ಹಿಂದು ಸಂಗಮ ಕಾರ್ಯಕ್ರಮದಲ್ಲಿ ಶಿವಮೊಗ್ಗ ಶಾಸಕ ಚನ್ನಬಸಪ್ಪ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಹೊಸದುರ್ಗ
ಭಾರತ ಭಾರತವಾಗಿಯೇ ಉಳಿದಿರಲು ಸನಾತನ ಹಿಂದೂ ಸಂಸ್ಕೃತಿ ಕಾರಣ, ದೇಶದ ಸಮಸ್ತ ಹಿಂದೂಗಳು ನಾನು ಹಿಂದೂ ಎಂದು ಹೆಮ್ಮೆಯಿಂದ ಹೇಳಿಕೊಳ್ಳಲು ಹಿಂದೂ ಸಂಗಮ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಸಂಘದ ಕಟ್ಟಾಳು ಶಿವಮೊಗ್ಗ ವಿಧಾನಸಭಾ ಸದಸ್ಯ ಚನ್ನಬಸಪ್ಪ ತಿಳಿಸಿದರು.ತಾಲೂಕಿನ ದೇವಪುರದಲ್ಲಿ ಶನಿವಾರ ನಡೆದ ಹುಣವಿನಡು ದೇವಪುರ ಅತ್ತಿಮಗೆ ವಲಯದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣದಲ್ಲಿ ಮಾತನಾಡಿದ ಅವರು, ಡಾ.ಕೇಶವ ಬಲಿರಾಮ ಹೇಡಿಗೇವಾರ್ ರವರ ಕಾರಣದಿಂದಾಗಿ ಹಿಂದೂ ಧರ್ಮ ಪುನರುತ್ಥಾನವಾಗಿದೆ. ಲಕ್ಷಾಂತರ ಶಾಖೆಗಳು ಪ್ರಪಂಚದಾದ್ಯಂತ ನಡೆಯುತ್ತಿದೆ ಎಂದರೆ ಆರೆಸ್ಸೆಸ್ ಶಕ್ತಿಯನ್ನು ಗಮನಿಸಲೇಬೇಕು. ಮಹಾತ್ಮ ಗಾಂಧಿ, ಲಾಲಾ ಲಜಪತರಾಯರು ಇದ್ದ ಕಾಂಗ್ರೆಸ್‌ನಲ್ಲಿ ಡಾ.ಕೇಶವ ಬಲಿರಾಮ ಹೆಡಿಗೇವಾರರೂ ಇದ್ದರು. 1925ರಲ್ಲಿ ನಾನು ಹಿಂದೂ ಎಂದು ಯಾರೂ ಧೈರ್ಯದಿಂದ ಹೇಳಿಕೊಳ್ಳುತ್ತಿರಲಿಲ್ಲ ಇದನ್ನು ಮನಗಂಡ ಡಾಕ್ಟರ್ ಜಿ ರವರಿಗೆ ಸನಾತನ ಸಂಸ್ಕೃತಿ ಉಳಿದರೆ ಮಾತ್ರ ಭಾರತ ಭಾರತವಾಗಿ ಉಳಿಯಬಲ್ಲದು ಎಂಬ ಕಲ್ಪನೆ ಅವರಲ್ಲಿ ಮೂಡಿದ್ದರಿಂದ ಆರ್‌ಎಸ್‌ಎಸ್ ಸ್ಥಾಪನೆಯಾಯಿತು ಎಂದರು.
