ಸಾರಾಂಶ
ಸದಾಶಿವ ಆಯೋಗದಲ್ಲಿ ಉಲ್ಲೇಖಿಸಿ ರುವ 101 ಉಪಜಾತಿಗಳು ಈಗ 184ಕ್ಕೆ ಏರಿರುವುದರಿಂದ ಮತ್ತೊಮ್ಮೆ ವೈಜ್ಞಾನಿಕ ವರದಿಯನ್ನು ಉಪಜಾತಿಗಳೊಂದಿಗೆ ಸ್ಪಷ್ಟವಾಗಿ ನಮೂದಿಸಿ ಜಾರಿಗೊಳಿಸಬೇಕಾಗಿದೆ ಎಂದು ರಾಜ್ಯ ಬಲಗೈ ಹೊಲೆಯ ಸಂಬಂಧಿತ ಜಾತಿಗಳ ಒಳ ಮೀಸಲಾತಿ ಹೋರಾಟ ಸಮಿತಿ ಅಭಿಪ್ರಾಯಪಟ್ಟಿದೆ.
ಕನ್ನಡಪ್ರಭ ವಾರ್ತೆ, ಬೀದರ್
ಬೆಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಒಳ ಮೀಸಲಾತಿ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಬಲಗೈ ಹೊಲೆಯ ಸಂಬಂಧಿತ ಜಾತಿಗಳ ಒಳ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾ ಅಧ್ಯಕ್ಷ ಮಾರುತಿ ಬೌದ್ಧೆ ತಿಳಿಸಿದರು.ಅವರು ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ ಬಳಿ ಇರುವ ವಸಂತನಗರ ಬಡಾವಣೆಯ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಅಂದು ಭಾನುವಾರ ಬೆಳಿಗ್ಗೆ 11.30ಕ್ಕೆ ಕಾರ್ಯಕ್ರಮ ನಡೆಯಲಿದ್ದು, ಪರಿಶಿಷ್ಟ ಜಾತಿ ಒಳ ಮೀಸಲಾತಿ ಏಕ ಸದಸ್ಯತ್ವ ವಿಚಾರಣಾ ಆಯೋಗದ ಅಧ್ಯಕ್ಷರಾದ ನ್ಯಾ.ನಾಗಮೋಹನ್ ದಾಸ್ ಅವರು ಭಾಗವಹಿಸಿ ಮನವಿ ಪತ್ರ ಸ್ವೀಕರಿಸಲು ಒಪ್ಪಿರುತ್ತಾರೆ ಎಂದು ತಿಳಿಸಿದರು.ಸಮಿತಿ ಉಪಾಧ್ಯಕ್ಷ ವಿಠಲದಾಸ ಪ್ಯಾಗೆ ಮಾತನಾಡಿ, ಮಾದಿಗ ಸಮುದಾಯದ ಸಂಘಟನೆಗಳು ಮತ್ತು ಮುಖಂಡರುಗಳು ನ್ಯಾ.ಸದಾಶಿವ ಆಯೋಗದ ವರದಿಯನ್ನು ಮೇಲೆ ತಕ್ಷಣವೇ ಜಾರಿಗೆ ತರ ಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಆದರೆ, ಬಲಗೈ ಸಮುದಾಯದ ಮುಖಂಡರು ಮತ್ತು ಸಂಘಟನೆಗಳು ಸದಾಶಿವ ಆಯೋಗದ ವರದಿ ಆಧಾರದ ಮೇಲೆ ಒಳ ಮೀಸಲಾತಿ ಜಾರಿಗೆ ತರುವುದು ಬೇಡ ಎಂದು ಆಗ್ರಹಿಸಿವೆ ಎಂದರು. ಈ ವರದಿಯಲ್ಲಿರುವ ದತ್ತಾಂಶ ಅಂಕಿ ಅಂಶಗಳು ತಪ್ಪು ಮಾಹಿತಿಯಿಂದ ಕೂಡಿದ್ದು, ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಎಂಬ ಉಪಜಾತಿಗಳ ಶೀರೋನಾಮೆಯಡಿ ದಕ್ಷಿಣ ಕರ್ನಾಟಕ, ಮಧ್ಯ ಕರ್ನಾಟಕ, ಉತ್ತರ ಕರ್ನಾಟಕ ಮತ್ತು ಕರಾವಳಿ ಕರ್ನಾಟಕದ ಭಾಗಗಳಲ್ಲಿ ಪರಸ್ಪರ ಏರುಪೇರು ಆಗಿದೆಯೆಂದು, ಮತ್ತು ಈ ಆಯೋಗದಲ್ಲಿ ಉಲ್ಲೇಖಿಸಿರುವ 101 ಉಪಜಾತಿಗಳು ಈಗ 184ಕ್ಕೆ ಏರಿರುವುದರಿಂದ ಮತ್ತೊಮ್ಮೆ ವೈಜ್ಞಾನಿಕ ವರದಿಯನ್ನು ಉಪಜಾತಿಗಳೊಂದಿಗೆ ಸ್ಪಷ್ಟವಾಗಿ ನಮೂದಿಸಿ ಜಾರಿಗೊಳಿಸಬೇಕಾಗಿದೆ ಎಂದರು.