ಸಾರಾಂಶ
ಎಸ್.ಜಿ. ತೆಗ್ಗಿನಮನಿನರಗುಂದ: ತಾಲೂಕಿನಲ್ಲಿ ಈ ಬಾರಿ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಬೆಳೆಗಳೆಲ್ಲಾ ಒಣಗುತ್ತಿದ್ದು, ಬೆಳೆ ಉಳಿಸಿಕೊಳ್ಳಲು ರೈತರು ಮಲಪ್ರಭಾ ಜಲಾಶಯದತ್ತ ಚಿತ್ತ ನೆಟ್ಟಿದ್ದಾರೆ!
ಪ್ರಸಕ್ತ ವಷ೯ ಮುಂಗಾರು ಹಂಗಾಮಿನಲ್ಲಿ ಕೃತಿಕಾ, ಮೃಗಶಿರಾ ಮಳೆ ಉತ್ತಮವಾಗಿ ಸುರಿದಿದ್ದರಿಂದ ರೈತರು ಖುಷ್ಕಿ ಹಾಗೂ ನೀರಾವರಿ ಜಮೀನುಗಳಲ್ಲಿ ಹೆಸರು, ಗೋವಿನ ಜೋಳ, ಬಿ.ಟಿ. ಹತ್ತಿ, ಸೂರ್ಯಕಾಂತಿ, ತೊಗರಿ, ಈರುಳ್ಳಿ ಬಿತ್ತನೆ ಮಾಡಿ ಉತ್ತಮ ಬೆಳೆ ಬೆಳೆಸಿದ್ದಾರೆ.ಆದರೆ ಕಳೆದೊಂದು ತಿಂಗಳಿನಿಂದ ಮಳೆ ಕೈ ಕೊಟ್ಟಿದ್ದರಿಂದ ತೇವಾಂಶ ಕೊರತೆಯಿಂದ ಬೆಳೆಗಳು ಒಣಗುತ್ತಿದ್ದು, ರೈತ ಸಮುದಾಯಕ್ಕೆ ದಿಕ್ಕು ತೋಚದಾಗಿದೆ.
ಈ ಭಾಗದ ರೈತರ ಜೀವನಾಡಿಯಾಗಿರುವ ಮಲಪ್ರಭಾ ಜಲಾಶಯಕ್ಕೆ ಕಳೆದೊಂದು ತಿಂಗಳಲ್ಲಿ ಒಳಹರಿವು ಹೆಚ್ಚಿದ್ದು ಅಪಾರ ನೀರು ಸಂಗ್ರಹವಾಗಿದೆ. ಜಲಾಶಯ ತುಂಬಲು ಇನ್ನೂ 8 ಅಡಿ ಬಾಕಿ ಇದೆ. ಆದರೆ ಸದ್ಯ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿ ಪ್ರದೇಶದಲ್ಲಿ ಮಳೆ ಆಗದ್ದರಿಂದ ರೈತರು ಜಲಾಶಯಕ್ಕೆ ಹೊಂದಿಕೊಂಡಿರುವ ಕಾಲುವೆಗಳಿಗೆ ನೀರು ಬಿಡುವುದನ್ನು ಕಾಯುತ್ತಿದ್ದಾರೆ.ನೀರಿನ ಸಂಗ್ರಹ:ಈ ಜಲಾಶಯ ಒಟ್ಟು 2079.50 ಅಡಿ, (37.731) ಟಿಎಂಸಿ ನೀರು ಸಂಗ್ರಹ ಮಾಡಿಕೊಳ್ಳಬಹುದು. ಸದ್ಯ ಜಲಾಶಯದಲ್ಲಿ 2071.05 ಅಡಿ ನೀರು ಸಂಗ್ರಹವಿದೆ. ಇದರಲ್ಲಿ 2055 ಅಡಿಯಷ್ಟು ನೀರನ್ನು ಕುಡಿಯಲಿಕ್ಕೆ ಬೇಕು, ಉಳಿದ ನೀರನ್ನು ಕೃಷಿಗೆ ಬಳಕೆ ಮಾಡಿಕೊಳ್ಳಲು ಅವಕಾಶವಿದೆ. ಈ ನೀರು ಸದ್ಯ ಬಲದಂಡೆ ಮತ್ತು ಎಡದಂಡೆ, ಕಾಲುವೆಗಳಿಗೆ 1 ತಿಂಗಳ ಪೂರೈಕೆ ಮಾಡಬಹುದು.
ಬಿತ್ತನೆ ವಿವರ: ಹೆಸರು-12490 ಹೆಕ್ಟೇರ್, ಗೋವಿನ ಜೋಳ 17245 ಹೆ, ಬಿ.ಟಿ. ಹತ್ತಿ 4680 ಹೆ, ಸೂರ್ಯಕಾಂತಿ 25 ಹೆಕ್ಟೇರ್ ಸೇರಿ 37005 ಹೆಕ್ಟೇರ್ ಪ್ರದೇಶ ಬಿತ್ತನೆಯಾಗಿದೆ ಎಂದು ಕೃಷಿ ಅಧಿಕಾರಿಗಳು ಹೇಳಿದರು.ತಾಲೂಕಿನ ರೈತರು ಮುಂಗಾರು ಹಂಗಾಮಿನಲ್ಲಿ ಪ್ರತಿ 1 ಎಕರೆಗೆ 20 ಸಾವಿರ ರು. ಖರ್ಚು ಮಾಡಿ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ. ಆದರೆ ಮಳೆ ಕೈ ಕೊಟ್ಟಿದ್ದರಿಂದ ಈ ಬೆಳೆ ಉಳಿಯಬೇಕೆಂದರೆ ಕಾಲುವೆಗೆ ಸದ್ಯ ಸರ್ಕಾರ ನೀರು ಪೂರೈಕೆ ಮಾಡಲು ಕ್ರಮ ತೆಗೆದುಕೊಳ್ಳಬೇಕೆಂದು ಕೇಂದ್ರ ಕಳಸಾ ಬಂಡೂರಿ ನಾಲಾ ಯೋಜನೆ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಆಗ್ರಹಿಸಿದರು.
ಸದ್ಯ ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ಕಳೆದೊಂದು ತಿಂಗಳದಿಂದ ಮಳೆಯಾಗಿದ್ದರಿಂದ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಬೆಳೆಗಳಿಗೆ 15 ದಿನ ಕಾಲುವೆಗಳಗೆ ನೀರು ಪೂರೈಕೆ ಮಾಡಬೇಕೆಂದು ಜಲಾಶಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಮಲಪ್ರಭಾ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರಿ ಸಂಘಗಳ ಮಹಾಮಂಡಳ ನವೀಲತೀರ್ಥದ ಅಧ್ಯಕ್ಷ ಸದುಗೌಡ ಪಾಟೀಲ ಹೇಳಿದರು.