ಹಾವೇರಿ: ಆಧುನಿಕ ಆರ್ಥಿಕ ವ್ಯವಸ್ಥೆಯಲ್ಲಿ ಬ್ಯಾಂಕಿಂಗ್ ಕ್ಷೇತ್ರದ ಪಾತ್ರ ಬಹುಮುಖ್ಯವಾಗಿದೆ. ಬ್ಯಾಂಕಿನ ಬಗ್ಗೆ ಗ್ರಾಹಕರಿಗೆ ನಂಬಿಕೆ ಮತ್ತು ವಿಶ್ವಾಸಾರ್ಹತೆ ಬರಬೇಕಾದರೆ ಉತ್ತಮ ಸೇವೆ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಹೇಳಿದರು. ನಗರದ ಹಾನಗಲ್ಲ ರಸ್ತೆಯಲ್ಲಿ ನೂತನವಾಗಿ ಪ್ರಾರಂಭಿಸಿದ ನವೀಕರಣಗೊಂಡ ಬ್ಯಾಂಕ್ ಆಫ್ ಇಂಡಿಯಾ ಶಾಖೆಯನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ಜಗತ್ತಿನಲ್ಲಿ ಆರ್ಥಿಕ ಪರಿಸ್ಥಿತಿ ಸದೃಢವಾಗಿರಬೇಕಾದರೆ ಅಲ್ಲಿನ ಬ್ಯಾಂಕಿಂಗ್ ವ್ಯವಸ್ಥೆ ಕೂಡ ಚೆನ್ನಾಗಿ ಇರಬೇಕಾಗುತ್ತದೆ. ಆರ್ಥಿಕ ಚಟುವಟಿಕೆ ನಡೆಸಲು ಬಂಡವಾಳ ಹೂಡಿಕೆ ಬಹಳ ಮುಖ್ಯ. ಬಂಡವಾಳ ಸೃಷ್ಟಿ ಮಾಡಲು ಅವಕಾಶ ಸಿಗಬೇಕು. ಹಾನಗಲ್ಲ ರಸ್ತೆಯ ಪಕ್ಕದಲ್ಲೇ ಗ್ರಾಹಕರಿಗೆ ಬ್ಯಾಂಕಿನ ಒಳ್ಳೆಯ ಸೇವೆ ಒದಗಿಸಲು ಅನುಕೂಲಕರ ವಾತಾವರಣ ಸೃಷ್ಟಿಸಲಾಗಿದೆ. ಸಾಲ ಕೊಡುವುದು, ತೆಗೆದುಕೊಳ್ಳುವುದು ಹೊಸ ಪದ್ಧತಿ ಅಲ್ಲ, ಹಿಂದಿನಿಂದಲೂ ಬಂದಿರುವ ಪದ್ಧತಿಯಾಗಿದೆ. ಈ ನಿಟ್ಟಿನಲ್ಲಿ ಬ್ಯಾಂಕಿನ ಸಹೋದ್ಯೋಗಿಗಳು ತನ್ನ ಗ್ರಾಹಕರಿಗೆ ಸಾಲ ಸೌಲಭ್ಯ ನೀಡಿ ಉತ್ತಮ ಸೇವೆ ಮಾಡಬೇಕು ಎಂದರು.ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಬ್ಯಾಂಕಿಂಗ್ ವಲಯದಲ್ಲೂ ಸಾಕಷ್ಟು ಸ್ಪರ್ಧೆ ಇದೆ. ಬ್ಯಾಂಕ್ ಆಫ್ ಇಂಡಿಯಾ 120 ವರ್ಷ ಸೇವೆ ಸಲ್ಲಿಸಿದೆ ಎಂದರೆ, ಗ್ರಾಹಕರಿಗೆ ಒಳ್ಳೆಯ ಸೇವೆ ಕೊಟ್ಟಿದ್ದಾರೆಂದೇ ಅರ್ಥ. ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರ ಸ್ನೇಹಿಯಾಗಿದೆ. ಭಾರತದ ಬ್ಯಾಂಕಿಂಗ್ ಮತ್ತು ಫೈನಾನ್ಸಿಯಲ್ ವಲಯದಲ್ಲಿ ಹಣಕಾಸು ವ್ಯವಸ್ಥೆ ಒಳ್ಳೆಯ ಅಭಿವೃದ್ಧಿ ಆಗುತ್ತದೆ. ದಿನ ಕಳೆದಂತೆ ಸೈಬರ್ ಕಾಟ ಹೆಚ್ಚಾಗುತ್ತಿದ್ದು, ಗ್ರಾಹಕರು ಕೂಡ ಸೈಬರ್ ವಂಚಕರ ಬಗ್ಗೆ ಹೆಚ್ಚು ಜಾಗೃತಿ ಹೊಂದಿರಬೇಕು. ಬ್ಯಾಂಕಿಗೆ ಬರುವ ಗ್ರಾಹಕರಿಗೆ ಸಾಕಷ್ಟು ಅವಕಾಶವನ್ನು ಸಿಬ್ಬಂದಿಗಳು ಕೊಡಬೇಕು. ಗ್ರಾಹಕರಲ್ಲಿ ನಂಬಿಕೆ ಬರುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಗ್ರಾಹಕರನ್ನು ಅಲೆದಾಡಿಸದಂತೆ, ಈ ಭಾಗದ ಜನರಿಗೆ ಹೆಚ್ಚಿನ ಸೌಲಭ್ಯವನ್ನು ಬ್ಯಾಂಕ್ ಒದಗಿಸಬೇಕು ಎಂದರು. ಬ್ಯಾಂಕ್ ಆಫ್ ಇಂಡಿಯಾದ ಹಾವೇರಿ ಶಾಖೆಯ ಹಿರಿಯ ವ್ಯವಸ್ಥಾಪಕ ವಿಜಯಶೇಖರ ವೈ.ಬಿ. ಮಾತನಾಡಿ, ಜಿಲ್ಲೆಯ ಗ್ರಾಹಕರ ಸಹಕಾರ ಬ್ಯಾಂಕಿನ ಜತೆಗೆ ಹೀಗೆ ಮುಂದುವರೆಯಬೇಕು. 120 ವರ್ಷಗಳ ಇತಿಹಾಸ ಹೊಂದಿರುವ ಬ್ಯಾಂಕ್ ಪ್ರಬುದ್ಧತೆಯನ್ನು ಹೊಂದಿದೆ. ಗ್ರಾಹಕರ ಸಮಸ್ಯೆ, ನ್ಯೂನತೆ ಇಲ್ಲದೆ ಸಾರ್ವಜನಿಕರ ಸೇವೆ ಮಾಡುತ್ತಿದೆ. ಶಿಕ್ಷಣ ಸಾಲ, ಗೃಹ ಸಾಲ ಹೀಗೆ ಸಾಲ ಸೌಲಭ್ಯ ಕೊಡುತ್ತಿದೆ. ಬ್ಯಾಂಕಿನ ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು. ಈ ವೇಳೆ ಹುಬ್ಬಳ್ಳಿ-ಧಾರವಾಡ ಉಪ ವಲಯಾಧಿಕಾರಿ ಅಭಿನವ ಪಾಂಡೆ, ಸಂಘಟನಾ ಕಾರ್ಯದರ್ಶಿ ಶಶಿವರ್ಧನ್, ಪಿ.ಎಂ ಸತ್ಯನಾರಾಯಣ, ಬಿ.ಕೃಷ್ಣ, ರಾಜಕಿಶೋರ ಕಾಟೇನಹಳ್ಳಿ, ಸಿಬ್ಬಂದಿಗಳಾದ ಪ್ರಿಯಾಂಕಾ, ಗಿರೀಶ, ಹರೀಶ ಕಣವಿ, ಮಕ್ಬುಲ್ ಹುಬ್ಬಳ್ಳಿ ಇತರರು ಇದ್ದರು.
ಆರ್ಥಿಕ ವ್ಯವಸ್ಥೆಯಲ್ಲಿ ಬ್ಯಾಂಕಿಂಗ್ ಪಾತ್ರ ಬಹುಮುಖ್ಯ
ಆಧುನಿಕ ಆರ್ಥಿಕ ವ್ಯವಸ್ಥೆಯಲ್ಲಿ ಬ್ಯಾಂಕಿಂಗ್ ಕ್ಷೇತ್ರದ ಪಾತ್ರ ಬಹುಮುಖ್ಯವಾಗಿದೆ. ಬ್ಯಾಂಕಿನ ಬಗ್ಗೆ ಗ್ರಾಹಕರಿಗೆ ನಂಬಿಕೆ ಮತ್ತು ವಿಶ್ವಾಸಾರ್ಹತೆ ಬರಬೇಕಾದರೆ ಉತ್ತಮ ಸೇವೆ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಹೇಳಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.