ಮಹಾ ಸತ್ಸಂಗಕ್ಕೂ ಮೊದಲು ಅಗ್ನಿಹೋತ್ರದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ರಾಜ್ಯದ ವಿವಿಧ ಭಾಗಗಳಿಂದ ಭಕ್ತರು, ಯೋಗಾಸಕ್ತರು ಹಾಗೂ ಪತಂಜಲಿ ಕಾರ್ಯಕರ್ತರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಕನ್ನಡಪ್ರಭ ವಾರ್ತೆ ಹಾಸನ
ಇಂದಿನ ಸಂಕೀರ್ಣ ಸಮಾಜದಲ್ಲಿ ಹಿಂದೂ ಸನಾತನ ಧರ್ಮವನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಮಾನವೀಯತೆಯೊಂದಿಗೆ ವರ್ಗಾಯಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಪತಂಜಲಿ ಯೋಗ ಪೀಠದ ದಕ್ಷಿಣ ಭಾರತ ಪ್ರಭಾರಿ ಸ್ವಾಮಿ ಪರಮಾರ್ಥ ದೇವಜೀ ಹೇಳಿದರು.ನಗರದ ಕೆ.ಆರ್.ಪುರಂನಲ್ಲಿರುವ ಶ್ರೀ ಶಂಕರ ಮಠದಲ್ಲಿ ಪತಂಜಲಿ ಪರಿವಾರ ಕರ್ನಾಟಕದ ವತಿಯಿಂದ ಪೂಜ್ಯ ಸಾದ್ವಿ ದೇವಪ್ರಿಯ ಮಾತಾ ಜೀ ಹಾಗೂ ಪೂಜ್ಯ ಸ್ವಾಮಿ ಪರಮಾರ್ಥ ದೇವ ಜೀ ಅವರ ದಿವ್ಯ ಸಾನ್ನಿಧ್ಯದಲ್ಲಿ ಮಹಾ ಸತ್ಸಂಗ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯೋಗ ಕೇವಲ ದೇಹಾರೋಗ್ಯಕ್ಕೆ ಮಾತ್ರವಲ್ಲ, ಮನಸ್ಸು ಮತ್ತು ಆತ್ಮಶುದ್ಧಿಗೂ ಅವಶ್ಯಕವಾಗಿದೆ. ಸನಾತನ ಧರ್ಮದ ಉಳಿವಿಗಾಗಿ ಯೋಗದೊಂದಿಗೆ ಯೋಗದ ಮಾರ್ಗದಲ್ಲೇ ಸಾಗಬೇಕು ಎಂದು ಕರೆ ನೀಡಿದರು. ಮಾನವೀಯತೆಯೇ ಮನುಷ್ಯನ ಅಸ್ತಿತ್ವದ ಮೂಲ ಎಂದು ತಿಳಿಸಿದ ಸ್ವಾಮಿ ಪರಮಾರ್ಥ ದೇವಜೀ, ಲೋಕದಲ್ಲಿ ಪಶುಸ್ವಭಾವದಂತೆ ಬದುಕುವವರು, ಮನುಷ್ಯರಂತೆ ಬದುಕುವವರು ಹಾಗೂ ದೇವರಂತೆ ಜೀವನ ಸಾಗಿಸುವವರು ಎಂಬ ಮೂರು ರೀತಿಯ ಜನರು ಇರುತ್ತಾರೆ ಎಂದರು.
