ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ದೇಶದಲ್ಲಿ ಪೂಜನೀಯ ಸ್ಥಾನವಿರುವ ಭೂಮಿಯ ಆರಾಧನೆ ಮತ್ತು ಸಂರಕ್ಷಣೆ ಜವಾಬ್ದಾರಿಯನ್ನು ನಮ್ಮ ಮುಂದಿನ ಪೀಳಿಗೆಗೆ ನೀಡಬೇಕಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.ತಾಲೂಕಿನ ಹಲ್ಲೆಗೆರೆ ಗ್ರಾಮದ ಭೂದೇವಿ ಆಧ್ಯಾತ್ಮಿಕ ಕೇಂದ್ರದಲ್ಲಿ ಸ್ಕೋಪ್ ಫೌಂಡೇಷನ್ ಇಂಡಿಯಾ ವತಿಯಿಂದ ಆಯೋಜಿಸಿದ್ದ ಮದರ್ ಅರ್ಥ್ ಡೇ ಸೆಲೆಬ್ರೇಶನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತೀಯ ಸಂಸ್ಕೃತಿಯ ಪರಂಪರೆ ನಿಂತಿರುವುದೇ ಪ್ರಕೃತಿ ಆರಾಧನೆಯಲ್ಲಿ. ಪ್ರಕೃತಿ ಸಂರಕ್ಷಣೆ ಮಾಡಬೇಕಾಗಿರುವುದು ಪ್ರತಿಯೊಬ್ಬ ನಾಗರಿಕರ ಹೊಣೆಯಾಗಿದೆ ಎಂದರು.
ಆಧುನಿಕ ತಂತ್ರಜ್ಞಾನದಲ್ಲಿ ನಾವೆಲ್ಲರೂ ತಲ್ಲೀನರಾಗಿ ನಮ್ಮ ಪೂರ್ವ ಪರಂಪರೆ ಮರೆಯುತ್ತಿದ್ದೇವೆ. ನಮ್ಮ ಪೂರ್ವಜರು ನಂಬಿ ಆರಾಧಿಸಿ ಕೊಂಡು ಬಂದಿರುವ ಭೂಮಿ ಮತ್ತು ಪ್ರಕೃತಿಯನ್ನು ಹಾಳು ಮಾಡುತ್ತಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.ಮನುಷ್ಯ ತನ್ನ ಆಸೆ ಕೂಪಕ್ಕೆ ಬಿದ್ದು ಭೂ ಸಂಪತ್ತನ್ನು ಲೂಟಿ ಮಾಡುತ್ತಿದ್ದಾನೆ. ಪ್ರಕೃತಿಯನ್ನು ವಿನಾಶದತ್ತ ಕೊಂಡೊಯ್ಯುತ್ತಿದ್ದಾನೆ. ಭೂಮಿ ಒಡಲನ್ನು ಎಷ್ಟೇ ಬಗೆದರೂ ಮುನಿ ಸಾಗದೆ ಭೂ ತಾಯಿ ನಮ್ಮ ಎಲ್ಲರನ್ನೂ ತನ್ನ ಮಕ್ಕಳಂತೆ ಆರೈಕೆ ಮಾಡಿಕೊಂಡು ಬರುತ್ತಿದೆ ಎಂದರು.
ವಿದೇಶದಲ್ಲಿದ್ದು ಭಾರತದ ಬಗ್ಗೆ ಗೌರವ ಹೊಂದಿರುವ ಹಲ್ಲೆಗೆರೆ ಮೂರ್ತಿ ಅವರು ಪ್ರಕೃತಿ ಮತ್ತು ಸಂಸ್ಕೃತಿ ಉಳಿಸಿಕೊಂಡು ಬರುತ್ತಿದ್ದಾರೆ. ಇಂತಹವರ ಸೇವೆಯಿಂದ ಮುಂದಿನ ಪೀಳಿಗೆಯ ಭವಿಷ್ಯ ಉಜ್ವಲವಾಗಿ ಪ್ರಜ್ವಲಿಸುತ್ತದೆ ಎಂದರು.ಹಲ್ಲೆಗೆರೆ ಹುಟ್ಟಿ ಇದೇ ಊರಿಗೆ ವಿದೇಶದಲ್ಲಿ ಹೆಸರು ಮಾಡಿರುವ ಹಲ್ಲೆಗೆರೆ ಮೂರ್ತಿಯವರು ಸ್ವಗ್ರಾಮಕ್ಕೆ ಏನಾದರೂ ಕೊಡುಗೆ ನೀಡುವ ಹಂಬಲದೊಂದಿಗೆ ಇಂತಹ ಸೇವೆಯಲ್ಲಿ ತೊಡಗಿರುವುದು ಶ್ಲಾಘನೀಯ. ಇವರು ಇತರರಿಗೂ ಮಾದರಿಯಾಗಿದ್ದಾರೆ. ಇವರ ಸೇವಾಭಾವನೆ ಎಲ್ಲರಲ್ಲಿಯೂ ಬರಲಿ ಎಂದರು.
