ಸಾರಾಂಶ
ಬೆಂಗಳೂರು : ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಬಹುತೇಕ ಪೂರ್ಣಗೊಳ್ಳುವ ಹಂತ ತಲುಪಿದೆ. ಏಪ್ರಿಲ್ ಎರಡನೇ ವಾರ ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ.
ಮಾ.1ರಿಂದ 20ರವರೆಗೆ ರಾಜ್ಯಾದ್ಯಂತ 1,771 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಪಿಯು ಪರೀಕ್ಷೆಗೆ ಒಟ್ಟು 7 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿ ಪರೀಕ್ಷೆ ಬರೆದಿದ್ದರು. ಪರೀಕ್ಷೆ ಮುಗಿದ ಮರುದಿನದಿಂದಲೇ ರಾಜ್ಯಾದ್ಯಂತ 76 ಕೇಂದ್ರಗಳಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಮೌಲ್ಯಮಾಪಕರು ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಸಿದ್ದಾರೆ. ಇನ್ನು ಒಂದೆರಡು ದಿನಗಳಲ್ಲಿ ಬಾಕಿ ವಿಷಯಗಳ ಮೌಲ್ಯಮಾಪನ ಕಾರ್ಯವೂ ಮುಕ್ತಾಯಗೊಳ್ಳಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ(ಕೆಎಸ್‌ಇಎಬಿ) ಮೂಲಗಳು ಮಾಹಿತಿ ನೀಡಿವೆ.
ಏ.3ರ ವೇಳೆಗೆ ಮೌಲ್ಯಮಾಪನ ಪೂರ್ಣಗೊಳ್ಳಲಿದೆ. ನಂತರ ಎಂಟರಿಂದ ಹತ್ತು ದಿನಗಳಲ್ಲಿ ಫಲಿತಾಂಶದ ಕಂಪ್ಯೂಟರೀಕರಣ ಕಾರ್ಯ ನಡೆಯಲಿದೆ. ನಮ್ಮ ಲೆಕ್ಕಾಚಾರದಂತೆ ಈ ಕಾರ್ಯ ಪೂರ್ಣಗೊಂಡರೆ ಏಪ್ರಿಲ್ ಎರಡನೇ ವಾರದ ಆರಂಭದ ದಿನಗಳಲ್ಲೇ ಫಲಿತಾಂಶ ಪ್ರಕಟಿಸಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.
11ರಿಂದ ಎಸ್ಸೆಸ್ಸೆಲ್ಸಿ ಮೌಲ್ಯಮಾಪನ:
ಇನ್ನು, ಮಾ.21ರಿಂದ ಆರಂಭಗೊಂಡಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಏ.4ರಂದು ಮಕ್ತಾಯಗೊಳ್ಳಲಿವೆ. ನಂತರ ಏ.11ರಿಂದ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕೆಎಸ್‌ಇಎಬಿ ಅಧಿಕಾರಿಗಳು ಹೇಳಿದ್ದಾರೆ.