ಸಾರಾಂಶ
ಗದಗ: ಮನುಷ್ಯನಲ್ಲಿ ಏಕ ನಿಷ್ಠೆಯಿದ್ದಾಗ ದೇವರ, ಗುರುವಿನ ಕೃಪೆಯಾಗುವುದು. ತನ್ಮೂಲಕ ಶ್ರೇಷ್ಠತೆ ಪಡೆಯುವನು. ಭಕ್ತನು ಸರ್ವಶ್ರೇಷ್ಠನಾಗಿರುವನು. ಮಠ, ಮಂದಿರಗಳ ಗುರುಗಳ ಶ್ರೇಯಸ್ಸು ಬೆಳೆಯಲು ಭಕ್ತರ ನಿಷ್ಕಲ್ಮಶ ಭಕ್ತಿ ಮತ್ತು ಸಹೃದಯತೆ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಶಿವಶಾಂತವೀರ ಶರಣರು ಹೇಳಿದರು.
ತಾಲೂಕಿನ ಬಳಗಾನೂರಿನ ಚಿಕೇನಕೊಪ್ಪದ ಶ್ರೀಚನ್ನವೀರ ಶರಣರ ಮಠದಲ್ಲಿ ನಡೆದ ಶಿವಾನುಭವ ಗೋಷ್ಠಿಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.ರಬಕವಿ-ಸಂಶಿಯ ಬ್ರಹ್ಮಾನಂದ ಆಶ್ರಮದ ಗುರುಸಿದ್ದೇಶ್ವರ ಸ್ವಾಮಿಗಳು ಮಾತನಾಡಿ, ಮನುಷ್ಯ ಹಣ್ಣಿನಂತೆ ಪಕ್ವವಾಗಿ ಬದುಕಬೇಕು, ಬಾಗಬೇಕು, ಅಹಂಕಾರ, ಅಂಧಕಾರ, ಅಧಿಕಾರದಿಂದ ದೂರವಿದ್ದು, ವಿನಮ್ರವಾಗಿ, ವಿನೀತನಾಗಿ ಬದುಕಿ, ದೇಹ, ಮನಸ್ಸು, ಭಾವನೆ ಶುದ್ಧೀಕರಿಸಿಕೊಳ್ಳಬೇಕು ಎಂದರು.
ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಎಂ.ಎ. ರಡ್ಡೇರ ಮಾತನಾಡಿ, ಸಮಾಜಮುಖಿ ಕಾರ್ಯಗಳನ್ನು ಮಾಡುವುದರ ಜೊತೆಗೆ ನಮ್ಮನ್ನು ಸುಸಂಸ್ಕೃತ ಹಾಗೂ ಸುಶಿಕ್ಷಿತರನ್ನಾಗಿ ಮಾಡುವಲ್ಲಿ ಶ್ರೀಗಳು ಸದಾ ಚಿಂತನೆ ಮಾಡುತ್ತಿರುವರು. ನಾವು ಶರಣರ, ಸಂತರ ಸಂಪರ್ಕದಲ್ಲಿದ್ದು, ಉತ್ತಮ ಕಾರ್ಯಚಟುವಟಿಕೆಗಳನ್ನು ನಿರ್ವಹಿಸಿ ನಮ್ಮ ಬದುಕಿನ ಮೌಲ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ರಾಜ್ಯಮಟ್ಟದ ಕಾಯಕಲ್ಪ ಪ್ರಶಸ್ತಿ ಪಡೆದ ಬಳಗಾನೂರಿನ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳನ್ನ, ಆಶಾ ಕಾರ್ಯಕರ್ತೆಯರನ್ನ ಹಾಗೂ ಉಪನಿರ್ದೇಶಕ ಎಂ.ಎ. ರಡ್ಡೇರ ಅವರನ್ನು ಸನ್ಮಾನಿಸಿ,ಗೌರವಿಸಲಾಯಿತು. ಹುಬ್ಬಳ್ಳಿ ನವನಗರದ ಚಿ.ಚ.ಶರಣರ ಅಂಧರ ಕಲ್ಯಾಣ ಆಶ್ರಮದ ಸಂಗೀತ ಕಲಾ ಬಳಗದಿಂದ ಸಂಗೀತ ಸೇವೆ ಜರುಗಿತು. ಅರಹುಣಸಿಯ ದಿ.ಗಂಗಮ್ಮಾ ಗೌಡಶಾನಿ, ಪಂಪನಗೌಡ ಪಾಟೀಲ ಅವರ ಸ್ಮರಣಾರ್ಥ ಸಂಗನಗೌಡ ಪಾಟೀಲ ಅವರಿಂದ ಶಿವಾನುಭವದ ಭಕ್ತಿಸೇವೆ ಜರುಗಿತು. ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಸೇವೆಗೈದ ಮಹನೀಯರನ್ನು ಆಶೀರ್ವದಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ನಿವೃತ್ತ ಉಪನಿರ್ದೇಶಕ.ಎ.ಎನ್. ನಾಗರಳ್ಳಿ ಸೇರಿದಂತೆ ಇತರರು ಇದ್ದರು. ಬಿ.ವೈ. ಡೊಳ್ಳಿನ ಸ್ವಾಗತಿಸಿದರು. ಶಿವಲಿಂಗಶಾಸ್ತ್ರೀಗಳು ಸಿದ್ದಾಪೂರ ನಿರೂಪಿಸಿದರು. ವಿಶ್ವನಾಥ ಕಮ್ಮಾರ ವಂದಿಸಿದರು.