ನಂತರ ಡಾ.ಆನಂದ್ ಭಟ್ ಮಾತನಾಡಿ, ಸೊಸೈಟಿ ಆಫ್ ಚಿಲ್ಡ್ರನ್ ಪ್ಲಾನೆಟ್ ಆನ್ ಅರ್ಥ್ (SCOPE) ಫೌಂಡೇಷನ್ ವತಿಯಿಂದ ಪ್ರಕೃತಿಗೆ ಮೀಸಲಾಗಿರುವ ಸ್ಮಾರಕವನ್ನು ನಿರ್ಮಾಣ ಮಾಡಲಾಗುತ್ತಿದೆ. ಇಡೀ ವಿಶ್ವದಲ್ಲೇ ಇದೆ ಮೊದಲ ಭೂದೇವಿಗೆ ಸಮರ್ಪಿತವಾದ ಸ್ಮಾರಕವಾಗಿ ನಿರ್ಮಾಣಗೊಳ್ಳಲಿದೆ. ಮುಂದೆ ಇದೊಂದು ಐತಿಹಾಸಿಕ ಸ್ಮಾರಕವಾಗಿ ಗುರುತಿಸಿಕೊಳ್ಳಲಿದೆ ಎಂದರು.ಸ್ಕೋಪ್ (SCOPE ) ಫೌಂಡೇಷನ್ ಮೂಲತಃ ಅನೇಕ ಸಮಾಜಮುಖಿ ಕೆಲಸಗಳನ್ನು ಹಲ್ಲೆಗೆರೆ ಮೂರ್ತಿ ಅವರು ನಡೆಸಿಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಹಲ್ಲೆಗೆರೆಯಲ್ಲಿ ಆರೋಗ್ಯ ಕೇಂದ್ರ ತೆರೆಯಲು ಚಿಂತನೆ ನಡೆಸಲಾಗಿದೆ. ಭೂಮಿ ಸ್ಮಾರಕ ಪ್ರವಾಸೋದ್ಯಮ ಪಟ್ಟಿಗೆ ಸೇರಿದ ನಂತರ ಸ್ಥಳೀಯವಾಗಿ ಆರ್ಥಿಕ ಚಟುವಟಿಕೆಗಳು ಹೆಚ್ಚಾಗುತ್ತಿವೆ ಎಂದರು.
ಸ್ಕೋಪ್ ಫೌಂಡೇಷನ್ ಸಂಸ್ಥಾಪಕ ಮೂರ್ತಿ ಮಾತನಾಡಿ, ಜಗತ್ತಿನಾದ್ಯಂತ ನಾವೆಲ್ಲರೂ ದೇಶ, ರಾಜ್ಯ, ಜಾತಿ, ಧರ್ಮ ಎಂದು ವಿಕೇಂದ್ರೀಕರಣಗೊಂಡಿದ್ದೇವೆ. ವಾಸ್ತವವೇನೆಂದರೆ ನಾವೆಲ್ಲರೂ ಮನುಷ್ಯರು. ನಮ್ಮೆಲ್ಲರ ತಾಯಿ ಒಬ್ಬಳೆ ಅದೇ ಭೂಮಿ ತಾಯಿ ಎಂದರು.ಭೂ ತಾಯಿಯ ಪ್ರೀತಿ ಸಹನೆ ಅನುಕಂಪ ಗಮನಿಸದೆ ಭೂಮಿಯ ಖನಿಜ ಸಂಪತ್ತನ್ನು ಲೂಟಿ ಮಾಡಲು ನಿಂತಿದ್ದೇವೆ. ಭೂದೇವಿ ಆಧ್ಯಾತ್ಮಿಕ ಕೇಂದ್ರ ಸ್ಥಾಪಿಸಿದ ನಂತರ ಭೂಮಿಯ ಸಹನೆ, ಕೊಡುಗೆಯ ನೈಸರ್ಗಿಕ ಸಂಪತ್ತುಗಳಾದ ಗಾಳಿ, ನೀರು, ಬೆಳಕುಗಳ ಮೌಲ್ಯವನ್ನು ಪಸರಿಸುತ್ತೇವೆ. ತಾಯಿಯ ಸಂರಕ್ಷಣೆ ಕುರಿತಾಗಿ ಜಾಗೃತಿ ಮೂಡಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಹೈಕೋರ್ಟ್ ಹಿರಿಯ ವಕೀಲ ಚಂದ್ರಮೌಳಿ, ಜಾನಪದ ಕಲಾವಿದ ಡಾ.ಕಾ.ರಮೇಶ್ವರಪ್ಪ, ಸಿಂಡಿಕೇಟ್ ಮಾಜಿ ಸದಸ್ಯ ಎಚ್.ಎ.ವೆಂಕಟೇಶ್, ತಾಪಂ ಮಾಜಿ ಅಧ್ಯಕ್ಷ ತ್ಯಾಗರಾಜು ಸೇರಿದಂತೆ ಹಲವರು ಭಾಗವಹಿಸಿದ್ದರು.