ಬಲಗೈ ಸಮುದಾಯವು ಎಲ್ಲಾ ಸೌಲಭ್ಯ ಪಡೆದಿರುವುದೆಂದು ಹಿಂದಿನ ಬಿಜೆಪಿ ಸರ್ಕಾರದ ಸಚಿವ ಸಂಪುಟ ಉಪ ಸಮಿತಿ ಅಧ್ಯಕ್ಷರಾಗಿದ್ದ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ತಮ್ಮ ವರದಿಯಲ್ಲಿ ಹೇಳಿರು ವುದು ಅವೈಜ್ಞಾನಿಕವಾಗಿದೆ. ನ್ಯಾ. ಎ.ಜಿ.ಸದಾಶಿವ ಆಯೋಗದ ವರದಿಯನ್ನು ಸಹ ಬೊಮ್ಮಾಯಿ ಸರ್ಕಾರ ಸಾರಾಸಗಾಟವಾಗಿ ತಿರಸ್ಕರಿಸಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಚಿವ ಸಂಪುಟದ ಉಪ ಸಮಿತಿ ತನ್ನದೇ ಆದ ಸೂತ್ರದ ಪ್ರಕಾರ ಪರಿಶಿಷ್ಟ ಜಾತಿಗಳನ್ನು (ಎಸ್‌ಸಿ) ವರ್ಗೀಕರಣ ಮಾಡಿ ಬಲಗೈ ಸಮಾಜಕ್ಕೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.ಇನ್ನು, ರಾಜ್ಯ ಬಲಗೈ ಹೊಲೆಯ ಸಂಬಂಧಿತ ಜಾತಿಗಳ ಒಳ ಮೀಸಲಾತಿ ಹೋರಾಟ ಸಮಿತಿ ಗೌರವಾಧ್ಯಕ್ಷ ಡಾ.ಕಾಶಿನಾಥ ಚಲುವಾ ಮಾತನಾಡಿ, ಹಾಲಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ನ್ಯಾ. ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಒಳಮೀಸಲಾತಿ ಏಕಸದಸ್ಯ ವಿಚಾರಣಾ ಆಯೋಗವನ್ನು ನೇಮಿಸಿದೆ, ಈ ಆಯೋಗ ಒಳ ಮೀಸಲಾತಿ ಹಂಚಿಕೆಯಲ್ಲಿ ಯಾವ ಸಮುದಾಯಕ್ಕೂ ಅನ್ಯಾಯವಾಗದಂತೆ ವರದಿ ತಯಾರಿಸಲಿ ಎಂದು ನಮ್ಮ ಸಮಿತಿ ಮನವಿ ಮಾಡುತ್ತದೆ ಎಂದರು.ಸಮಿತಿಯ ಪ್ರಧಾನ ಕಾರ್ಯದರ್ಶಿ ಮಹೇಶ ಗೋರನಾಳಕರ್, ಉಪಾಧ್ಯಕ್ಷ ಮಹಾಲಿಂಗ ಬೆಲ್ದಾಳ, ಗಂಗಮ್ಮ ಫುಲೆ, ಜಿಲ್ಲಾ ಸಹ ಕಾರ್ಯದರ್ಶಿ ರಾಜಪ್ಪ ಗುನ್ನಳ್ಳಿಕರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಿನಯ ಮಾಳಗೆ, ಖಜಾಂಚಿ ದಶರಥ ಗುರು, ಯುವ ಮುಖಂಡರಾದ ಸುಂದರ್, ಶ್ರೀಧರ ಸೋಮನೋರ್ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿದ್ದರು.