ಸಾರಾಂಶ
ಪ್ರಾಚೀನ ಕಾಲದಲ್ಲಿ ಕಲ್ಲಿನ ಮೇಲೆ, ತಾಡೋಲೆ ಮೇಲೆ, ಮಣ್ಣಿನ ಮೇಲೆ ಬರೆಯುವುದನ್ನು ಕೇಳಿದ್ದೇವೆ. ಇದನ್ನು ಕ್ರಮಬದ್ಧವಾಗಿ ಗ್ರಂಥಾಲಯ ವಿಜ್ಞಾನದಲ್ಲಿ ಹೊಸ ರೂಪ ಕೊಟ್ಟು, ಗ್ರಂಥಗಳನ್ನು ಕ್ಯಾಟಲಾಗ್‌ಗಳ ಮೂಲಕ ಇಡೀ ಭಾರತದಲ್ಲಿ ಸಂಚಲನ ಮೂಡಿಸಿದವರು ಪದ್ಮಶ್ರೀ ಡಾ. ಎಸ್.ಆರ್. ರಂಗನಾಥನ್.
ಧಾರವಾಡ:
ನಾಗರಿಕತೆ ಬೆಳೆಸುವಲ್ಲಿ ಪುಸ್ತಕದ ಪಾತ್ರ ಅಪಾರವಿದೆ. ಅದು ಬೌದ್ಧಿಕ ಹಕ್ಕು ಹೊಂದಿರುವ ತೆರೆಮರೆಯಲ್ಲಿ ಅವಿಶ್ರಾಂತವಾಗಿ ಪುಸ್ತಕೋದ್ಯಮದಲ್ಲಿ ಶ್ರಮಿಸಿದವರಲ್ಲಿ ಗ್ರಂಥಪಾಲಕರ ಸೇವೆ ಅದ್ವಿತೀಯ ಎಂದು ಆಕಾಶವಾಣಿ ವಿಶ್ರಾಂತ ನಿರ್ದೇಶಕ ಡಾ. ಬಸು ಬೇವಿನಗಿಡದ ಹೇಳಿದರು.ಕರ್ನಾಟಕ ವಿದ್ಯಾವರ್ಧಕ ಸಂಘವು ದಿ. ಪಾರ್ವತೆಮ್ಮ ಹೊಂಬಳ ದತ್ತಿ ಅಂಗವಾಗಿ ಆಯೋಜಿಸಿದ್ದ ‘ಗ್ರಂಥಪಾಲಕರ ದಿನಾಚರಣೆ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಗ್ರಂಥಗಳು ಜೀವನದ ಕನ್ನಡಿ’ ವಿಷಯ ಕುರಿತು ಉಪನ್ಯಾಸ ನೀಡಿದ ಅವರು, ಪ್ರಾಚೀನ ಕಾಲದಲ್ಲಿ ಕಲ್ಲಿನ ಮೇಲೆ, ತಾಡೋಲೆ ಮೇಲೆ, ಮಣ್ಣಿನ ಮೇಲೆ ಬರೆಯುವುದನ್ನು ಕೇಳಿದ್ದೇವೆ. ಇದನ್ನು ಕ್ರಮಬದ್ಧವಾಗಿ ಗ್ರಂಥಾಲಯ ವಿಜ್ಞಾನದಲ್ಲಿ ಹೊಸ ರೂಪ ಕೊಟ್ಟು, ಗ್ರಂಥಗಳನ್ನು ಕ್ಯಾಟಲಾಗ್‌ಗಳ ಮೂಲಕ ಇಡೀ ಭಾರತದಲ್ಲಿ ಸಂಚಲನ ಮೂಡಿಸಿದವರು ಪದ್ಮಶ್ರೀ ಡಾ. ಎಸ್.ಆರ್. ರಂಗನಾಥನ್ ಎಂದರು.
ಡಾ. ಬಸು ಬೇವಿನಗಿಡದ ಸೇರಿದಂತೆ ಮುಂಬೈ ವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ. ಎಸ್.ಕೆ. ಸವಣೂರ ಮತ್ತು ಆಕಾಶವಾಣಿಯ ಗ್ರಂಥಾಲಯಾಧಿಕಾರಿ ಕೆ. ಶಿವರಾಜ ಅವರನ್ನು ಸನ್ಮಾನಿಸಲಾಯಿತು. ದತ್ತಿದಾನಿ ಜಿ.ಬಿ. ಹೊಂಬಳ ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಮಾತನಾಡಿದರು. ಡಾ. ಮಹೇಶ ಧ. ಹೊರಕೇರಿ ಸ್ವಾಗತಿಸಿದರು. ವೀರಣ್ಣ ಒಡ್ಡೀನ ಪ್ರಾಸ್ತಾವಿಕ ಮಾತನಾಡಿದರು. ಗುರು ಹಿರೇಮಠ ನಿರೂಪಿಸಿದರು. ಡಾ. ಜಿನದತ್ತ ಹಡಗಲಿ ಸನ್ಮಾನ ಪತ್ರ ಓದಿದರು ಮತ್ತು ವಂದಿಸಿದರು.