ವಕೀಲರ ಜವಾಬ್ದಾರಿ ಸಮಾಜದಲ್ಲಿ ಗುರುತರವಾದುದು.
ವಕೀಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಸಿವಿಲ್ ನ್ಯಾಯಾಧೀಶ
ಕನ್ನಡಪ್ರಭ ವಾರ್ತೆ ಹೊನ್ನಾವರವಕೀಲರ ಜವಾಬ್ದಾರಿ ಸಮಾಜದಲ್ಲಿ ಗುರುತರವಾದುದು. ವಕೀಲರ ಕಾನೂನಿನ ಓದು ಮತ್ತು ತಿಳುವಳಿಕೆ ನ್ಯಾಯದಾನಕ್ಕೆ ಇನ್ನಷ್ಟು ವೇಗ ದೊರಕಿಸುತ್ತದೆ ಎಂದು ಹೊನ್ನಾವರ ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಸಿ ಚಂದ್ರಶೇಖರ ಹೇಳಿದರು.
ಹೊನ್ನಾವರ ನ್ಯಾಯಾಲಯದ ಆವರಣದಲ್ಲಿ ವಕೀಲರ ಸಂಘ ಹೊನ್ನಾವರ ಏರ್ಪಡಿಸಿದ ವಕೀಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ವಕೀಲರು ಸತತ ದುಡಿಮೆಯೊಂದಿಗೆ ಉಳಿದ ಸಮಯದಲ್ಲಿ ಕುಟುಂಬದ ಕಾಳಜಿ, ಆರೋಗ್ಯದ ಕಾಳಜಿ ಜೊತೆಗೆ ಮಾನವೀಯ ಕಾಳಜಿಯ ಸಮಾಜ ಮುಖಿ ಚಿಂತನೆಯನ್ನು ಬದುಕಿನಲ್ಲಿ ಅಳವಡಿಕೊಳ್ಳಬೇಕು ಎಂದರು.
ಜೆಎಂಎಫ್‌ಸಿ ನ್ಯಾಯಾಧೀಶ ಈರಣ್ಣ ಹುಣಸಿಕಟ್ಟಿ ಅತಿಥಿಗಳಾಗಿ ಆಗಮಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ವಿ.ಎಂ. ಭಂಡಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ವಕೀಲ ಸಂಘದ ಕಾರ್ಯದರ್ಶಿ ಉದಯ ನಾಯ್ಕ ಚಿತ್ತಾರ, ಹಿರಿಯ ನ್ಯಾಯವಾದಿ ಜಿ.ವಿ. ಭಟ್, ಸುರೇಶ ಅಡಿ ಉಪಸ್ಥಿತರಿದ್ದರು. ವಕೀಲರ ಸಂಘ ಏರ್ಪಡಿಸಿದ ವಿವಿಧ ಸ್ಪರ್ಧೆಗಳ ಬಹುಮಾನ ವಿತರಿಸಲಾಯಿತು. ವಕೀಲರ ಸಂಘ ನವೆಂಬರ್ ತಿಂಗಳಲ್ಲಿ ಏರ್ಪಡಿಸಿದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮೊದಲ ಸ್ಥಾನ ಪಡೆದ ಶಿಕ್ಷಣ ಇಲಾಖೆ ಪರವಾಗಿ ಸುಧೀಶ ನಾಯ್ಕ ಟ್ರೋಫಿ ಪಡೆದುಕೊಂಡರು. ರನ್ನರ್ ಅಪ್ ಪ್ರಶಸ್ತಿ ಹೆಸ್ಕಾಂ ಪರವಾಗಿ ಶ್ರೀಪಾದ ನಾಯ್ಕ ಹಾಗೂ ತಂಡ ಟ್ರೋಫಿ ಪಡೆದುಕೊಂಡರು.
ಖ್ಯಾತ ಹಿಂದೂಸ್ತಾನಿ ಗಾಯಕಿ ವಿದೂಷಿ ವಸುಂಧಾರಾ ಭಟ್ ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಗೌರೀಶ್ ಯಾಜಿ ಹಾರ್ಮೋನಿಯಂ, ಎಂ.ಎಸ್. ಭಟ್ ತಬಲಾ ಸಾಥ್ ನೀಡಿದರು.ವಕೀಲರ ಸಂಘದ ಸದಸ್ಯರಿಂದ ಜಾಂಬವತಿ ಕಲ್ಯಾಣ ಯಕ್ಷಗಾನ ಪ್ರದರ್ಶನಗೊಂಡಿತ್ತು.
ಯಕ್ಷಗಾನದ ಹಿಮ್ಮೇಳದಲ್ಲಿ ಗಣೇಶ ಭಟ್ಟ ಬಾಡ, ಗಣೇಶ ಯಾಜಿ ಇಡಗುಂಜಿ ಮದ್ದಳೆ ಸುಬ್ರಹ್ಮಣ್ಯ ಭಟ್ಟ ಬಾಡ, ಚಂಡೆ ಗಜಾನನ ಹೆಗಡೆ, ಶಾಂತರಾಮ ಮುಮ್ಮೇಳದಲ್ಲಿ ಜಾಂಬವಂತನಾಗಿ ಸತೀಶ ಭಟ್ ಉಳ್ಗೆರೆ, ಬಲರಾಮನಾಗಿ ವಿ.ಎಂ. ಭಂಡಾರಿ, ನಾರದನಾಗಿ ಎ.ಆಯ್. ಹೆಗಡೆ, ಪ್ರಸೇನನಾಗಿ ನಾಗರಾಜ ನಾಯ್ಕ ಗುಂಡಿಬೈಲ್, ದೂತನಾಗಿ ಉತ್ತಮ ಜಿ. ಪಟಗಾರ, ವನಪಾಲಕನಾಗಿ ರಂಗನಾಥ ಭಟ್ಟ, ಆರ್.ಎಸ್. ಕಾಮತ್, ಕೃಷ್ಣನಾಗಿ ನ್ಯಾಯಾಲಯ ಸಿಬ್ಬಂದಿ ನಾಗರಾಜ ವಿಷ್ಣು ನಾಯ್ಕ ಅಂಕೋಲಾ ಪಾತ್ರ ನಿರ್ವಹಿಸಿದರು. ನಂತರವಕೀಲರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.