ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಸಮಾಜದಲ್ಲಿ ಸ್ಥಿತಿವಂತರು ದಾನ ಧರ್ಮ ಮಾಡುವ ಮನೋಭಾವನೆ ಬೆಳೆಸಿಕೊಂಡು ಬಡವರು ಹಾಗೂ ನೊಂದ ಜನರ ಕಣ್ಣೀರನ್ನು ಒರೆಸಲು ಪ್ರಾಮಾಣಿಕ ಕೆಲಸ ಮಾಡಬೇಕು ಎಂದು ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಕರೆ ನೀಡಿದರು.ತಾಲೂಕಿನ ಗಂಜೀಗೆರೆ ಗ್ರಾಮದ ನೇತಾಶಿ ಪಬ್ಲಿಕ್ ಶಾಲೆಯ ಆವರಣದಲ್ಲಿ ಉದ್ಯಮಿ ಹಾಗೂ ಜಯಕೀರ್ತಿ ಚಾರಿಟಬಲ್ ಟ್ರಸ್ಟಿನ ಸಂಸ್ಥಾಪಕ ಅಧ್ಯಕ್ಷ ರಾಜೇನಹಳ್ಳಿ ರೇವಣ್ಣ ಆಯೋಜಿಸಿದ್ದ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಿ ಮಾತನಾಡಿದರು.
ನಾನು ಬಡತನದಿಂದ ಹುಟ್ಟೂರನ್ನು ಬಿಟ್ಟು ದೂರದ ಮುಂಬೈ ನಗರಕ್ಕೆ ಹೊಟ್ಟೆಪಾಡಿಗಾಗಿ ಹೋದವನು. ಕಷ್ಟ ಪಟ್ಟು ಉದ್ಯಮಿಯಾಗಿ ಬೆಳೆದು ಅನಿರೀಕ್ಷಿತವಾಗಿ ರಾಜಕಾರಣಕ್ಕೆ ಬಂದವನು. ಜನರ ಅಶೀರ್ವಾದದಿಂದ ಶಾಸಕನಾಗಿ ಮತ್ತು ರಾಜ್ಯದ ಸಚಿವನಾಗಿ ಸೇವೆ ಸಲ್ಲಿಸುವ ಅವಕಾಶ ನನಗೆ ದೊರಕಿತ್ತು ಎಂದರು.ನಾವು ಎಷ್ಟೇ ಎತ್ತರಕ್ಕೆ ಬೆಳೆದರೂ ನಮ್ಮ ಹುಟ್ಟೂರಿನ ಜನರ ನಡುವೆ ಸಿಗುವ ಸ್ಥಾನ ಗೌರವಗಳು ಎಲ್ಲಕ್ಕಿಂತ ದೊಡ್ಡದು. ನಾನು ಮುಂಬೈನಲ್ಲಿ ಎಷ್ಟೇ ಸಮಾಜ ಸೇವೆ ಮಾಡಿದರೂ ಅಲ್ಲಿ ನಾನು ಕೇವಲ ನಾರಾಯಣಗೌಡ ಮಾತ್ರ ಆಗಿದ್ದೆ. ಆದರೆ, ನನ್ನ ಕ್ಷೇತ್ರದಲ್ಲಿ ಜನ ನನ್ನನ್ನು ನಮ್ಮ ನಾರಾಯಣಗೌಡ ಎಂದು ಕರೆಯುತ್ತಾರೆ. ಇದಕ್ಕಿಂತ ದೊಡ್ಡ ಪದವಿ ನನಗೆ ಅಗತ್ಯವಿಲ್ಲ ಎಂದರು.
ರಾಜ್ಯ ಮಟ್ಟದ ವಾಲಿಬಾಲ್ ಆಟಗಾರನಾಗಿದ್ದ ರಾಜೇನಹಳ್ಳಿ ರೇವಣ್ಣ ದೊಡ್ಡ ಉದ್ಯಮಿಯಾಗಿ ಬೆಳೆದು ನಿಂತಿದ್ದಾರೆ. ಅವರು ತಮ್ಮ ಹುಟ್ಟೂರಿನ ಮಣ್ಣಿನಲ್ಲಿ ಸಮಾಜ ಸೇವೆಗೆ ಮುಂದಾಗಿರುವುದು ಸ್ವಾಗತಾರ್ಹ ಎಂದರು.ಲೇಖಕ ಸತೀಶ್ ಜವರೇಗೌಡ ಮಾತನಾಡಿ, ದೇಶದಲ್ಲಿಂದು ಬಡ ಜನರಿಗೆ ಉಚಿತವಾಗಿ ಶಿಕ್ಷಣ ಮತ್ತು ಆರೋಗ್ಯ ಸೇವೆಗಳು ದೊರಕಬೇಕು. ಆದರೆ, ಈ ಎರಡೂ ಕ್ಷೇತ್ರಗಳು ಖಾಸಗೀಕರಣದ ಹಿಡಿತಕ್ಕೆ ಸಿಲುಕಿ ಬಡಜನರ ಕೈಗೆ ಎಟುಕದಂತಾಗಿವೆ ಎಂದು ವಿಷಾದಿಸಿದರು.
