ಮರಾಠಿ ಪುಂಡರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ

| Published : Mar 23 2025, 01:38 AM IST

ಸಾರಾಂಶ

ರಾಜ್ಯದ ಗಡಿಯಲ್ಲಿ ಎಂ.ಇ.ಎಸ್ ಪುಂಡಾಟಿಕೆಗೆ ತಡೆಯಲು ಸರ್ಕಾರ ಉಗ್ರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ತಾಲೂಕು ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಕನಕಪುರ

ರಾಜ್ಯದ ಗಡಿಯಲ್ಲಿ ಎಂ.ಇ.ಎಸ್ ಪುಂಡಾಟಿಕೆಗೆ ತಡೆಯಲು ಸರ್ಕಾರ ಉಗ್ರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ತಾಲೂಕು ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದರು.

ನಗರದ ತಾಲೂಕು ಕಚೇರಿ ಆವರಣದಲ್ಲಿ ರಾಜ್ಯ ಸರ್ಕಾರ ಮರಾಠಿ ಪುಂಡರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಮನವಿ ಪತ್ರವನ್ನು ತಹಸೀಲ್ದಾರ್ ಮಂಜುನಾಥ್ ಅವರಿಗೆ ನೀಡಿ ಮರಾಠಿಗರ ಪುಂಡಾಟಿಕೆಗೆ ವಿರುದ್ಧ ರಾಜ್ಯ ಬಂದ್ ಕರೆಗೆ ಓಗೊಟ್ಟು ಪ್ರತಿಭಟನೆ ನಡೆಸಿದರು.

ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಸಲಹೆಗಾರ ಕುಮಾರಸ್ವಾಮಿ ಮಾತನಾಡಿ, ಕನ್ನಡಪರ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹಿಂದೆ ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿದ್ದವರು. ಗಡಿಯಲ್ಲಿನ ಇವರ ಉಪಟಳ ಹತ್ತಿರದಿಂದ ಕಂಡಿದ್ದಾರೆ. ಇತ್ತೀಚೆಗೆ ಬೆಳಗಾವಿ ಎಂಇಎಸ್ ಪುಂಡರು ರಸ್ತೆ ಸಾರಿಗೆ ಸಂಸ್ಥೆ ನೌಕರರ ಮೇಲೆ ನಡೆಸಿದ ಹಲ್ಲೆ ಖಂಡನೀಯ. ಗಡಿ ಭಾಗದಲ್ಲಿ ಆಗಿಂದಾಗ್ಗೆ ಈ ಪುಂಡರು ಒಂದಲ್ಲ ಒಂದು ರೀತಿಯ ಖ್ಯಾತೆ ತೆಗೆದು ಕರ್ನಾಟಕದ ಸ್ವಾಭಿಮಾನಕ್ಕೆ ಧಕ್ಕೆ ತರುತ್ತಾ ದರ್ಪದಿಂದ ಮೆರೆಯುತ್ತಿದ್ದಾರೆ. ಇದಕ್ಕೆ ಆ ಜಿಲ್ಲೆಯ ಕೆಲ ಶಾಸಕರು ಹಾಗೂ ಸಚಿವರು ಶಾಮೀಲಾಗಿರುವುದರಿಂದಲೇ ಇವರ ಪುಂಡಾಟಿಕೆಗೆ ತಡೆಯಲು ಆಗುತ್ತಿಲ್ಲ. ಸರ್ಕಾರ ಕೂಡಲೇ ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕಾನೂನು ಜಾರಿಗೊಳಿಸಿ ಘಟನೆಗೆ ಸಂಬಂಧಿಸಿದವರ ಮೇಲೆ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

ರಾಜ್ಯ ರೈತಸಂಘದ ಸಂಚಾಲಕ ಚೀಲೂರು ಮುನಿರಾಜು, ನಗರಸಭಾ ಸದಸ್ಯ ಸ್ಟುಡಿಯೋ ಚಂದ್ರು, ಕನ್ನಡಪರ ಸಂಘಟನೆ ಮುಖಂಡ ಭಾಸ್ಕರ್, ವೈಭವ ಕರ್ನಾಟಕದ ಜಿಲ್ಲಾಧ್ಯಕ್ಷ ಪುಟ್ಟಲಿಂಗಯ್ಯ, ರೈತ ಸಂಘದ ಯುವ ಘಟಕದ ಅಧ್ಯಕ್ಷ ಸಿದ್ದರಾಜು, ರೈತ ಸಂಘದ ತಾಲ್ಲೂಕು ಅಧ್ಯಕ್ಷ ಮುನಿಸಿದ್ದೇಗೌಡ, ರೈತ ಸಂಘದ ಮುಖಂಡರು ನಾಗರಾಜು, ಜಯ ಕರ್ನಾಟಕ ಜನಪರ ವೇದಿಕೆಯ ಪದಾಧಿಕಾರಿಗಳಾದ ರಮೇಶ್, ಶೇಖರ್, ರವಿಕುಮಾರ್, ನೇಗಿಲ ಯೋಗಿ ಟ್ರಸ್ಟ್‌ನ ರಾಮಯ್ಯ ಸೇರಿದಂತೆ ಹಲವು ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.