ಮತ್ತೆ ಕಾಣಿಸಿಕೊಂಡ ಚಿರತೆ: ಸೆರೆಗೆ ಪಂಜರ ಅಳವಡಿಕೆ

| Published : Jan 09 2025, 12:46 AM IST

ಸಾರಾಂಶ

ಹನೂರು ಗಂಗನ ದೊಡ್ಡಿ ಗ್ರಾಮದ ರೈತರ ಜಮೀನಿನಲ್ಲಿ ಚಿರತೆ ಸೆರೆ ಹಿಡಿಯಲು ತುಮಕೂರು ಗೇಜ್ ಪಂಜರ ಅಳವಡಿಸಿರುವುದು.

ಹನೂರು: ಸೋಮವಾರ ರಾತ್ರಿ ಅಂಬಿಕಾಪುರ ಗ್ರಾಮದ ಹೊರವಲಯದ ರೈತ ಜಬಿವುಲ್ಲಾ ಹಾಗೂ ಕೃಷ್ಣೇಗೌಡ ಅವರ ಜಮೀನಿನಲ್ಲಿ ಚಿರತೆ ದಾಳಿಯಿಂದ ಕುರಿ ಮತ್ತು ಮೇಕೆ ಬಲಿಯಾದ ನಂತರ ಮಂಗಳವಾರ ರಾತ್ರಿ ಗಂಗನ ದೊಡ್ಡಿಯಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಚಿರತೆ ಸೇರೆಗೆ ತುಮಕೂರು ಗೇಜ್ ಚಿರತೆ ಬೋನ್ ಅಳವಡಿಸುವ ಮೂಲಕ ವ್ಯಾಪಕ ಬಲೆ ಬೀಸಿದ್ದಾರೆ.

ಅಂಬಿಕಾಪುರದಿಂದ ಗಂಗನ ದೊಡ್ಡಿಗೆ ಬಂದಿರುವ ಚಿರತೆ, ಮಂಗಳವಾರ ರಾತ್ರಿ ರಫೀಕ್ ಎಂಬವರ ಜಮೀನಿನಲ್ಲಿ ತಡರಾತ್ರಿ ಕಾಣಿಸಿಕೊಂಡಿದ್ದು ರೈತ ಚಿರತೆಯನ್ನು ನೋಡಿ ಭಯಭೀತರಾಗಿ ಗ್ರಾಮಸ್ಥರಿಗೆ ತಿಳಿಸಿದ್ದಾರೆ. ತಕ್ಷಣ ತಾಲೂಕು ಘಟಕದ ಕರ್ನಾಟಕ ರಾಜ್ಯ ರೈತ ಸಂಘ ಅಧ್ಯಕ್ಷ ಅಮ್ಜದ್ ಖಾನ್ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾಕು ಪ್ರಾಣಿಗಳ ಭಕ್ಷಕ ಚಿರತೆಯನ್ನು ಸೆರೆ ಹಿಡಿಯಲು ವಿವಿಧ ರೀತಿಯಲ್ಲಿ ಅರಣ್ಯ ಅಧಿಕಾರಿಗಳು ಮುಂದಾಗಿದ್ದಾರೆ.

ಕಳೆದ ಹಲವಾರು ತಿಂಗಳುಗಳಿಂದ ಗಂಗನದೊಡ್ಡಿ, ಬಸಪ್ಪನ ದೊಡ್ಡಿ ಮಂಗಳವಾರ ಅಂಬಿಕಾಪುರ ಮೇಡ್ ನಲ್ಲಿ ಕಾಣಿಸಿಕೊಂಡಿದ್ದ ಚಿರತೆ ಮತ್ತೆ ಗಂಗನ ದೊಡ್ಡಿ ಗ್ರಾಮದ ಜಮೀನೊಂದರಲ್ಲಿ ಬುಧವಾರ ರಾತ್ರಿ ಕಾಣಿಸಿಕೊಂಡಿರುವುದರಿಂದ ಸೆರೆ ಹಿಡಿಯಲು ತುಮಕೂರು ಗೇಜ್ ಚಿರತೆ ಬೋನ್ ಅಳವಡಿಸಿದ್ದಾರೆ

ಭಯಭೀತರಾದ ಗ್ರಾಮಸ್ಥರು:

ಕಳೆದ ಎರಡು ದಿನಗಳಿಂದ ಅಂಬಿಕಾಪುರ ಹಾಗೂ ಗಂಗನ ದೊಡ್ಡಿ ಗ್ರಾಮದ ಸುತ್ತಮುತ್ತ ಚಿರತೆ ರಾತ್ರಿ ವೇಳೆ ಕಾಣಿಸಿಕೊಳ್ಳುತ್ತಿರುವುದರಿಂದ ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದಂತೆ ತೋಟದ ಮನೆಯ ರೈತರು ಭಯ ಬೀತರಾಗಿದ್ದಾರೆ. ಹೀಗಾಗಿ ಅರಣ್ಯ ಅಧಿಕಾರಿಗಳು ಉಪಟಳ ನೀಡುತ್ತಿರುವ ಚಿರತೆಯನ್ನು ಹೆಚ್ಚಿನ ಸಿಬ್ಬಂದಿ ಬಳಸಿಕೊಂಡು ಅದರ ಚಲನವಲವನ್ನು ಪತ್ತೆ ಹಚ್ಚಿ ಸೆರೆ ಹಿಡಿಯಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಅಮ್ಜದ್ ಖಾನ್ ಒತ್ತಾಯಿಸಿದ್ದಾರೆ.