆ. ಹೀಗಾಗಿ ನೋವಿನಿಂದ ಕ್ಷೇತ್ರದ ಜನರು ಪ್ರತಿಭಟನೆ ಮಾಡಿದ್ದಾರೆ ಎಂದರು.

ಡಾ. ಯತೀಂದ್ರ ಸಿದ್ದರಾಮಯ್ಯ ಭವಿಷ್ಯದ ನಾಯಕರು. ಈ ವಿಷಯದಲ್ಲಿ ಮಾಧ್ಯಮದವರು ಅನಗತ್ಯ ಟ್ವಿಸ್ಟ್‌ ನೀಡಬೇಡಿ ಎಂದು ಮನವಿ ಮಾಡಿದರು.

ನಾನು ಕೇಳಿಲ್ಲ: ನಾನು ಯಾವುದೇ ಸ್ಥಾನಮಾನ ಕೇಳಿಯೇ ಇಲ್ಲ. ಕೆಕೆಆರ್‌ಡಿಬಿ ಅಧ್ಯಕ್ಷ ಸ್ಥಾನವನ್ನೂ ಕೇಳಿಲ್ಲ, ಕೆಎಂಎಫ್ ಅಧ್ಯಕ್ಷ ಸ್ಥಾನವನ್ನೂ ಕೇಳಿಲ್ಲ. ಯಾವುದೇ ಬೇಡಿಕೆಯನ್ನು ಇಟ್ಟಿಲ್ಲ ಎಂದರು.