ಸಾರಾಂಶ
ಕಾರವಾರ: ತಿಂಗಳ ಕಾಲ ಸತತ ಮಳೆಯಿಂದ ಕಂಗೆಟ್ಟಿದ್ದ ಉತ್ತರ ಕನ್ನಡಕ್ಕೆ ಸೋಮವಾರ ಬಿಸಿಲಿನ ದರ್ಶನವಾಗಿದೆ. ಅಪರೂಪಕ್ಕೊಮ್ಮೆ ಮಳೆ ಬಂದಿದೆ. ಜಲಾವೃತವಾಗಿ ಕಾಳಜಿ ಕೇಂದ್ರಗಳಲ್ಲಿ ಇದ್ದವರು ತಮ್ಮ ಮನೆಗಳಿಗೆ ಮರಳಿದ್ದಾರೆ.
ಲಿಂಗನಮಕ್ಕಿ, ಗೇರುಸೊಪ್ಪ ಜಲಾಶಯಗಳಿಂದ ನೀರನ್ನು ಹೊರಬಿಟ್ಟ ಪರಿಣಾಮವಾಗಿ ಹೊನ್ನಾವರದಲ್ಲಿ ಉಂಟಾಗಿದ್ದ ಪ್ರವಾಹ ಭೀತಿ ಸದ್ಯಕ್ಕೆ ದೂರಾಗಿದೆ. ಜಿಲ್ಲಾದ್ಯಂತ ಮಳೆ ಇಳಿಮುಖವಾಗಿ, ಆಗಾಗ ಬಿಸಿಲಿನ ದರ್ಶನವಾಗಿದೆ. ನಿರಂತರ ಮಳೆಯಿಂದ ಚಿಂತಿತರಾಗಿದ್ದ ಜನತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.ಆದರೆ ಗುಡ್ಡ ಕುಸಿತ, ಮನೆ ಕುಸಿತದಿಂದ ಕಾಳಜಿ ಕೇಂದ್ರಗಳಲ್ಲಿ ಇದ್ದವರು ಕಾಳಜಿ ಕೇಂದ್ರಗಳಲ್ಲೇ ಮುಂದುವರಿಯುವಂತಾಗಿದೆ. ಕೆಲವರು ಬಾಡಿಗೆ ಮನೆಗಳಲ್ಲೂ ವಾಸವಾಗಿದ್ದಾರೆ.
ಸೋಮವಾರ ಲಿಂಗನಮಕ್ಕಿ, ಗೇರುಸೊಪ್ಪ ಹಾಗೂ ಕದ್ರಾ ಜಲಾಶಯಗಳಿಂದಲೂ ನೀರನ್ನು ಹೊರಬಿಡುವ ಪ್ರಮಾಣ ಕಡಿಮೆಯಾಗಿದೆ. ಇದರಿಂದ ಶರಾವತಿ ಹಾಗೂ ಕಾಳಿ ನದಿಗಳಲ್ಲಿ ನೀರಿನ ಮಟ್ಟ ಇಳಿದಿದೆ. ಗುಂಡಬಾಳ, ಚಂಡಿಕಾ ನದಿಗಳಲ್ಲೂ ಅಬ್ಬರ ಕಡಿಮೆಯಾಗಿದೆ.ಗುಡ್ಡ ಕುಸಿತದಿಂದ 11 ಜನರು ಕಣ್ಮರೆಯಾಗಿದ್ದ ಅಂಕೋಲಾದ ಶಿರೂರಿನಲ್ಲಿ ಇದುವರೆಗೆ 8 ಶವಗಳು ಸಿಕ್ಕಿದ್ದು, ಇನ್ನೂ ಮೂರು ಶವಗಳು ಪತ್ತೆಯಾಗಬೇಕಾಗಿದೆ. ಆದರೆ ಗಂಗಾವಳಿ ನದಿಯಲ್ಲಿ ನೀರಿನ ಹರಿವು ವೇಗವಾಗಿರುವುದರಿಂದ ಪತ್ತೆ ಕಾರ್ಯಾಚರಣೆ ಸಾಧ್ಯವಾಗುತ್ತಿಲ್ಲ. ಆ ಮೂರು ಕುಟುಂಬಗಳು ತೀವ್ರ ನೋವಿನಲ್ಲೇ ಕಾಲ ಕಳೆಯುವಂತಾಗಿದೆ.
ಅಧಿಕಾರಿಗಳಿಂದ ಮಳೆಹಾನಿ ಪರಿಶೀಲನೆ
ಅಂಕೋಲಾ: ಇತ್ತೀಚೆಗೆ ಸುರಿದ ಮಳೆಯಿಂದಾಗಿ ಹೊನ್ನೆಬೈಲ್ ಗ್ರಾಪಂ ವ್ಯಾಪ್ತಿಯಲ್ಲಿ ಸಾಕಷ್ಟು ಹಾನಿ ಉಂಟಾಗಿದ್ದು, ಹಲವು ಮನೆಗಳಿಗೆ ನೀರು ನುಗ್ಗಿ ಲಕ್ಷಾಂತರ ರು. ಹಾನಿ ಉಂಟಾಗಿದೆ. ಈ ಭಾಗದ ಸಾಕಷ್ಟು ಕಾಂಪೌಂಡ್ ಕುಸಿದುಬಿದ್ದಿದ್ದು, ಮನೆಯಲ್ಲಿನ ಪರಿಕರಗಳು ಕೂಡ ನೀರಿನಿಂದಾಗಿ ಹಾನಿಗೊಳಗಾಗಿವೆ.ಹಾನಿಯ ಕುರಿತು ಪರಿಹಾರಕ್ಕಾಗಿ ಹೊನ್ನೆಬೈಲ್ ಗ್ರಾಪಂ ಸಭಾಭವನದಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ವಿಶೇಷ ಸಭೆ ನಡೆಸಿದರು. ಹಾನಿಗೊಳಗಾದವರು ಅಲ್ಲಿಗೆ ಬಂದು ಮಾಹಿತಿ ನೀಡಿದರು.ಗ್ರಾಪಂ ಅಧ್ಯಕ್ಷ ವೆಂಕಟ್ರಮಣ ಕೆ. ನಾಯ್ಕ, ಸದಸ್ಯರಾದ ಮಾದೇವ ಗುನಗ, ಮಂಜುನಾಥ ಆರ್. ನಾಯ್ಕ, ನಾಗರಾಜ ಭಟ್, ಪಿಡಿಒ ಹಸ್ಮತ್ ಖಾನ್, ಗ್ರಾಮ ಲೆಕ್ಕಾಧಿಕಾರಿ ಗೌರಿ, ಗ್ರಾಮ ಸಹಾಯಕ ವಿನೋದ ನಾಯ್ಕ, ಬಾಬು ನಾಯ್ಕ ಇತರರು ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))