ಪ್ರಪಂಚದ 158 ರಾಷ್ಟ್ರಗಳಲ್ಲಿ ಆರ್‌ಎಸ್‌ಎಸ್ ನಮ್ಮ ಸಂಘದ ಸಾಮಾಜಿಕ ಕಾರ್ಯ ಮಾಡುತ್ತಿದೆ. ಸನಾತನ ಹಿಂದೂ ಸಂಸ್ಕೃತಿಯನ್ನು ಉಳಿಸುವ ಕಾರ್ಯ ಮಾಡುತ್ತಿದೆ. ಭವ್ಯ ಭಾರತವನ್ನು ಕಟ್ಟಿದವರು ಸನಾತನ ಪರಂಪರೆಯ ದೈವ ನಿರ್ವಿತವಾದ ಭಾರತ ದೇಶ ವಿಶೇಷವಾದಂತ ಋಷಿಮುನಿಗಳು ಸಾಧು ಸಂತರಿಂದ ಕಟ್ಟಿದ ಭಾರತದಲ್ಲಿ ಸನಾತನ ಪರಂಪರೆ ಸಂಸ್ಕೃತಿ ಗಟ್ಟಿಯಾಗಿದೆ, ನಮ್ಮನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ ನಿರಂತರವಾಗಿ ಸಾವಿರಾರು ವರ್ಷಗಳಿಂದ ಬರ್ಬರ ಆಕ್ರಮಣ ಮಾಡಿದ ಎಲ್ಲ ಅಕ್ರಮಣಕಾರರನ್ನು ಹಿಮೆಟ್ಟಿಸಿದ ಕೀರ್ತಿ ಭಾರತದ ಸನಾತನ ಪರಂಪರೆಗಿದೆ ಎಂದರು.ಸಾಮಾಜಿಕ ಕಾರ್ಯಕರ್ತೆ ರೂಪ ಅಗ್ರಹಾರ ಮಾತನಾಡಿ, ಹಿಂದುಗಳು ಕೇವಲ ‘ಆರತಿಗೊಬ್ಬ ಮಗಳು ಕೀರ್ತಿಗೊಬ್ಬ ಮಗ’ಎನ್ನದೆ ಭವ್ಯ ಭಾರತದ ನಿರ್ಮಾಣಕ್ಕಾಗಿ ದೇಶಕ್ಕಾಗಿ ಮತ್ತೊಂದು ಮಗುವನ್ನು ಪಡೆಯುವ ಅಗತ್ಯತೆ ಪ್ರಸ್ತುತ ಇದೆ. ಒಂದು ಕುಟುಂಬಕ್ಕೆ ಮಹಿಳೆಗೆ ಭದ್ರಬುನಾದಿ ಮಕ್ಕಳಿಗೆ ಧಾರ್ಮಿಕ ಹಿಂದೂ ಸಂಸ್ಕಾರವನ್ನು ಕೊಡುವ ಜವಾಬ್ದಾರಿ ಎಲ್ಲಾ ಹಿಂದೂ ಮಹಿಳೆಯರ ಮೇಲಿದೆ. ಇಂದು ಧಾರ್ಮಿಕ ಪದ್ಧತಿಯಲ್ಲಿ ಮಹಿಳೆಗೆ ಸಮಾನ ಅವಕಾಶವಿದ್ದು ಸಂಸ್ಕಾರಯುತ ಶಿಕ್ಷಣ ಪಡೆದು ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆ ಮುಂದೆ ಬರಬೇಕಾಗಿದೆ ಎಂದರು.
ಹಿಂದೂ ಸಂಗಮ ಆಯೋಜನ ಸಮಿತಿ ಅಧ್ಯಕ್ಷ ಕೆ.ಎಸ್.ಕಲ್ಮಠ್ ಮಾತನಾಡಿ, ನಾವೆಲ್ಲ ಹಿಂದೂಗಳೆಂದು ಗಟ್ಟಿ ಧ್ವನಿಯಲ್ಲಿ ಹೇಳಿದಾಗ ಧರ್ಮದ ಉನ್ನತೀಕರಣವಾಗಬಲ್ಲದು ಜಾತಿಯನ್ನು ದೂರಗೊಳಿಸಿ ಹಿಂದೂ ಸಂಸ್ಕೃತಿಯನ್ನು ಬೆಳೆಸಬೇಕು ಭಾರತ ದೇಶವನ್ನು ಮಾದಕ ವಸ್ತುಗಳಿಂದ ದಮನ ಮಾಡುವ ಉದ್ದೇಶವನ್ನ ಅಕ್ಕಪಕ್ಕದ ದೇಶದವರು ಡ್ರಕ್ಸ್ ಸಾಗಣೆ ಮಾಡುತ್ತಿದ್ದಾರೆ, ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿನ ಭಾರತೀಯರು ಸ್ಪರ್ಧಿಸುತ್ತಿದ್ದಾರೆ ಎಂದರೆ ನಮ್ಮ ಸಾಧನೆ ಜಗತ್ತಿನಲ್ಲೇ ಪ್ರಸರಿಸಿದೆ ಎಂದರು.ಕಾರ್ಯಕ್ರಮದಲ್ಲಿ ಆರ್‌ಎಸ್ಎಸ್ ಕಾರ್ಯವಾಹ ವಾಸುದೇವ ಲೆಕ್ಕೆನಹಳ್ಳಿ, ಅಣ್ಣಪ್ಪಸ್ವಾಮಿ, ಸದ್ಗುರು ಪ್ರದೀಪ್, ಎಸ್.ಲಿಂಗಮೂರ್ತಿ, ಗುರುಸ್ವಾಮಿ, ಗೂಳಿಹಟ್ಟಿ ಕೃಷ್ಣಮೂರ್ತಿ, ಹಿಂದೂ ಸಂಗಮ ಯೋಜನ ಸಮಿತಿಯು ಉಪಾಧ್ಯಕ್ಷ ತುಂಬಿನಕೆರೆ ಬಸವರಾಜ್, ಹೆಗ್ಗೆರೆ ಶಂಕ್ರಪ್ಪ ಮತ್ತಿತರರು ಹಾಜರಿದ್ದರು.