ಎಲ್ಲರೂ ಸಾಧು, ಸನ್ಯಾಸಿಗಳಾಗಲು ಸಾಧ್ಯವಿಲ್ಲವಾದರೂ, ಉತ್ತಮ ಮನುಷ್ಯರಾಗಿ ಮಾನವೀಯತೆಯಿಂದ ಬದುಕಿದರೆ ಅದೇ ಶ್ರೇಷ್ಠ ಜೀವನ ಎಂದು ಹೇಳಿದರು.ದೇಶದ ಸಂಸ್ಕೃತಿ, ಆಚಾರ- ವಿಚಾರ ಹಾಗೂ ಪರಂಪರೆಯನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು. ಸ್ವದೇಶಿ ಚಿಂತನೆ ಅಳವಡಿಸಿಕೊಂಡು ಬದುಕುವುದರಿಂದ ಅದು ದೊಡ್ಡ ಮಟ್ಟದ ದೇಶಸೇವೆಯೇ ಆಗುತ್ತದೆ ಎಂದು ಸಲಹೆ ನೀಡಿದರು.
ಪರಿಸರ ಸಂರಕ್ಷಣೆಯ ಮಹತ್ವದ ಬಗ್ಗೆ ಮಾತನಾಡಿದ ಅವರು, ನಮ್ಮ ಸುತ್ತಮುತ್ತಲಿನ ಪರಿಸರವನ್ನು ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದ್ದು, ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ನೀಡಬೇಕು, ಮಕ್ಕಳಲ್ಲಿ ದೇಶಪ್ರೇಮ ಬೆಳೆಸಬೇಕೆಂದು ಕರೆ ನೀಡಿದರು.ಈ ಕಾರ್ಯಕ್ರಮದಲ್ಲಿ ಹರಿದ್ವಾರ ಪತಂಜಲಿ ಯೋಗ ಪೀಠದ ಸಾದ್ವಿ ದೇವಪ್ರಿಯಾ ದೀದೀಜಿ ಮಾತನಾಡಿ, ಸಂಘಟನೆಯನ್ನು ಇನ್ನಷ್ಟು ಬಲಪಡಿಸಲು ಎಲ್ಲರೂ ಕೈಜೋಡಿಸಿ ಕೆಲಸ ಮಾಡಬೇಕೆಂದು ಮನವಿ ಮಾಡಿದರು. ದೇಶದ ಸಂಸ್ಕೃತಿ ಮತ್ತು ಆಚಾರ- ವಿಚಾರಗಳನ್ನು ಕಾಪಾಡಿಕೊಂಡು, ಸ್ವದೇಶಿ ಚಿಂತನೆ ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜ ಸದೃಢವಾಗುತ್ತದೆ ಎಂದರು.
ಪತಂಜಲಿ ಯೋಗವನ್ನು ಮನೆಮನೆಗೂ ಹರಡಬೇಕು ಎಂದು ಕರೆ ನೀಡಿದರು.ಮಹಾ ಸತ್ಸಂಗಕ್ಕೂ ಮೊದಲು ಅಗ್ನಿಹೋತ್ರದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ರಾಜ್ಯದ ವಿವಿಧ ಭಾಗಗಳಿಂದ ಭಕ್ತರು, ಯೋಗಾಸಕ್ತರು ಹಾಗೂ ಪತಂಜಲಿ ಕಾರ್ಯಕರ್ತರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಪತಂಜಲಿ ರಾಜ್ಯ ಪ್ರಭಾರಿ ಭವರ್ಲಾಲ್, ರಾಜ್ಯಸಮಿತಿ ಸದಸ್ಯರಾದ ಪರಮೇಶ್ವರ ಸುಪರ್ಣಸ, ಸುರೇಶ್ ಪ್ರಜಾಪತಿ, ಶೇಷಪ್ಪ, ಲೋಕನಾಥ್, ಗಿರೀಶ್, ನಾಗೇಶ್, ಕೇಶವಮೂರ್ತಿ, ನಟರಾಜ್, ಶಾರದಾ, ಮಂಜುಳ, ಪವಿತ್ರ, ಕವಿತಾ, ರೀತಾ, ರೂಪ, ರಾಜ್ಯ ಯಜ್ಞ ಪ್ರಭಾರಿಗಳಾದ, ಹರಿಹರಪುರ ಶ್ರೀಧರ್ ಇತರರು ಉಪಸ್ಥಿತರಿದ್ದರು.