ಸಾರಾಂಶ
ಗದಗ ಜಿಲ್ಲೆಯಾದ್ಯಂತ ಯುಗಾದಿ ಪೂರ್ವದಲ್ಲಿಯೇ ಪ್ರಸಕ್ತ ಸಾಲಿನಲ್ಲಿ ಮಳೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ರೈತಾಪಿ ವರ್ಗ ಕಂಗಾಲಾಗಿದೆ.
ಶಿವಕುಮಾರ ಕುಷ್ಟಗಿಕನ್ನಡಪ್ರಭ ವಾರ್ತೆ ಗದಗಜಿಲ್ಲೆಯಾದ್ಯಂತ ಯುಗಾದಿ ಪೂರ್ವದಲ್ಲಿಯೇ ಪ್ರಸಕ್ತ ಸಾಲಿನಲ್ಲಿ ಮಳೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ರೈತಾಪಿ ವರ್ಗ ಕಂಗಾಲಾಗಿದೆ.
ಜಾನುವಾರುಗಳಿಗೆ ವರ್ಷಪೂರ್ತಿ ಬೇಕಾಗುವ ಮೇವು ಹೊಟ್ಟು ಸಂಗ್ರಹಿಸಿಕೊಳ್ಳುವುದೇ ದೊಡ್ಡ ಆತಂಕವನ್ನು ಸೃಷ್ಟಿಸಿದೆ. ಈಗಾಗಲೇ ಹಿಂಗಾರು ಹಂಗಾಮಿನ ಕಟಾವು ಪೂರ್ಣಗೊಂಡಿದ್ದು, ಜೋಳ, ಗೋಧಿ, ಕಡಲೆ ಬೆಳೆದಿದ್ದ ರೈತರು ಅದನ್ನೆಲ್ಲಾ ಮಾರಾಟ ಮಾಡಿ, ವರ್ಷ ಪೂರ್ತಿ ತಮ್ಮೊಟ್ಟಿಗೆ ಹೊಲದಲ್ಲಿ ಶ್ರಮಿಸುವ ಎತ್ತು, ಎಮ್ಮೆ ಸೇರಿದಂತೆ ಜಾನುವಾರುಗಳಿಗೆ ಬೇಕಾಗುವ ಮೇವು ಸಂಗ್ರಹಣೆಗೆ ಮುಂದಾಗಿದ್ದಾರೆ. ಮಳೆ ಬೇಗನೇ ಪ್ರಾರಂಭ:ಹೊಸಮಳೆ ಪ್ರಾರಂಭವಾಗುವುದೇ ಯುಗಾದಿ ನಂತರ. ಆದರೆ, ಪ್ರಸಕ್ತ ಸಾಲಿನಲ್ಲಿ ಯುಗಾದಿ ಪೂರ್ವದಲ್ಲಿಯೇ ಮಳೆ ಪ್ರಾರಂಭವಾಗಿದ್ದು ಸಹಜವಾಗಿಯೇ ರೈತರಲ್ಲಿ ಆತಂಕಕ್ಕೆ ಕಾರಣವಾಗಿದ್ದು, ಇನ್ನೊಂದು 20 ದಿನ ಮಳೆಯಾಗದೇ ಇದ್ದರೆ ಮೇವು, ಹೊಟ್ಟು ಸಂಗ್ರಹಿಸಿಕೊಂಡು ಬಣವಿ ಹಾಕಿಕೊಂಡು ಅದನ್ನು ರಕ್ಷಣೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ಹೊಲದಲ್ಲಿಯೇ ಮೇವು, ಹೊಟ್ಟು ತೊಯ್ದು ಹಾಳಾಗುತ್ತದೆ ಎನ್ನುವ ಬೇಸರದಲ್ಲಿ ರೈತರಿದ್ದಾರೆ. ಹೈನುಗಾರಿಕೆ ಮೇಲೆ ಹೊಡೆತ: ಕೃಷಿ ಚಟುವಟಿಕೆಗೆ ಮೊದಲಿನಂತೆ ಹೆಚ್ಚಾಗಿ ಎತ್ತುಗಳು ಬಳಕೆಯಾಗುತ್ತಿಲ್ಲ, ಎತ್ತುಗಳ ಜಾಗದಲ್ಲೀಗ ಟ್ರ್ಯಾಕ್ಟರ್ ಗಳು ಬಂದಿವೆ ಹಾಗಾಗಿ ಬೇಗನೇ ಮಳೆ ಪ್ರಾರಂಭವಾಗುವುದರಿಂದ ದೊಡ್ಡ ರೈತರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಸಣ್ಣ ಮತ್ತು ಮಧ್ಯಮ ರೈತರು ಕೃಷಿಯೊಂದಿಗೆ ಉಪ ಕಸುಬಾಗಿ ಹೈನುಗಾರಿಕೆಯನ್ನು ನಂಬಿರುತ್ತಾರೆ. ಇದಕ್ಕಾಗಿ ಅವರ ಬಳಿ ಇರುವ ಎಮ್ಮೆ, ಆಕಳು ಮತ್ತು ಆಡು, ಕುರಿಗಳಿಗಾಗಿ ಹೊಟ್ಟು ಮೇವು ಸಂಗ್ರಹಿಸಿ ಇಟ್ಟುಕೊಳ್ಳಬೇಕು, ಆದರೆ ಮಳೆಯಿಂದ ಅದೆಲ್ಲಾ ತೊಯ್ದರೆ ಅದು ಮುಂದೆ ವರ್ಷ ಪೂರ್ಣ ಬರುದಿಲ್ಲ, ನೆನೆದಿರುವ ಹೊಟ್ಟು, ಮೇವು ಜಾನುವಾರುಗಳು ತಿನ್ನುವುದು ಕಡಿಮೆ ಎನ್ನುತ್ತಾರೆ ಹಲವಾರು ರೈತರು. ಈ ವರ್ಷ ಫೆಬ್ರವರಿ, ಮಾರ್ಚ್ ತಿಂಗಳಲ್ಲಿಯೇ ಅತಿಯಾದ ಬಿಸಿಲು ಮತ್ತು ಸೆಕೆಯ ವಾತಾವರಣ ನಿರ್ಮಾಣವಾಗಿದ್ದು, ಈಗಾಗಲೇ ಎರಡು ಬಾರಿ ಅಲ್ಪ ಪ್ರಮಾಣದಲ್ಲಿ ಮಳೆಯಾಗಿದೆ. ಈಗಷ್ಟೇ ಹಿಂಗಾರು ಸುಗ್ಗಿಯನ್ನು ಮುಗಿಸಿ ಜೋಳ, ಗೋಧಿ, ಕಡಲೆ ಸಂಗ್ರಹಿಸಿದ್ದೇವೆ, ಇನ್ನೇನು ಬಣವಿ ಒಟ್ಟಬೇಕು ಎನ್ನುವಷ್ಟರಲ್ಲಿ ಮಳೆಯಾಗುತ್ತಿದ್ದು, ಮೇವು, ಸಂಗ್ರಹಣೆಗೆ ಮಳೆ ಸ್ವಲ್ಪ ಅವಕಾಶ ನೀಡಬೇಕು ಎಂದು ರೈತರಾದ ಸಂಗಪ್ಪ ಬೂದಿಹಾಳ, ಮಲ್ಲಿಕಾರ್ಜುನಪ್ಪ ಭರಡ್ಡಿ ಹೇಳಿದರು.