ಕನ್ನಡಪ್ರಭ ವಾರ್ತೆ ಚಾಮರಾಜನಗರ
ಬಹಳ ವೈವಿಧ್ಯಮಯ ಹಾಗೂ ವಿಭಿನ್ನವಾಗಿರುವ ಸಂಗೀತ, ನೃತ್ಯ, ನಾಟಕ, ಗಮಕ, ಕಥಾಕೀರ್ತನದಂತಹ ಕಲಾ ಪ್ರಕಾರಗಳಿಗೆ ಜೀವ ತುಂಬಿ ಉಳಿಸಿ ಬೆಳೆಸುವ ಗುರುತರ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಡಿವೈಎಸ್‌ಪಿ ಸ್ನೇಹರಾಜ್ ತಿಳಿಸಿದರು.ನಗರದ ಚಾಮರಾಜೇಶ್ವರ ದೇವಸ್ಥಾನದ ಅವರಣದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸಹಯೋಗದೊಂದಿಗೆ ೨ ದಿನಗಳ ಕಾಲ ಆಯೋಜಿಸಿದ್ದ ಮಾಧುರ್ಯ-೨೦೨೬ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಮ್ಮ ಭಾರತ ಕಲೆ, ಸಾಹಿತ್ಯ, ಸಂಸ್ಕೃತಿಯಲ್ಲಿ ಶ್ರೀಮಂತ ದೇಶ. ಈ ಬಗ್ಗೆ ನಮ್ಮ ಮಕ್ಕಳಿಗೆ ಅರಿವು ಇಲ್ಲದಿರುವುದು ಕಂಡುಬರುತ್ತಿದೆ. ಮಕ್ಕಳು ಕೇವಲ ರೀಲ್ಸ್ ನೋಡುವುದರಲ್ಲೇ ಕಾಲ ಕಳೆಯುತ್ತಿರುವುದು ವಿಪರ್ಯಾಸ. ಪೋಷಕರು ಮಕ್ಕಳಿಗೆ ದಿನಕ್ಕೆ ಒಂದೊಂದು ಕಲಾಪ್ರಕಾರ ಹೇಳಿಕೊಟ್ಟರೆ ಕಲೆಗಳಿಗೆ ಜೀವ ಬರಲಿದೆ ಎಂದು ಹೇಳಿದರು.ನಮ್ಮ ದೇಶದ ಭರತನಾಟ್ಯ ಅನೇಕ ದೇಶಗಳಲ್ಲಿ ಕಲಿಯಲು ಜನ ಅಸಕ್ತಿ ತೋರುತ್ತಿದ್ದಾರೆ. ವೀಣೆ, ತಬಲ, ಗೀಟಾರ್, ಹಾರ್ಮೋನಿಯಂ ಗಳಿಂದ ನಾವಿಂದು ದೂರವಾಗುತ್ತಿದ್ದೇವೆ. ದೈನಂದಿನ ಒತ್ತಡ ಕಳೆಯಲು, ಶಾಂತಿ, ನಮ್ಮೆದಿ ಜೀವನಕ್ಕೆ ಸಂಗೀತ, ನೃತ್ಯದಂತಹ ಕಲಾಪ್ರಕಾರಗಳು ಅವಶ್ಯವಾಗಿದೆ ಎಂದು ಸ್ನೇಹರಾಜ್ ಅಭಿಪ್ರಾಯಪಟ್ಟರು.
ಸಮಾರೋಪ ನುಡಿಗಳನ್ನಾಡಿದ ಹಿರಿಯ ಕೀರ್ತನಕಾರರು, ರಾಜ್ಯೋತ್ಸವ ಪ್ರಶಸ್ತಿ ಹಾಗೂ ಕರ್ನಾಟಕ ಕಲಾಶ್ರೀ ಪುರಸ್ಕೃತರಾದ ತುಮಕೂರಿನ ಡಾ. ಲಕ್ಷ್ಮಣದಾಸ್ ಅವರು ಮಾಧುರ್ಯ ಶೀರ್ಷಿಕೆಯಲ್ಲಿ ಅಮೃತ ಸಿಂಚನವಿದೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ಸಂಗೀತ, ನೃತ್ಯ, ಗಮಕ, ಕಥಾಕೀರ್ತನ ಸೇರಿ ೬ಬಗೆಯ ಕಲಾಪ್ರಕಾರಗಳನ್ನು ನಾಡಿನ ಉದ್ದಗಲಕ್ಕೂ ಪ್ರಸ್ತುತಪಡಿಸುತ್ತಿದೆ. ಕಥಾಕೀರ್ತನವು ಭಾರತೀಯ ಸಂಸ್ಕೃತಿ ಹಾಗೂ ಆಧ್ಯಾತ್ಮದ ಸಂಕೀರ್ಣವಾಗಿದೆ. ಎಲ್ಲಾ ದೇವಮಾನವರಿಂದ ಪ್ರಭಾವಿತರಾಗಿದ್ದ ಕಥಾ ಕೀರ್ತನ (ಹರಿಕಥೆ) ಕಲೆಗೆ ಯುಗಯುಗಗಳ ಇತಿಹಾಸವಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಎನ್. ಮುನಿರಾಜು, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯ ಸಂಚಾಲಕರಾದ ಪದ ದೇವರಾಜು, ಅಕಾಡೆಮಿ ಸದಸ್ಯರಾದ ಡಿ.ಆರ್. ರಾಜಪ್ಪ, ನಿರ್ಮಲಾ ಶಾಸ್ತ್ರಿ, ಡಾ. ಮದ್ದೇರಿ ಮುನಿರೆಡ್ಡಿ, ಸಾಹಿತಿ ಡಾ. ಮಹೇಶ್ ಚಿಕ್ಕಲ್ಲೂರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಬಳಿಕ ಮಕ್ಕಳಿಂದ ಭರತನಾಟ್ಯ ಸೇರಿದಂತೆ ಜಾನಪದ ಕಲಾವಿದರಾದ ಸಿ.ಎಂ. ನರಸಿಂಹಮೂರ್ತಿ, ತಂಡದಿಂದ ಭಕ್ತಿ ಭಾವ ಗಾಯನ ಹಾಗೂ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು. ಗಣ್ಯರು ಕಲಾವಿದರಿಗೆ ಪ್ರಮಾಣಪತ್ರ ವಿತರಣೆ ಮಾಡಿದರು.