ಮಹದೇವಪ್ಪ ಎಂ. ಸ್ವಾಮಿಶಿರಹಟ್ಟಿ: ಮಳೆಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ರೈತರ ಮೊಗದಲ್ಲಿ ಸಂತಸ ಮೂಡಿದ್ದು, ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಬುಧವಾರ ಮಧ್ಯಾಹ್ನ ರಭಸದ ಮಳೆ ಸುರಿದಿದ್ದು, ಮುಂಗಾರು ಬಿತ್ತನೆಗೆ ಅನ್ನದಾತರು ಸಜ್ಜಾಗಿದ್ದಾರೆ.ತಾಲೂಕಿನ ಕಡಕೋಳ, ಜಲ್ಲಿಗೇರಿ, ಕುಸ್ಲಾಪುರ, ಮಾಚೇನಹಳ್ಳಿ, ವರವಿ ಸೇರಿದಂತೆ ಇನ್ನೂ ಹತ್ತಾರು ಗ್ರಾಮಗಳಲ್ಲಿ ರಭಸದ ಮಳೆ ಸುರಿದಿದ್ದು, ಕಳೆದ ಹತ್ತಾರು ದಿನಗಳಿಂದ ರೈತಾಪಿ ಜನರು ಬಿರು ಬಿಸಿಲನ್ನು ಲೆಕ್ಕಿಸದೇ ಭೂಮಿಯನ್ನು ಜಾನುವಾರು, ಟ್ರ್ಯಾಕ್ಟರ್‌ಗಳ ಮೂಲಕ ರಂಟೆ, ಕುಂಟೆಯಿಂದ ಹದಗೊಳಿಸಿ ಕುರಿ, ಮೇಕೆ, ಜಾನುವಾರುಗಳ ಗೊಬ್ಬರ ಹಾಕಿ ಭೂಮಿಯನ್ನು ಫಲವತ್ತಾಗುವಂತೆ ಬಿತ್ತನೆಗೆ ಸಜ್ಜುಗೊಳಿಸಿದ್ದರು.ಇದ್ದ ತೇವಾಂಶದಲ್ಲಿಯೇ ಹೆಸರು ಬಿತ್ತನೆ ಅವಧಿ ಮುಗಿಯುತ್ತದೆ ಎಂದು ರೈತರು ಕಳೆದ ಎರಡು ಮೂರು ದಿನಗಳಿಂದ ಬಿತ್ತನೆ ಮಾಡಿದ್ದರು. ರಣಬಿಸಿಲಿಗೆ ಮೊಳಕೆಯೊಡೆದ ಹೆಸರು ಕಮರುವ ಸಾಧ್ಯತೆ ಇದೆ ಎಂದು ಚಿಂತಿಸುತ್ತಿದ್ದ ಕೆಲ ರೈತರು ಬುಧವಾರ ಸುರಿದ ಮಳೆಯಿಂದ ಸಂತಸಗೊಂಡಿದ್ದು, ಇನ್ನೂ ಅನೇಕ ರೈತರು ಬಿತ್ತನೆಗೆ ಹದವಾದ ಮಳೆಯಾಗಿದ್ದು, ಬಿತ್ತನೆಗೆ ಸಜ್ಜಾಗಿದ್ದಾರೆ. ಬುಧವಾರ ಸಂಜೆವರೆಗೂ ಕೂಡ ದಟ್ಟವಾದ ಮೋಡ ಕವಿದ ವಾತಾವರಣ ಮುಂದುವರಿದಿತ್ತು. ಮಳೆ ಬರುವ ಎಲ್ಲ ಸಾಧ್ಯತೆ ಕೂಡ ಮುಂದುವರಿದಿತ್ತು. ಗ್ರಾಮೀಣ ಪ್ರದೇಶದಲ್ಲಿಯೂ ಸಂಜೆಯವರೆಗೂ ಮಳೆ ಮುಂದುವರಿದಿತ್ತು. ಒಟ್ಟಾರೆ ರೋಹಿಣಿ ಮಳೆ ಸಮಯಕ್ಕೆ ಸರಿಯಾಗಿ ಸುರಿದಿದ್ದು, ರೈತರು ಖುಷಿಯಿಂದ ಬಿತ್ತನೆಗೆ ಮುಂದಾಗುತ್ತಿದ್ದಾರೆ.
ಕಳೆದೆರಡು ದಿನಗಳಿಂದ ತುಂತುರು ಮಳೆ ಸುರಿದು ಅಲ್ಪ- ಸ್ವಲ್ಪ ಭೂಮಿ ತಂಪಾಗಿತ್ತು. ಬುಧವಾರ ಮಧ್ಯಾಹ್ನ ಸುರಿದ ಮುಂಗಾರು ಪೂರ್ವ ರಭಸದ ಮಳೆಗೆ ಜಮೀನುಗಳಲ್ಲಿ ಮಳೆ ನೀರು ಹರಿದಾಡಿದ್ದರಿಂದ ಅನ್ನದಾತರ ಮೊಗದಲ್ಲಿ ಸಂತಸವಾಗಿದೆ. ಕೆಲಹೊತ್ತು ರಸ್ತೆ ಮೇಲೆ ನೀರು ಹರಿದು ಪಾದಚಾರಿಗಳು ಸಂಚಾರಕ್ಕೆ ತೊಂದರೆಯಾಯಿತು. ಇತ್ತ ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರದಲ್ಲಿ ನೂರಾರು ಜನ ರೈತರು ಹೆಸರು, ತೊಗರಿ ಬೀಜ ಖರೀದಿಗೆ ಮುಗಿಬಿದ್ದರು.ಹದಭರಿತ ಮಳೆ: ಬುಧವಾರ ತಾಲೂಕಿನ ಜಲ್ಲಿಗೇರಿ, ಜಲ್ಲಿಗೇರಿ ತಾಂಡಾ ಸೇರಿದಂತೆ ಸುತ್ತಲಿನ ಅನೇಕ ಗ್ರಾಮಗಳಲ್ಲಿ ಹದಭರಿತ ಮಳೆ ಸುರಿದಿದ್ದು, ಬಿತ್ತನೆಗೆ ರೈತರು ಸಜ್ಜಾಗಿದ್ದಾರೆ. ಕೃಷಿ ಇಲಾಖೆ ಹಾಗೂ ರಸಗೊಬ್ಬರ ಮಾರಾಟಗಾರರು ಸಕಾಲಕ್ಕೆ ಬೀಜ, ರಸಗೊಬ್ಬರ ನೀಡಬೇಕು. ರೈತರಿಗೆ ಕೃಷಿ ಚಟುವಟಿಕೆಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಇಲಾಖೆ ಅಧಿಕಾರಿಗಳು ಮತ್ತು ರಸಗೊಬ್ಬರ ಮಾರಾಟಗಾರರು ಎಚ್ಚರ ವಹಿಸಬೇಕು ಎಂದು ಜಲ್ಲಿಗೇರಿ ತಾಂಡಾದ ರೈತ ವೀರೇಶ ಲಮಾಣಿ ತಿಳಿಸಿದರು.