ಸಂವಿಧಾನ ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ: ಸಾಹಿತಿ ಬೆಟ್ಟದೂರು

| Published : Apr 21 2024, 02:24 AM IST

ಸಂವಿಧಾನ ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ: ಸಾಹಿತಿ ಬೆಟ್ಟದೂರು
Share this Article
  • FB
  • TW
  • Linkdin
  • Email

ಸಾರಾಂಶ

ಸಂವಿಧಾನ ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

ಅಂಬೇಡ್ಕರ್ ಜಯಂತಿಯಲ್ಲಿ ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಹೇಳಿಕೆ

ಕನ್ನಡಪ್ರಭ ವಾರ್ತೆ ಕುಕನೂರು

ಸಂವಿಧಾನ ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಹೇಳಿದರು.

ತಾಲೂಕಿನ ಬೆಣಕಲ್ ಗ್ರಾಮದಲ್ಲಿ ಜರುಗಿದ ಡಾ. ಬಿ.ಆರ್. ಅಂಬೇಡ್ಕರ್ 133ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ನಮ್ಮ ದೇಶದಲ್ಲಿ ಎಲ್ಲ ಜಾತಿಯ ಜನರಿಗೂ ತಮ್ಮ ತಮ್ಮ ಸಂಸ್ಕೃತಿ ಉಳಿಸಿಕೊಳ್ಳುವ ಹಕ್ಕಿದೆ. ಭಾರತ ಬಹು ಸಂಸ್ಕೃತಿ, ಬಹು ಭಾಷೆ‌, ಬಹು ಆಹಾರ ಪದ್ಧತಿಯುಳ್ಳ ದೇಶವಾಗಿದೆ. ಒಬ್ಬ ನಾಯಕ ನಾವು ಬಂದಿದ್ದೇ ಸಂವಿಧಾನವನ್ನು ಬದಲಾಯಿಸಲು ಎಂದು ಹೇಳಿಕೆ ನೀಡುವ ಮೂಲಕ ಕೋಮುವಾದಿ ಪಕ್ಷದ ರಹಸ್ಯ ಕಾರ್ಯ ಸೂಚಿ ಬಹಿರಂಗಪಡಿಸಿದ್ದಾರೆ. ಆ ಪಕ್ಷದವರು ಈ ಬಾರಿ ಅವರಿಗೆ ಸ್ಪರ್ಧಿಸಲು ಅವಕಾಶ ತಪ್ಪಿಸಿದ್ದಾರೆ ಎಂದು ಹೇಳಿದರು.

ಸಂವಿಧಾನ ಪೀಠಿಕೆ ಬೋಧಿಸಿದ ದರ್ಪಣ ಸಂಸ್ಥೆಯ ಮುಖ್ಯಸ್ಥ, ಹೈಕೋರ್ಟ್ ವಕೀಲ ಮಂಜುನಾಥ್ ಬಾಗೇಪಲ್ಲಿ ಮಾತನಾಡಿ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನ ಮಹಿಳೆಯರಿಗೆ, ಮಕ್ಕಳಿಗೆ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಉತ್ತಮ ಬದುಕನ್ನು ನೀಡಿದೆ. ಬಾಲ ಕಾರ್ಮಿಕ ನಿಷೇಧ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಪೋಕ್ಸೋ ಕಾಯ್ದೆ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಜನರ ದೌರ್ಜನ್ಯ ತಡೆ ಕಾಯ್ದೆ, ಒಬಿಸಿ ಸೇರಿದಂತೆ ವಿವಿಧ ವಿಶೇಷ ಕಾಯ್ದೆಗಳನ್ನು ನಮ್ಮ ಭಾರತದ ಸಂವಿಧಾನದಿಂದ ತರಲು ಸಾಧ್ಯವಾಯಿತು ಎಂದು ವಿವರಿಸಿದರು.

ಭ್ರಾತೃತ್ವ ಸಮಿತಿಯ ಜಿಲ್ಲಾ ಸಂಚಾಲಕ ಎಸ್.ಎ. ಗಫಾರ್ ಮಾತನಾಡಿ, ಪ್ರತಿಯೊಬ್ಬರೂ ಸಂವಿಧಾನದ ಕುರಿತು ಎಲ್ಲರಿಗೂ ತಿಳಿಸಿಕೊಡುವ ಪ್ರಯತ್ನ ಮಾಡಬೇಕು. ಅಂಬೇಡ್ಕರ್ ಚುನಾವಣೆಯಲ್ಲಿ ಸೋತಾಗ ಪಶ್ಚಿಮ ಬಂಗಾಳದಲ್ಲಿ ಮುಸ್ಲಿಂ ಲೀಗ್ ಪಕ್ಷದಿಂದ ಅವಕಾಶ ಕಲ್ಪಿಸಿ ಚುನಾವಣೆಯಲ್ಲಿ ಗೆಲ್ಲಿಸಲಾಯಿತು. ಇದಕ್ಕೆ ಅಂಬೇಡ್ಕರ್ ಪಡೆದ ಉನ್ನತ ಮಟ್ಟದ ಶಿಕ್ಷಣವೇ ಕಾರಣವಾಗಿದೆ ಎಂದರು.

ಮಹಿಳೆಯರ ಶಿಕ್ಷಣ ಮತ್ತು ಮಹಿಳೆಯರ ಸಬಲೀಕರಣ ಕುರಿತು ಸೌಭಾಗ್ಯ ಎಸ್. ದೊಡ್ಡಮನಿ, ಯಮನೂರು ಬಸವಪ್ರಭು, ಕಾರ್ಯಕ್ರಮ ಸಂಘಟಿಸಿದ್ದ ಭೀಮ್ ಆರ್ಮಿ ಕರ್ನಾಟಕ ಮಿಷನ್ ಜಿಲ್ಲಾಧ್ಯಕ್ಷ ನಿಂಗು ಬೆಣಕಲ್, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾದಿಗ ದಂಡೋರ ಹೋರಾಟ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಜಂಬಣ್ಣ ನಡುವಲಮನಿ ಮುಂತಾದವರು ಮಾತನಾಡಿದರು.

ಬೆಳಗ್ಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಡಾ. ಅಂಬೇಡ್ಕರ್ ಭಾವಚಿತ್ರದ ಮೆರವಣಿಗೆ ಜರುಗಿತು. ಮಂಜುನಾಥ ಬಾಗೇಪಲ್ಲಿ ಸಂವಿಧಾನ ಪೀಠಿಕೆ ಬೋಧಿಸುವ ಮೂಲಕ ಜಯಂತಿಗೆ ಚಾಲನೆ ನೀಡಿದರು.

ಗೌರಿ ಗೋನಾಳ, ಮರಿಯಮ್ಮ ಚೂಡಿ, ಶಶಿಕಲಾ ಮಠದ ತಂಡ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಕುರಿತು ಕ್ರಾಂತಿ ಗೀತೆ ಹಾಡಿದರು. ವೀರೇಶ್ ತೆಗ್ಗಿನಮನಿ, ಭೀಮ್ ಆರ್ಮಿಯ ಮುತ್ತು, ನೀಲಪ್ಪ ದೊಡ್ಡಮನಿ, ಅರ್ಜುನ ದೊಡ್ಡಮನಿ, ಸ್ವಾರೇಪ್ಪ ಭಾವಿಮನಿ ಗ್ರಾಮಸ್ಥರಿದ್ದರು.