ಜಯಕೀರ್ತಿ ಚಾರಿಟಬಲ್ ಟ್ರಸ್ಟಿನ ಸಂಸ್ಥಾಪಕ ಅಧ್ಯಕ್ಷ ರಾಜೇನಹಳ್ಳಿ ರೇವಣ್ಣ ಮಾತನಾಡಿ, ಗ್ರಾಮೀಣ ಜನರ ಸಂಕಷ್ಟ ನನಗೆ ತಿಳಿದಿದೆ. ಇಲ್ಲಿ ಹುಟ್ಟಿ ಬೆಳೆದಿದ್ದರಿಂದ ಸಂಪಾದಿಸಿದ ಹಣದ ಕೆಲವು ಭಾಗ ಸಮಾಜಸೇವೆಗೆ ಮೀಸಲಿಡಬೇಕೆಂದು ನಿಶ್ಚಯಿಸಿ ಪ್ರತಿವರ್ಷ ಇಂತಹ ಶಿಬಿರಗಳನ್ನು ನಡೆಸುತ್ತಿದ್ದೇನೆ ಎಂದರು.ಇದೇ ವೇಳೆ ರಂಗಸ್ಥಳ ಕನ್ನಡ ಚಲನಚಿತ್ರದ ನಾಯಕ ನಟ ಅನ್ವಿತ್ ರಾಜ್ ಹಾಗೂ ನಾಯಕಿ ಶಿಲ್ಪಾ ಕಾಮತ್, ಪತ್ರಕರ್ತರಾದ ಎಂ.ಕೆ.ಹರಿಚರಣತಿಲಕ್, ಬಳ್ಳೇಕೆರೆ ಮಂಜುನಾಥ್, ಬಲ್ಲೇನಹಳ್ಳಿ ಮಂಜುನಾಥ್, ಕೆ.ಆರ್. ನೀಲಕಂಠ, ಹೊಸಹೊಳಲು ರಘು, ವೈದ್ಯಾಧಿಕಾರಿ ಡಾ. ವಿನಯ್, ಪೊಲೀಸ್ ಇನ್ಸ್ ಪೆಕ್ಟರ್ ಆನಂದೇಗೌಡ, ವಿಶ್ರಾಂತ ಶಿಕ್ಷಕ ಅಂಚಿ ಸಣ್ಣಸ್ವಾಮೀಗೌಡ, ಉಪನ್ಯಾಸಕ ನರಸೇಗೌಡ, ಪ್ರಗತಿಪರ ರೈತರಾದ ಮುದುಗೆರೆ ರಾಜೇಗೌಡ, ರಮೇಶ್, ಮಾವಿನಕೆರೆ ಗೋವಿಂದೆಗೌಡ, ವಿಠಲಾಪುರ ಸುಬ್ಬೆಗೌಡ, ವಿ. ಡಿ.ಹರೀಶ್, ಸಾಹಿತಿ ಸತೀಶ್ ಜವರೇಗೌಡ, ರಂಗಭೂಮಿ ಕಲಾವಿದ ಮಾಂಬಳ್ಳಿ ಸ್ವಾಮೀಗೌಡ, ಶಿಕ್ಷಣ ತಜ್ಞ ನಿರಂಜನ, ಗಂಜಿಗೆರೆ ಗ್ರಾಪಂ ಅಧ್ಯಕ್ಷ ಪರಮೇಶ್, ಪಿಡಿಒ ಗೀತಾ ಅವರಿಗೆ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಈ ವೇಳೆ ಜಯಕೀರ್ತಿ ಚಾರಿಟಬಲ್ ಸಂಸ್ಥೆ ಕಾರ್ಯದರ್ಶಿ ಚಂದ್ರಮತಿ ರೇವಣ್ಣ, ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ರಾಜೇನಹಳ್ಳಿ ಪದ್ಮೇಶ್ ಸೇರಿದಂತೆ ಹಲವು ಗಣ್ಯರು ಇದ್ದರು.